ಜಿಲ್ಲೆ

ಏಳು ಕ್ಷೇತ್ರಗಳ ಗೆಲುವಿಗೆ ಶ್ರಮಿಸಿ; ಕಾರ್ಯಕರ್ತರಿಗೆ ಸಚಿವ ಜಾರ್ಜ್ ಮನವಿ

ಹಾಸನ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲು ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಚಿವರು, ಸ್ಥಳೀಯ ಜನಪ್ರತಿನಿಧಿಗಳು, ಪರಾಜಿತ ಅಭ್ಯರ್ಥಿಗಳು, ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಶುಕ್ರವಾರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಅತ್ಯಂತ ಫಲಪ್ರದವಾಗಿವೆ. ಕರ್ನಾಟಕ ಅತಿಹೆಚ್ಚು ಜಿಎಸ್‌ಟಿ ತೆರಿಗೆ ಕಟ್ಟುತ್ತಿರುವ ದೇಶದ ಎರಡನೇ ರಾಜ್ಯವಾಗಿ ಹೊರ ಹೊಮ್ಮಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ಸದೃಢವಾಗಿದ್ದು, ಕಾರ್ಯಕರ್ತರು ಮುತುವರ್ಜಿಯಿಂದ ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕೆಂದು ಮಾರ್ಗದರ್ಶನ ನೀಡಿದರು.

ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಸಚಿವರ ಮಾರ್ಗದರ್ಶನದಲ್ಲಿ ನಮ್ಮ ಸರ್ಕಾರದ ಸಾಧನೆಗಳನ್ನು ಜನರ ಮುಂದಿಟ್ಟು ಪಕ್ಷ ಸಂಘಟನೆ ಮಾಡೋಣ, ಹೆಚ್ಚು ಹೆಚ್ಚು ಸ್ಥಾನಗಳನ್ನು ಜಯಿಸುವ ನಿಟ್ಟಿನಲ್ಲಿ ಶ್ರಮಿಸೋಣ ಎಂದರು.

ಸಭೆಯಲ್ಲಿ ಅರಸೀಕೆರೆ ಶಾಸಕ ಹಾಗೂ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಪರಾಜಿತ ಅಭ್ಯರ್ಥಿ ಬನವಾಸೆ ರಂಗಸ್ವಾಮಿ, ರಘು ದಾಸರಕೊಪ್ಪಲು, ಮಂಜುನಾಥ್ ಶರ್ಮಾ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಇದ್ದರು.