filter: 101; fileterIntensity: 0.8; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.5057935, 0.3549285);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40; 
ಜಿಲ್ಲೆ

ಏನೇ ಮಾಡಿದರೂ ಕೇಂದ್ರ ಅಧಿಕಾರ ‘ಕೈ’ಗೆಟುಕದು

ಚಿತ್ರದುರ್ಗ: ಅಭಿವೃದ್ಧಿ ವಿರೋಧಿ ಕಾಂಗ್ರೆಸ್ ಕೇಂದ್ರದ ಆಡಳಿತಾವಧಿ ಅನೇಕ ಹಗರಣಗಳಾಗಿವೆ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಾವುದೇ ಆರೋಪಗಳಿಲ್ಲದೆ ಪಾರದರ್ಶಕ ಆಡಳಿತ ನೀಡುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ನಗರದ ಜಗಳೂರು ಮಹಾಲಿಂಗಪ್ಪ ಕಂಫರ್ಟ್ಸ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಪಕ್ಷದ ಸದಸ್ಯತ್ವ ಅಭಿಯಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಇಂಡಿಯನ್ ನ್ಯಾಷನಲ್ ಕಮರ್ಷಿಯಲ್ ಆಗಿರುವ ಕಾಂಗ್ರೆಸ್, ಮುಂದಿನ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ನೆಲ ಕಚ್ಚಲಿದೆ.
ಮತದಾರರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದು, ಬಿಜೆಪಿ ಗೆಲ್ಲಿಸಲಿದ್ದಾರೆ. ಕಾಂಗ್ರೆಸ್‌ನವರದ್ದು ತುಷ್ಟೀಕರಣ ರಾಜಕಾರಣವಾಗಿದ್ದರೆ ಬಿಜೆಪಿಗೆ ಸಮಗ್ರ, ಸರ್ವಜನರ ಅಭಿವೃದ್ಧಿಯೇ ಮುಖ್ಯ. ಕಾಂಗ್ರೆಸ್ ಏನೇ ಮಾಡಿದರೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರದು. ಕೇಂದ್ರದ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರು ವಿದೇಶದಲ್ಲಿ ನೀಡಿರುವ ಹೇಳಿಕೆ ಅವರಿಗೆ ಶೋಭೆ ತರದೆಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ದೇಶ ಪ್ರಗತಿ ಪಥದತ್ತ ಸಾಗಿದೆ. ಕಳೆದ 10 ವರ್ಷಗಳಲ್ಲಿ ಅನೇಕ ರಂಗಗಳಲ್ಲಿ ಪ್ರಗತಿ ಸಾಧಿಸಿದ್ದು, ಮುಂದಿನ ಐದು ವರ್ಷಗಳಲ್ಲಿ 3ನೇ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಲಿದೆ. 25 ಕೋಟಿ ಜನರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ ಎಂದರು.
ಕಾರ‌್ಯಕರ್ತರೇ ಜೀವಾಳವಾಗಿರುವ ಬಿಜೆಪಿ, ಯಾವುದೇ ಕುಟುಂಬ ಆಧಾರಿತ ಪಕ್ಷವಾಗಿಲ್ಲವೆಂದು ಕಾಂಗ್ರೆಸ್ಸನ್ನು ಕುಟುಕಿದ ಅಶೋಕ್, ಬಿಜೆಪಿ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಯಾವುದೇ ಸಬೂಬು ಹೇಳದೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಪ್ರಧಾನಿ ಆಶಯದಂತೆ ಸದಸ್ಯತ್ವ ನೋಂದಣಿಯಲ್ಲಿ ನಿಗದಿತ ಗುರಿ ಸಾಧಿಸಬೇಕೆಂದರು.
ಪ್ರಪಂಚದಲ್ಲೇ ಬಿಜೆಪಿ ಹೆಚ್ಚಿನ ಸದಸ್ಯರನ್ನು ಹೊಂದಿರುವ ದೊಡ್ಡ ಪಕ್ಷವಾಗಿದೆ. ಕಳೆದ ಬಾರಿಯ 18 ಕೋಟಿ ಸದಸ್ಯತ್ವ ಸಂಖ್ಯೆ ಗುರಿಯನ್ನು 25 ಕೋಟಿಗೆ ಏರಿಸಲಾಗಿದೆ. ರಾಜ್ಯದಲ್ಲಿ ಈ ಬಾರಿ ಒಂದು ಕೋಟಿ ಸದಸ್ಯತ್ವ ಗುರಿ ತಲುಪಬೇಕಿದೆ ಎಂದರು.
