ಆರ್‌ಎಸ್‌ಎಸ್‌ಗೆ ನೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೊರಬದ ಹೊಸಪೇಟೆ ಬಡಾವಣೆಯಲ್ಲಿ ಗಣವೇಷಧಾರಿಗಳು ಪಥಸಂಚಲನ ನಡೆಸಿದರು. ಕೇಶವ ಸಂಪೇಕೈ, ನಾಗರಾಜ ಗುತ್ತಿ, ರಾಜಾರಾಮ್ ಇತರರಿದ್ದರು. 
ಜಿಲ್ಲೆ

ಏನೇ ತೊಡಕಾದರೂ ಆರ್‌ಎಸ್‌ಎಸ್‌ಗೆ ಹಿನ್ನಡೆ ಆಗದು

ಸೊರಬ: ದೇಶ ಮತ್ತು ಸನಾತನ ಧರ್ಮದ ಸಂರಕ್ಷಣೆ ಆರ್‌ಎಸ್‌ಎಸ್‌ನ ಮೂಲ ಧ್ಯೇಯ. ಪ್ರಸ್ತುತ ದೇಶಭಕ್ತ ಸಂಘಟನೆ ಮೇಲೆ ಅನೇಕ ತೊಡಕುಗಳನ್ನು ತಂದರೂ ಸಂಘಕ್ಕೆ ಯಾವುದೇ ಹಿನ್ನಡೆಯಾಗಿಲ್ಲ ಎಂದು ಆರ್‌ಎಸ್‌ಎಸ್ ಬೌದ್ಧಿಕ್ ಪ್ರಮುಖ್ ಲೋಹಿತಾಶ್ವ ಕೇದಿಗೆರೆ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಆರ್‌ಎಸ್‌ಎಸ್‌ನ ಗಣವೇಷಧಾರಿಗಳ ಪಥಸಂಚಲನದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿದ ಅವರು. ದೇಶ ಮತ್ತು ಭಾರತಮಾತೆಯನ್ನು ಪೂಜಿಸುವ, ಗೌರವಿಸುವ ಪ್ರತಿಯೊಬ್ಬರೂ ಹಿಂದುಗಳೇ ಆಗಿದ್ದಾರೆ ಎಂದರು.

ಸ್ವಾತಂತ್ರ್ಯ ಪೂರ್ವದಿಂದಲೂ ಸಂಘದ ಚಟುವಟಿಗಳು ನಡೆದುಕೊಂಡು ಬಂದಿವೆ. ಕೆಲವರು ಸ್ವಾತಂತ್ರ್ಯಕ್ಕಾಗಿ ಆರ್‌ಎಸ್‌ಎಸ್ ಕೊಡುಗೆ ಏನು ಎಂದು ಪ್ರಶ್ನಿಸುತ್ತಾರೆ. ಅವರಿಗೆ ನೈಜ ಇತಿಹಾಸವನ್ನು ಹಾಗೂ ಸಂಘದ ಕಾರ್ಯಕರ್ತರು ಅನುಭವಿಸಿದ ಸೆರೆವಾಸ ಮತ್ತು ತ್ಯಾಗ ಬಲಿದಾನದ ಬಗ್ಗೆ ಅರಿವಿಲ್ಲ ಎಂದು ಹೇಳಿದರು.

ಕರೊನಾ ವ್ಯಾಪಿಸಿದ ಸಂದರ್ಭ ಸಂಘದ ಸ್ವಯಂಸೇವಕರು ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಬರಗಾಲ, ಅತಿವೃಷ್ಟಿ ಮತ್ತು ಅನಾವೃಷ್ಟಿಗಳಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಸಂಘದ ಸ್ವಯಂಸೇವಕರು ನಿಸ್ವಾರ್ಥದಿಂದ ರಕ್ಷಣಾ ಕಾರ್ಯ ಮಾಡಿದ್ದಾರೆ ಎಂದರು.

