ರಾಯಚೂರು: ಹಿಂದುಳಿದ ರಾಯಚೂರಿನಲ್ಲಿ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸ್ಥಾಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಆರೋಗ್ಯ ಖಾತೆ ಸಚಿವ ಮನ್ಸುಖ್ ಮಾಂಡವಿಯಾಗೆ ಸೆ.7ರಂದು ಎರಡನೇ ಪತ್ರ ಬರೆಯುವ ಮೂಲಕ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ಮೂರು ತಿಂಗಳ ಹಿಂದೆ ಕೇಂದ್ರ ಆರೋಗ್ಯ ಸಚಿವರಿಗೆ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡುವಂತೆ ಪತ್ರ ಬರೆದು ಒತ್ತಾಯಿಸಿದ್ದು, ಎರಡನೇ ಪತ್ರವನ್ನು ಬರೆದು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಬೇಕಾದ ಅಗತ್ಯ ಸಹಕಾರ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದಾರೆ.
ರಾಯಚೂರು ಜಿಲ್ಲೆಗೆ 371ಜೆ ಅಡಿ ವಿಶೇಷ ಸ್ಥಾನಮಾನ ನೀಡಲಾಗಿದ್ದು, ಕೇಂದ್ರ ಸರ್ಕಾರವೂ ಮಹತ್ವಾಕಾಂಕ್ಷಿ ಜಿಲ್ಲೆಯನ್ನಾಗಿ ಗುರುತಿಸಿದೆ. ಏಮ್ಸ್ ಸ್ಥಾಪಿಸುವ ಮೂಲಕ ಹಿಂದುಳಿದ ರಾಯಚೂರು ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರವನ್ನು ಸುಧಾರಿಸಲು ಸಹಕಾರ ನೀಡುವಂತೆ ಕೋರಿದ್ದಾರೆ.
ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಎನ್.ಎಸ್.ಬೋಸರಾಜು, ಕೇಂದ್ರ ಸಚಿವ ಭಗವಂತ ಖುಬಾ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಂಸದರು, ಶಾಸಕರು ಮತ್ತು ಹೋರಾಟಗಾರರ ನಿಯೋಗ ಆ.22ರಂದು ಭೇಟಿಯಾದಾಗ ನೀವು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಒಪ್ಪಿಗೆ ನೀಡಿರುವುದು ಸಂತಸದ ವಿಷಯವಾಗಿದ್ದು, ಆದಷ್ಟು ಬೇಗ ಏಮ್ಸ್ ಮಂಜೂರಿಗೆ ಕ್ರಮಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಒತ್ತಾಯಿಸಿದ್ದಾರೆ.