ಎಂಎಲ್‌ಸಿಗಳಾದ ಕೆ.ಎಸ್. ನವೀನ್, ಚಿದಾನಂದಗೌಡ, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಗಾಯತ್ರಿ ಸಿದ್ದೇಶ್ವರ್, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ, ಪಕ್ಷದ ಜಿಲ್ಲಾಧ್ಯಕ್ಷರಾದ ಎ. ಮುರಳಿ, ಹನುಮಂತೇಗೌಡ, ರಾಜಶೇಖರ್ ಹಾಗೂ ನಂದೀಶ್‌ರೆಡ್ಡಿ, ಶಿವಕುಮಾರ್, ನಾಗರಾಜ್ ಲೋಕಿಕೆರೆ, ಕೆ.ಟಿ. ಕುಮಾರಸ್ವಾಮಿ, ಸುರೇಶ್‌ಸಿದ್ದಾಪುರ, ಬಸವರಾಜನಾಯ್ಕ, ಯಶವಂತರಾವ್‌ಜಾಧವ್, ವೀರೇಶ್ ಹನಗವಾಡಿ,ಲಕ್ಷ್ಮೀ ಕಾಂತ್, ಸಂಪತ್‌ಕುಮಾರ್ ಮತ್ತಿತರರು ಇದ್ದರು.

ಚಾಮುಂಡೇಶ್ವರಿಗೆ ಸಿದ್ದು ಸರ್ಕಾರದಿಂದ ಅವಮಾನ
ಈ ಬಾರಿಯ ದಸರಾ ಉದ್ಘಾಟನಾ ಸಮಾರಂಭವನ್ನು ರಾಜಕೀಯಗೊಳಿಸಿರುವ ಸಿದ್ದರಾಮಯ್ಯ ಸರ್ಕಾರ, ತಾಯಿ ಚಾಮುಂಡೇಶ್ವರಿ ದೇವಿಗೆ ಅವಮಾನ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಬೇಸರ ವ್ಯಕ್ತಪಡಿಸಿದರು.
ಚಿತ್ರದುರ್ಗ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಡಹಬ್ಬದ ಪರಂಪರೆ, ವಿಜಯನಗರ, ಮೈಸೂರು ಅರಸರ ಕೊಡುಗೆ ಕುರಿತಂತೆ ಮಾತನಾಡುವ ಈ ದಸರಾದಲ್ಲಿ ಸರ್ಕಾರ ಹೊಸ ಪರಂಪರೆಗೆ ನಾಂದಿ ಹಾಡಿದೆ. ಇದನ್ನೇ ಮುಂದೆ ಅಧಿಕಾರಕ್ಕೆ ಬರುವ ಪಕ್ಷಗಳು ಮುಂದುವರಿಸಿದ್ದೇ ಆದರೆ ತಾಯಿ ಆರಾಧನೆಗೆ ಧಕ್ಕೆ ಆಗಲಿದೆ. ಈ ಸರ್ಕಾರಕ್ಕೆ ಚಾಮುಂಡೇಶ್ವರಿ ದೇವಿ ಶಿಕ್ಷೆ ಕೊಡುತ್ತಾಳೆ ಎಂದರು.
ದಸರಾ ಉದ್ಘಾಟಿಸಿದವರು ಕೇಂದ್ರದ ವಿರುದ್ಧವೂ ಮಾತನಾಡಿದ್ದಾರೆಂದು ಡಾ.ಹಂಪ ನಾಗರಾಜಯ್ಯ ವಿರುದ್ಧ ಆಕ್ರೋಶ ಹೊರಹಾಕಿದರು.