ಆರ್‌ಎಸ್‌ಎಸ್ ಜಿಲ್ಲಾ ಸಂಘ ಚಾಲಕ್ ಕೇಶವ ಸಂಪೇಕೈ, ತಾಲೂಕು ಸಂಘ ಚಾಲಕ್ ನಾಗರಾಜ ಗುತ್ತಿ, ಹಿರಿಯರಾದ ರಾಜಾರಾಮ್, ಅಚ್ಯುತರಾವ್, ಪ್ರಮುಖರಾದ ಎಚ್.ಎಸ್.ಮಂಜಪ್ಪ, ಪದ್ಮನಾಭ ಭಟ್, ಜಾನಕಪ್ಪ ಒಡೆಯರ್, ಸಿ.ಪಿ.ವೀರೇಶ್ ಗೌಡ, ಡಾ. ಎಚ್.ಇ.ಜ್ಞಾನೇಶ್, ಈಶ್ವರ, ಸುಧಾಕರ ಭಾವೆ, ದೇವೇಂದ್ರಪ್ಪ, ಬೆನವಪ್ಪ, ಸಂಜೀವ ಆಚಾರ್, ಮೋಹನ್, ಸೋಮಪ್ಪ, ಮಹೇಶ ಗೋಖಲೆ ಇತರರಿದ್ದರು.

ಹವಾಮಾನ ವೈಪರೀತ್ಯಕ್ಕೆ ನಮ್ಮ ಜೀವನಶೈಲಿ ಬದಲಾವಣೆಯೂ ಕಾರಣ. ಪರಿಸರ ಸ್ನೇಹಿಯಾಗಿ ಬದುಕುವುದನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಸಂವಿಧಾನದ ರಕ್ಷಣೆ ಮತ್ತು ಗೌರವ ನೀಡುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ. ದ್ವಿಚಕ್ರ ವಾಹನಗಳ ಚಾಲನೆ ವೇಳೆ ಹೆಲ್ಮೆಟ್ ಧರಿಸಬೇಕು. ಇದು ಕೇವಲ ಕಾನೂನು ಪಾಲನೆಗೆ ಮಾತ್ರವಲ್ಲ. ಬದಲಿಗೆ ಜೀವ ರಕ್ಷಣೆಗೆ ಎನ್ನುವುದನ್ನು ತಿಳಿಯಬೇಕು.

ಲೋಹಿತಾಶ್ವ ಕೇದಿಗೆರೆ, ಬೌದ್ಧಿಕ್ ಪ್ರಮುಖ್

ಮಹಿಳೆಯರಿಂದ ಪುಷ್ಪಾರ್ಚನೆ

ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನ ಪೂರೈಸಿದ ಹಿನ್ನೆಲೆಯಲ್ಲಿ ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಭಾನುವಾರ ಪಥಸಂಚಲನ ನಡೆಸಲಾಯಿತು. ಗಿರಿಜಾಶಂಕರ ಸಭಾಭವನದಿಂದ ಆರಂಭವಾದ ಪಥಸಂಚಲನ ಶ್ರೀ ಬ್ರಹ್ಮರ್ಷಿ ನಾರಾಯಣ ವೃತ್ತ, ಶ್ರೀ ಸ್ವಾಮಿ ವಿವೇಕಾನಂದ ವೃತ್ತ, ಹೊಸಬಾಳೆ ರಸ್ತೆ, ಸಂಜೀವನಗರದ ಮೂಲಕ ಪುನಃ ಗಿರಿಜಾಶಂಕರ ಸಭಾಭವನ ತಲುಪಿತು. ನೂರಾರು ಗಣವೇಷಧಾರಿಗಳು ಪಾಲ್ಗೊಂಡಿದ್ದರು. ಪಥಸಂಚಲನ ಸಾಗುವ ಮಾರ್ಗದಲ್ಲಿ ಮಹಿಳೆಯರು ರಂಗೋಲಿ ಬಿಡಿಸಿ, ಭಗವಾಧ್ವಜ ಹಾಗೂ ಭಾರತಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಮಳೆಯನ್ನೂ ಲೆಕ್ಕಿಸದೆ ಗಣವೇಷಧಾರಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು