ಎನ್.ಆರ್.ಪುರ: ಬಕ್ರಿಹಳ್ಳ ಕಡಹಿನಬೈಲು ಏತ ನೀರಾವರಿ ಯೋಜನೆಯ ಪೈಪ್‌ಲೈನ್ ವಿಸ್ತರಣೆ ಮತ್ತು ಪುನಶ್ಚೇತನಕ್ಕಾಗಿ ರಾಜ್ಯ ಸರ್ಕಾರ 15 ಕೋಟಿ ರೂ. ಮಂಜೂರಾತಿ ನೀಡಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಈ ಹಿಂದಿನ ಸಮ್ಮಿಶ್ರ ಸರ್ಕಾರವಿದ್ದಾಗ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಡಾ. ಪರಮೇಶ್ವರ್ ಉಪ ಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ನೀರಾವರಿ ಮಂತ್ರಿಯಾಗಿದ್ದರು. ಆಗ ಬಕ್ರಿಹಳ್ಳ ಕಡಹಿನಬೈಲು ಏತ ನೀರಾವರಿ ಯೋಜನೆಯ ಪೈಪ್‌ಲೈನ್, ಕೆರೆ ಹೂಳೆತ್ತುವ ಕಾಮಗಾರಿಗೆ 9 ಕೋಟಿ ರೂ. ಬೇಕಾಗಲಿದೆ ಎಂಬ ನಮ್ಮ ಮನವಿಗೆ ಬಜೆಟ್‌ನಲ್ಲಿ 9 ಕೋಟಿ ರೂ. ಮೀಸಲಿಡಲಾಗಿತ್ತು. ನಂತರ ದಿನಗಳಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿ ಸರ್ಕಾರ ಬೀಳಿಸಿದ್ದರು. ಅದರ ಪರಿಣಾಮವಾಗಿ 9 ಕೋಟಿ ರೂ. ಮಂಜೂರು ಆಗಲಿಲ್ಲ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಈಗ ಬಕ್ರಿಹಳ್ಳ ಕಡಹಿನಬೈಲು ಏತ ನೀರಾವರಿ ಯೋಜನೆಯ ಪೈಪ್‌ಲೈನ್ ಕಾಮಗಾರಿಗೆ ಬಜೆಟ್‌ನಲ್ಲಿ ಸೇರಿಸಿದ್ದ 9 ಕೋಟಿ ರೂ. ಜತೆಗೆ ಇನ್ನೂ 6 ಕೋಟಿ ಸೇರಿಸಿ ಒಟ್ಟು 15 ಕೋಟಿ ರೂ. ನೀಡಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡಲಾಗಿತ್ತು. ಈಗ 15 ಕೋಟಿ ರೂ. ಮಂಜೂರು ಮಾಡಿ ನೀರಾವರಿ ಇಲಾಖೆಯಿಂದ ಆದೇಶ ಮಾಡಲಾಗಿದೆ. ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆಗೆ ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆಯು ವೇಗ ಪಡೆದುಕೊಳ್ಳಲಿದೆ ಎಂದರು.
ಬಕ್ರಿಹಳ್ಳ ಕಡಹಿನಬೈಲು ಏತ ನೀರಾವರಿ ಯೋಜನೆ ಅಧ್ಯಕ್ಷ ಎಸ್.ಡಿ.ರಾಜೇಂದ್ರ, ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್, ಪಪಂ ಅಧ್ಯಕ್ಷೆ ಜುಬೇದಾ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಸದಸ್ಯ ಮನೋಹರ್, ಕಾಂಗ್ರೆಸ್ ನಗರ ಅಧ್ಯಕ್ಷ ಬಿಳಾಲುಮನೆ ಉಪೇಂದ್ರ, ನಂದೀಶ್, ಸುಬ್ಬೇಗೌಡ ಇದ್ದರು.