ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಎಲ್ಲ ಗ್ರಾಮೀಣ ಕುಟುಂಬಗಳಿಗೆ 2014ರ ವೇಳೆಯೊಳಗೆ ಕೊಳವೆ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆಗೆ ಹಸಿರು ನಿಶಾನೆ ದೊರೆತಿದ್ದು, ಗ್ರಾಮಾಂತರ ಜಿಲ್ಲೆಯಲ್ಲಿ ಏಪ್ರಿಲ್ ಅಂತ್ಯಕ್ಕೆ ಯೋಜನೆ ಸಾಕಾರಗೊಳಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಸಿದ್ಧತೆ ನಡೆಸಿದೆ.
ಜಲಜೀವನ್ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಬರಪೀಡಿತ ಎಂಬ ಹಣೆಪಟ್ಟಿ ಹೊತ್ತಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಗ್ರಾಮೀಣ ಕುಟುಂಬದ ಕುಡಿಯುವ ನೀರಿನ ಬವಣೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.
ಟೆಂಡರ್ ಪ್ರಕ್ರಿಯೆ: ಜಲಜೀವನ್ ಮಿಷನ್‌ಅಡಿ ಕೊಳವೆ ಮೂಲಕ ಮನೆಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಸಂಬಂಧ ಜಿಲ್ಲೆಯ 619 ಗ್ರಾಮಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ, ಡಿಪಿಆರ್ ಸಿದ್ಧವಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಮಾರ್ಚ್‌ನಲ್ಲಿ ಕಾರ್ಯಕ್ರಮ ಆರಂಭವಾಗಲಿದ್ದು, ಏಪ್ರಿಲ್ ಅಂತ್ಯ ಅಥವಾ ಮೇ ತಿಂಗಳಲ್ಲಿ ಯೋಜನೆಯ ಪ್ರಾಥಮಿಕ ಹಂತದಡಿ ನೀರು ಪೂರೈಕೆಯಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ 246 ಗ್ರಾಮಗಳಲ್ಲಿ ಪ್ರಾಥಮಿಕ ಹಂತದಲ್ಲಿ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆದಿದ್ದು, ಈಗಾಗಲೇ 120 ಗ್ರಾಮಗಳ ಸರ್ವೇ ಕಾರ್ಯ ಪೂರ್ಣಗೊಂಡಿದೆ ಎಂದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ನೀರಿನ ಸೆಲೆಗೆ ಹುಡುಕಾಟ: ಈ ಯೋಜನೆಯಡಿ ಕೊಳವೆಬಾವಿಗಳು ಪ್ರಮುಖ ಜಲಮೂಲವಾಗಿದ್ದು, ಐದಾರು ವರ್ಷದಿಂದ ಕೆರೆತುಂಬಿರುವ ಹಾಗೂ ಮಳೆಗಾಲದಲ್ಲಿ ಕೆರೆತುಂಬಿ ನೀರು ಶೇಖರಣೆಯಾಗುವ ಜತೆಗೆ ಕೆರೆ ಸುತ್ತಮುತ್ತಲ ಪ್ರದೇಶದಲ್ಲಿ ಕೊರೆವ ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟ ಉತ್ತಮವಾಗಿರುವ ಕಡೆಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಇದಕ್ಕಾಗಿ ಅಧಿಕಾರಿಗಳು ನಾಲ್ಕೂ ತಾಲೂಕಿನ ಅಷ್ಟೂ ಗ್ರಾಮಗಳಲ್ಲಿ ಸರ್ವೇ ಕಾರ್ಯ ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಕೆಲವೊಂದು ಕೆರೆಗಳು ತುಂಬಿ ಕೋಡಿ ಬೀಳುತ್ತಿವೆ. ಇಂಥ ಕೆರೆಗಳನ್ನು ಆಯ್ಕೆ ಮಾಡಿ ನೈಸರ್ಗಿಕ ಮಳೆನೀರನ್ನು ಶುದ್ಧೀಕರಿಸಿ ಕುಡಿಯಲು ಯೋಗ್ಯವಾಗುವಂಥ ನೀರನ್ನಾಗಿ ಮಾರ್ಪಡಿಸಿ ಪೈಪ್‌ಲೈನ್ ಮೂಲಕ ಮನೆಮನೆಗೆ ತಲುಪಿಸುವ ಯೋಜನೆ ಇದಾಗಿದೆ.
ಶಾಶ್ವತ ನೀರಾವರಿ ವರದಾನ: ಏತ ನೀರಾವರಿ ಯೋಜನೆ ಮೂಲಕ ಜಿಲ್ಲೆಯ ಕೆಲ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಬಿರುಸುಗೊಂಡಿದೆ. ಇಂಥ ಕೆರೆಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಕೊಳವೆಬಾವಿಗಳಿಂದ ನೀರನ್ನು ಪಡೆದು ಶುದ್ಧಿಕರಿಸಿ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಪೂರೈಸಲು ಅನುಕೂಲವಾಗಲಿದೆ. ವರ್ಷಪೂರ್ತಿ ಕೆರೆ ತುಂಬಿರುವುದರಿಂದ ಬೋರ್‌ವೆಲ್‌ಗಳಲ್ಲಿ ಅಂತರ್ಜಲಮಟ್ಟ ಉತ್ತಮವಾಗಿರುತ್ತದೆ. ವರ್ಷಪೂರ್ತಿ ಮನೆಮನೆಗಳಿಗೆ ಶುದ್ಧ ಕುಡಿವ ನೀರು ಪೂರೈಸಲು ಸಹಕಾರಿಯಾಗುತ್ತದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರದಿಂದ ಪ್ರಸ್ತುತ 619 ಗ್ರಾಮಗಳಿಗೆ ಅನುಮೋದನೆ ದೊರೆತಿದ್ದು, 246 ಗ್ರಾಮಗಳನ್ನು ಗುರುತಿಸಲಾಗಿದೆ, ಈಗಾಗಲೇ 120 ಗ್ರಾಮಗಳ ಸರ್ವೇ ಮುಗಿದಿದ್ದು, ಸರ್ಕಾರದಿಂದ 260 ಕೋಟಿ ರೂ. ಬಿಡುಗಡೆಯಾಗಿದೆ. ಏಪ್ರಿಲ್ ಅಂತ್ಯದಲ್ಲಿ ಯೋಜನೆ ಕಾರ್ಯಗತವಾಗಲಿದೆ. ಸವಿತಾ, ಕಾರ್ಯಪಾಲಕ ಅಭಿಯಂತೆ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂ.ಗ್ರಾಮಾಂತರ