ಜಿಲ್ಲೆ

ಏಪ್ರಿಲ್ 12ರಿಂದ ಕತಕನಹಳ್ಳಿ ಸದಾಶಿವನ ಜಾತ್ರೆ.

ವಿಜಯಪುರ: ಕಳೆದ ವರ್ಷ ಕರೊನಾ ಉಪಟಳದಿಂದಾಗಿ ರದ್ದಾಗಿದ್ದ ಸುಕ್ಷೇತ್ರ ಕತಕನಹಳ್ಳಿ ಜಾತ್ರೆ ಈ ಬಾರಿ ನಡೆಯಲಿದೆ. ವಿಜಯಪುರ ತಾಲ್ಲೂಕಿನ ಸುಕ್ಷೇತ್ರ ಕತಕನಹಳ್ಳಿಯಲ್ಲಿ ಬರುವ ಎಪ್ರಿಲ್ 12 ರಿಂದ ಈ ಬಾರಿ ಸರ್ಕಾರಿ ನಿಯಮಾವಳಿಗಳನ್ನು ಪಾಲಿಸಿ ಅರ್ಥಪೂರ್ಣ ವಾಗಿ ಜಾತ್ರಾ ಮಹೋತ್ಸವ ಕೈಗೊಳ್ಳಲು ಭಕ್ತಾದಿಗಳು ನಿರ್ಣಯಿಸಿದ್ದಾರೆ ಎಂದು ಸುಕ್ಷೇತ್ರ ಕತಕನಹಳ್ಳಿಯ ಶ್ರೀ ಶಿವಯ್ಯ ಮಹಾಸ್ವಾಮಿಗಳು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಕಳೆದ ವರ್ಷ ಕರೊನಾ ಹಿನ್ನೆಲೆಯಲ್ಲಿ ಜಾತ್ರೆಯನ್ನು ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತಗೊಳಿಸಲಾಗಿತ್ತು. ಇದು ಸದಾಶಿವನ ಜಾತ್ರೆ ಅಷ್ಟೇ ಅಲ್ಲ ಸದಾಶಿವನ ಸದ್ಭಕ್ತರ ಜಾತ್ರೆ, ಸರ್ಕಾರ ಆದೇಶವೇ ಸದಾಶಿವನ ಸಂದೇಶ ಎಂಬ ಹಿನ್ನೆಲೆಯಲ್ಲಿ ಜಾತೆಯನ್ನು ರದ್ದುಗೊಳಿಸಾಗಿತ್ತು. ಜಾತ್ರೆ, ಮಠ, ಗುರು ಈ ಭಾರತದ ಜನರ ಹಿತಕ್ಕಾಗಿ ಇರಬೇಕು, ಜನ ಹಿತಕ್ಕಾಗಿ ಜಾತ್ರೆ ನಡೆಯಬೇಕು ಹೊರತು ಸ್ವಂತಕ್ಕಲ್ಲ ಎಂದರು. ನಿನ್ನೆ ಸಭೆಯಲ್ಲಿ ಸಭೆ ನಡೆಸಲಾಗಿದೆ, ಎಲ್ಲ ಭಕ್ತರು ನಿರ್ಣಯ ಸ್ವೀಕರಿಸಿದಂತೆ ಜಾತ್ರೆಯನ್ನು ಅದ್ದೂರಿಯಾಗಿ ಮಾಡೋಣ, ಆದರೆ ಸರ್ಕಾರದ ಆದೇಶವನ್ನು ಮೀರದಂತೆ, ಜನರಿಗೆ ತೊಂದರೆಯಾಗದಂತೆ ಸಾಮಾಜಿಕ ಅಂತರ, ಶಿಸ್ತು, ಸ್ವಚ್ಛತೆ, ಮಾಸ್ಕ್ ಮೊದಲಾದ ಅಂಶಗಳನ್ನು ಪಾಲಿಸಿ ಜಾತ್ರಾ ಮಹೋತ್ಸವ ಕೈಗೊಳ್ಳುವಂತೆ ತಿಳಿಸಲಾಗಿದೆ. ಜಾತ್ರೆಗೆ ಬರುವ ಸದ್ಭಕ್ತರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ಸ್ವಯಂ ಸೇವಕರ ರೀತಿ ವಿಶೇಷ ರೀತಿಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು, ಸದಾಶಿವನ ಸಂದೇಶ - ಸರ್ಕಾರದ ಆದೇಶವನ್ನು ಪಾಲಿಸುವುದಾಗಿ ಭಕ್ತಾದಿಗಳು ಭರವಸೆ ನೀಡಿದ್ದಾರೆ ಎಂದು ಶ್ರೀ ಶಿವಯ್ಯ ಮಹಾಸ್ವಾಮಿಗಳು ಹೇಳಿದ್ದಾರೆ. ಇನ್ನೂ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಹಾಗೂ ಶ್ರೀಮಠದ ಸದ್ಭಕ್ತ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಜಾತ್ರಾ ಮಹೋತ್ಸವ ಕುರಿತು ವಿವರಣೆ ನೀಡಿ, ಪ್ರಸಕ್ತ ವರ್ಷ ಸರ್ಕಾರದ ನಿಯಮಾವಳಿ ಅನ್ವಯ ಈ ಬಾರಿ ಜಾತ್ರೆ ಆಯೋಜಿಸಲಾಗುತ್ತಿದೆ. ದನಗಳ ಜಾತ್ರೆ, ಸರಳ ಸಾಮೂಹಿಕ ವಿವಾಹ, ಕೃಷಿ ವಸ್ತು ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ದಿ.12 ರಂದು ಜಾನುವಾರು ಜಾತ್ರೆ ವಿದ್ಯುಕ್ತವಾಗಿ ಆರಂಭಗೊಳ್ಳಲಿದೆ. ಅದೇ ದಿನ ಸಂಜೆ 4ಕ್ಕೆ ಕೆಸರಿನಲ್ಲಿ ಓಟದ ಸ್ಪರ್ಧೆ, ದಿ.13 ರಂದು ಚಾಣಕ್ಯ ಕೆರಿಯರ್ ಅಕಾಡೆಮಿ ನೇತೃತ್ವದಲ್ಲಿ ರಸ ಪ್ರಶ್ನೆ, ದಿ.14 ರಂದು ಬೆಳಿಗ್ಗೆ 9 ಕ್ಕೆ ಪಲ್ಲಕ್ಕಿ ಉತ್ಸವ, ಬೆಳಿಗ್ಗೆ 10 ಕ್ಕೆ ಆರೇತ್ತಿನ ನೇಗಿಲು ಜಗ್ಗುವ ಸ್ಪರ್ಧೆ ನಡೆಯಲಿದೆ. ಅದೇ ದಿನ ಸಂಜೆ ರಥೋತ್ಸವ ವೈಭವದಿಂದ ನಡೆಯಲಿದೆ ಎಂದರು.