ಹಣ, ಅಂತಸ್ತು, ಅಧಿಕಾರ ಇದ್ದಾಗ ಬಾಯಿಗೆ ಬಂದಂತೆ ಮಾತನಾಡುವವರಿಗೆ ಅವರ ಮಟ್ಟಕ್ಕೆ ಇಳಿದು ಉತ್ತರ ಕೊಡುವುದಿಲ್ಲವೆಂದು ಸಚಿವ ಎನ್.ಎಸ್. ಬೋಸರಾಜು ಹೇಳಿಕೆಗೆ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಸರ್ಕಾರದ ಪಾಪದ ಕೊಡ ತುಂಬಿ ಕುಸಿಯಲಿದೆ. ನಾವು ಮತ್ತೆ ಗೆದ್ದು ಅಧಿಕಾರಕ್ಕೆ ಬರಲಿದ್ದೇವೆ. ಹಿಂದಿನ ಚುನಾವಣೆಯಲ್ಲಿ ನಮ್ಮನ್ನು ಜನರು ತಿರಸ್ಕರಿಸಿ,ಅಭಿವೃದ್ಧಿ ಮಾಡುವಂತೆ ಕಾಂಗ್ರೆಸ್ಸಿಗೆ ಅಧಿಕಾರ ಕೊಟ್ಟಿದ್ದಾರೆ. ಆದರೆ 16 ತಿಂಗಳಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ರಾಜ್ಯದಲ್ಲಿ ಆಗಿಲ್ಲ.
ಸಿದ್ದರಾಮಯ್ಯ ವಿರುದ್ಧವೇ ಮಸಲತ್ತು ನಡೆದಿದೆ. ದಾಖಲೆಗಳನ್ನು ಅವರ ಪಕ್ಷದವರೇ ಕೊಟ್ಟು, ಅವರಿಗೆ ಖೆಡ್ಡಾ ತೋಡುತ್ತಿದ್ದಾರೆ. ಸ್ವತಃ ಸಿದ್ದರಾಮಯ್ಯ ಅವರೇ ಸಂಗೊಳ್ಳಿ ರಾಯಣ್ಣನಿಗೆ ಆದ ಅನ್ಯಾಯ ಪ್ರಸ್ತಾಪಿಸಿದ್ದಾರೆ. ಅವರ ಸಂಪುಟದ ಮಂತ್ರಿಗಳೇ ಅನೇಕರು ಸಿಎಂ ಗಾದಿಗೆ ಟವೆಲ್ ಹಾಕಿದ್ದಾರೆ ಎಂದರು.
ಜಾತಿ ಗಣತಿ ವರದಿ ಬಿಡುಗಡೆಗೆ ವಿರೋಧವಿಲ್ಲ. ಆದರೆ, ವರದಿಗೆ ಅವರ ಪಕ್ಷ, ಸಂಪುಟದಲ್ಲಿ ವಿರೋಧವಿದೆ. ಕಾಂಗ್ರೆಸ್ಸಿನ ಒಕ್ಕಲಿಗ, ಲಿಂಗಾಯತ ಶಾಸಕರೂ ವಿರೋಧಿಸಿದ್ದಾರೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವರದಿ ಅವೈಜ್ಞಾನಿಕವಾಗಿದೆ ಎಂದಿದ್ದಾರೆ. ಆದ್ದರಿಂದ ಜಾತಿ ಸಮೀಕ್ಷೆ ವೈಜ್ಞಾನಿಕವಾಗಿ ಆಗಬೇಕಿದೆ ಎಂದು ತಿಳಿಸಿದರು.
ನಾನು ರಾಜೀನಾಮೆಗೆ ಸಿದ್ಧ, ಅವರು ಕೊಡುತ್ತಾರೆಯೇ ಎಂದು ಸಿಎಂ, ಮಂತ್ರಿಗಳಿಗೆ ಅಶೋಕ್ ಮತ್ತೆ ಸವಾಲು ಹಾಕಿದರು.
ಮುಡಾ ಹಗರಣದ ಸೈಟ್‌ಗಳ ಬೆಲೆ 80-90 ಲಕ್ಷ ರೂ. ಎಂದೇ ಭಾವಿಸಿದ್ದೆವು. ಆದರೆ, 62 ಕೋಟಿ ರೂ. ಎಂದು ಸಿಎಂ ಹೇಳಿದಾಗಲೇ ನಮಗೂ ಅವುಗಳ ನೈಜ ಬೆಲೆ ಗೊತ್ತಾಗಿದ್ದು ಎಂದರು.