ಜಿಲ್ಲೆ

ಏಳು ನಾಗಸಾಧುಗಳಿಗೆ ಲಿಂಗಧಾರಣೆ

ಚಿತ್ರದುರ್ಗ:ಮುರುಘಾಮಠದ ಶರಣ ಸಂಸ್ಕೃತಿ ಉತ್ಸವ ಪ್ರಯುಕ್ತ ಶನಿವಾರ ಸಹಜ ಶಿವಯೋಗ ಕಾರ್ಯಕ್ರಮದಲ್ಲಿ ಏಳುನಾಗ ಸಾಧುಗಳಿಗೆ ಲಿಂಗಧಾರಣೆ  ಮಾಡಿಸಲಾಯಿತು.

ಶಿವಯೋಗದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟ ಗುರುಮಠಕಲ್ ಖಾಸಾ ಶ್ರೀ ಮುರುಘಾಮಠದ ಶ್ರೀ ಶಾಂತವೀರ ಮುರುಘ ರಾಜೇಂದ್ರ ಸ್ವಾಮೀಜಿ ಸಾಧುಗಳಿಗೆ ಲಿಂಗಧಾರಣೆ ನೆರವೇರಿಸಿ ಮಾತನಾಡಿ, ಮನುಷ್ಯನ ಆಂತರಿಕ ಬದಲಾವಣೆ, ಕಾಯಕದಲ್ಲಿ ತೊಡಗಲು ಸಹಜ ಶಿವಯೋಗ ಸಹಾಯಕವಾಗುತ್ತದೆ ಎಂದರು.

ಡಾ.ಶ್ರೀ ಬಸವಕುಮಾರ ಸ್ವಾಮೀಜಿ, ಶಿವಮೂರ್ತಿ ಮುರುಘ ರಾಜೇಂದ್ರ ಸ್ವಾಮೀಜಿ, ಶ್ರೀ ಗುರುಲಿಂಗ ಸ್ವಾಮೀಜಿ, ಶ್ರೀ ಬಸವ ಮಲ್ಲಿ ಕಾರ್ಜುನ ಸ್ವಾಮೀಜಿ, ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಶ್ರೀ ಗುರುಬಸವ ಸ್ವಾಮೀಜಿ, ಶ್ರೀ ಜಯದೇವ ಸ್ವಾಮೀಜಿ, ಶ್ರೀ ಗುರುಬಸವ ಸ್ವಾಮೀಜಿ ಹಾಗೂ ಪ್ರಹ್ಲಾದ್, ವೀರೇಶ್ ಇದ್ದರು.

ಉಮೇಶ್ ಪತ್ತಾರ್ ಸಂಗಡಿಗರು ಪ್ರಾರ್ಥಿಸಿ, ಸಿ.ಎಂ. ಚಂದ್ರಪ್ಪ ಸ್ವಾಗತಿಸಿ, ಪಿ.ಟಿ. ಜ್ಞಾನಮೂರ್ತಿ ನಿರೂಪಿಸಿದರು.

ನಗು ಸಾವಿರ ಔಷಧಗಳಿಗೆ ಸಮ: ಶರಣ ಸಂಸ್ಕೃತಿ ಉತ್ಸವದ ಯೋಗ-ಆಧ್ಯಾತ್ಮ ಕುರಿತ 8ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗ ಗುರು ಚನ್ನಬಸವಣ್ಣ, ಮನಸ್ಸಿನ ಎಲ್ಲ ಆಲೋಚನೆಗಳನ್ನು ಹೊರ ಹಾಕಿ ಕೇವಲ ಯೋಗದ ಮೇಲೆ ಮಾತ್ರ ಗಮನವಿರಿಸಬೇಕು. ನಗು ಸಾವಿರ ಔಷಧಿಗಳಿಗೆ ಸಮ ಎಂದರು.

ಡಾ. ಬಸವಕುಮಾರ ಸ್ವಾಮೀಜಿ, ಯೋಗಗರು ಚಿನ್ಮಯಾನಂದ, ಪ್ರಸನ್ನ ಕುಮಾರ್, ಬಸವರಾಜಪ್ಪ ಇತರರು ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು.

ಶ್ರೀಮಠದ ಅನುಭವ ಮಂಟಪದಲ್ಲಿ ಸೆ.28ರಂದು ಬೆಳಗ್ಗೆ 10.30ಕ್ಕೆ ವಚನ ಝೆಂಕಾರ, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ಸಂವಾದ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. 5000 ಶರಣ,ಶರಣೆಯರು ಏಕಕಾಲದಲ್ಲಿ ವಚನಗಾಯನದಲ್ಲಿ ಪಾಲ್ಗೊಳ್ಳುವರು. ಸಾನ್ನಿಧ್ಯ ವಹಿಸಲಿರುವ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಂವಾದ ನಡೆಸಿಕೊಡುವರು. ನಾನಾ ಮಠಾಧೀಶರು ಸಮ್ಮುಖ ವಹಿಸುವರು. ಗಣ್ಯರು ಉಪಸ್ಥಿತರಿರುವರು.