ದಿ.15 ರಂದು ಸರಳ ಸಾಮೂಹಿಕ ವಿವಾಹ, ಅದೇ ದಿನ ಮಹಾಪ್ರಸಾದ ನಂತರ ಶ್ರೀಗಳಿಂದ ಕಾಲಜ್ಞಾನದ ಹೇಳಿಕೆಗಳು ನಡೆಯಲಿವೆ. ದಿ.16 ರಂದು ಬೆಳಿಗ್ಗೆ 11 ಕ್ಕೆ ಭಾರ ಎತ್ತುವ ಸ್ಪರ್ಧೆ, ಸಂಜೆ 4 ಕ್ಕೆ ಜಂಗೀ ಕುಸ್ತಿ, ಸಂಜೆ7 ಕ್ಕೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ರಾತ್ರಿ 8ಕ್ಕೆ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ ಎಂದರು. ಈ ಬಾರಿ ಜಾನುವಾರು ಜಾತ್ರೆಗೆ ವಿಶೇಷ ಒತ್ತು ನೀಡಲಾಗಿದೆ, ಸಂಕ್ರಮಣದಲ್ಲಿ ಕರೊನಾ ಹಿನ್ನೆಲೆಯಲ್ಲಿ ಜಾನುವಾರು ಜಾತ್ರೆ ನಡೆದಿಲ್ಲ, ಫಂಡರಪುರ ಜಾತ್ರೆಯೂ ಸಹ ಈ ಬಾರಿ ನಡೆದಿಲ್ಲ. ಹೀಗಾಗಿ ರೈತರಿಗೆ ತೊಂದರೆಯಾಗಿದೆ, ಹೀಗಾಗಿ ಈ ಬಾರಿ ಜಾನುವಾರು ಜಾತ್ರೆಗೆ ವಿಶೇಷ ಒತ್ತು ನೀಡಲಾಗಿದ್ದು, ರಾಸುಗಳಿಗೆ ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ ಸೇರಿದಂತೆ ಎಲ್ಲ ರೀತಿಯಿಂದಲೂ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅಪ್ಪಾಸಾಹೇಬ ಪಟ್ಟಣಶೆಟ್ಟಿ ವಿವರಿಸಿದ್ರು. ಇನ್ನೂ ಇದೇ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಸುಕ್ಷೇತ್ರ ಕತಕನಹಳ್ಳಿ ಮಠಕ್ಕೆ ತನ್ನದೇ ಆದ ಶ್ರೇಷ್ಠ ಆಧ್ಯಾತ್ಮಿಕ ಪರಂಪರೆ ಇದೆ, ರೈತರಿಗೆ ಅನುಕೂಲವಾಗುವ ಕಾರ್ಯಕ್ರಮ, ಕೆಸರಿನ ಓಟದಂತಹ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ, ಸರಳ ಸಾಮೂಹಿಕ ವಿವಾಹ, ಪ್ರವಚನಾಮೃತ ಹೀಗೆ ಅನೇಕ ರೀತಿಯಿಂದಲೂ ಜಾತ್ರೆ ವೈಶಿಷ್ಟ್ಯಗಳು ನಡೆಯುತ್ತಾ ಬಂದಿವೆ ಎಂದು ಯಶವಂತರಾಯಗೌಡ ಪಾಟೀಲ ಹೇಳಿದ್ರು. ಕಳೆದ ವರ್ಷ ಕರೋನಾದಿಂದ ರದ್ದಾಗಿದ್ದ ಜಾತ್ರೆ ಈ ಬಾರಿ ಕೊವಿಡ್ ನಿಯಮಾವಳಿ ಪಾಲಿಸೊ ಜೊತೆಗೆ ಆಚರಿಸುತ್ತಿರುವದು ಭಕ್ತರಲ್ಲಿ ಹರ್ಷ ತಂದಿದೆ.