ಬಸವ ಸಂಸ್ಕೃತಿ ಅಭಿಯಾನ: ನಗರದಲ್ಲಿ ಸೆ.28ರಂದು ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಸಂಜೆ 4 ಕ್ಕೆ ನಗರದ ಶ್ರೀ ನೀಲಕಂಠೇಶ್ವರ ದೇವಾಲಯದಿಂದ ಆರಂಭವಾಗುವ ಪಾದಯಾತ್ರೆ, ಗಾಂಧಿ ವೃತ್ತ, ಬಿ.ಡಿ. ರಸ್ತೆ,ಪ್ರವಾಸಿ ಮಂದಿರ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಮದಕರಿನಾಯಕ ವೃತ್ತದ ಮೂಲಕ ಸಾಗಿ ಒನಕೆ ಓಬವ್ವ ವೃತ್ತದಲ್ಲಿ ಸಮಾಪನಗೊಳ್ಳಲಿದೆ. ಎಂಎಲ್‌ಸಿ ಕೆ.ಎಸ್. ನವೀನ್ ಯಾತ್ರೆ ಉದ್ಘಾಟಿಸುವರು.

ಸಂಜೆ 6ಕ್ಕೆ ಅನುಭವ ಮಂಟಪದಲ್ಲಿ ಅಭಿಯಾನದ ಕಾರ್ಯಕ್ರಮದಲ್ಲಿ ಗದಗ ಶ್ರೀ ತೋಂಟದಾರ್ಯ ಮಠದ ಜಗದ್ಗುರು ಸಿದ್ದರಾಮ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಶ್ರೀ ಬಸವಲಿಂಗಪಟ್ಟದೇವರು, ಸಾಣೇಹಳ್ಳಿ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ, ಲಾಳನಹಳ್ಳಿ ಗುರು ಮಲ್ಲೇಶ್ವರ ದಾಸೋಹ ಮಠದ ಜಯದೇವತಾಯಿ ಸಮ್ಮುಖ ವಹಿಸುವವರು. ಸಚಿವ ಈಶ್ವರಖಂಡ್ರೆ ಇನ್ನಿತರ ಗಣ್ಯರು ಉ ಪಸ್ಥಿತರಿರುವರು. ಸಾಣೇಹಳ್ಳಿ ಶ್ರೀ ರಚಿತ, ಆರ್. ಜಗದೀಶ್ ಸಂಗೀತ ನಿರ್ದೇಶನದಲ್ಲಿ ಶಿವ ಸಂಚಾರ ತಂಡದ ಕಲಾವಿದರು. ಜಂಗಮದೆಡೆಗೆ ನಾಟಕ ಪ್ರದರ್ಶಿಸಲಿದ್ದಾರೆ.

ಶರಣರ ಆದರ್ಶಗಳು ಬದುಕಿಗೆ ಪ್ರೇರಣೆ:

ಉತ್ಸವದ ಅಂಗವಾಗಿ ಶ್ರೀ ಮುರಿಗೆ ಶಾಂತವೀರ ಸ್ವಾಮೀಜಿ ಕೃತಿಗಳ ಕುರಿತ ವಿಚಾರ ಸಂಕಿರಣದ ಗೋಷ್ಠಿ-3 ಹಾಗೂ ಸಮಾರೋಪ ಶನಿವಾರ ಜರುಗಿತು.

ಸಮ್ಮುಖ ವಹಿಸಿದ್ದ ಶ್ರೀ ಮಡಿವಾಳ ಮಾಚಿದೇವ ಗುರುಪೀಠದ ಜಗದ್ಗುರು ಶ್ರೀ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ಸಮಸಮಾಜದ ಪರಿಕಲ್ಪನೆ, ತತ್ತ್ವಸಿದ್ಧಾಂತಗಳು ನಮ್ಮ ಬದುಕಿಗೆ ಪ್ರೇರಣೆಯಾಗಿವೆ. ಮುರಿಗಿ ಶ್ರೀಗಳು ಹತ್ತಾರು ವೈವಿಧ್ಯಪೂರ್ಣ ಕೃತಿಗಳನ್ನು ರಚಿಸಿದ್ದಾರೆ ಎಂದರು.

ಸಮಾರೋಪ ನುಡಿಗಳನ್ನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎ. ಮುರಿಗೆಪ್ಪ, ರಾಜ್ಯದ ಮಠಗಳಲ್ಲಿ ಮುರುಘಾಮಠ ಅತ್ಯಂತ ವೈಶಿಷ್ಟೃ ಪೂರ್ಣವಾದದ್ದಾಗಿದೆ. ಅನ್ನ, ಅಕ್ಷರ, ಜ್ಞಾನ ಹೀಗೆ ತ್ರಿವಿಧ ದಾಸೋಹ ಮತ್ತು ವಸತಿಗಳನ್ನು ಸ್ಥಾಪಿಸುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯದಲ್ಲಿ ತೊಡಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ, ಬೆಂಗಳೂರಿನ ಸಾಹಿತಿ ಡಾ.ಸಿ.ವಿ. ಮಂಜುನಾಥ, ವಿದ್ವಾಂಸ ಡಾ.ಸಿ. ನಾಗಭೂಷಣ, ಸಂಸ್ಕೃತ ವಿದ್ವಾಂಸ ಡಾ.ಸಿ. ಶಿವಕುಮಾರ ಸ್ವಾಮೀಜಿ, ಕರ್ನಾಟಕ ಇತಿಹಾಸ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಕೆ.ಎಲ್.ರಾಜಶೇಖರ್ ಮಾತಾನಾಡಿದರು. ಡಾ. ಬಸವಕುಮಾರ ಸ್ವಾಮೀಜಿ, ಡಾ.ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಹರಗುರು ಚರಮೂರ್ತಿಗಳು ಇದ್ದರು.

ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಬಸವ ಮಹಾಂತ ಸ್ವಾಮೀಜಿ ಸ್ವಾಗತಿಸಿ, ನವೀನ್ ಮಸ್ಕಲ್ ನಿರೂಪಿಸಿದರು.

----