ಹಾಸನ : ನುಗ್ಗೇಹಳ್ಳಿ ವ್ಯಾಪ್ತಿಯ ಬೆಳಗಳ್ಳಿ, ಅಕ್ಕನಹಳ್ಳಿ, ಜಂಬೂರು, ಗೌಡಗೆರೆ, ಮಟ್ಟನವಿಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 25 ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸುವ ಏತ ನೀರಾವರಿ ಯೋಜನೆಯ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಹೋಬಳಿಯ ಬದ್ದಿಕೆರೆ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಯೋಜನೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 70 ಕೋಟಿ ರೂ.ಹಣ ಬಿಡುಗಡೆ ಮಾಡಿ ತೋಟಿಕೆರೆ ಅಂಗಳದಲ್ಲಿ ಭೂಮಿಪೂಜೆ ನೆರವೇರಿಸಿದ್ದರು ಎಂದರು.
ಪಂಚರತ್ನ ಯೋಜನೆಯಲ್ಲಿ ಶಿಕ್ಷಣ, ಆರೋಗ್ಯ, ರೈತ ಚೈತನ್ಯ ಯೋಜನೆ, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸಾಲ ಮನ್ನಾ, ಕೊಬ್ಬರಿಗೆ 15,000 ರೂ.ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ ಇವೆಲ್ಲವೂ ಜಾರಿಗೆ ಬರಲಿದೆ. ಬುದ್ಧಿಕೆರೆಯನ್ನು ಮಾದರಿ ಗ್ರಾಮ ಮಾಡುವ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ವಿವೇಕ್, ಎಪಿಎಂಸಿ ಮಾಜಿ ಅಧ್ಯಕ್ಷ ರಘುನಾಥ್, ಮುಖಂಡರಾದ ಜಯರಾಮ್, ತಿಮ್ಮೇಗೌಡ, ತೋಟಿ ನಾಗರಾಜ್, ಪಾರ್ಥಸಾರಥಿ, ಜನನಾಯಕ ನಂಜೇಗೌಡ, ಜೆಡಿಎಸ್ ಯುವ ಮುಖಂಡರಾದ ದ್ವಾರಕೀಶ್, ಸತೀಶ್, ಸಂಪತ್ ಕುಮಾರ್, ಧನಂಜಯ ಇತರರು ಹಾಜರಿದ್ದರು.
ಫೋಟೋ ಸುದ್ದಿ
ಬದ್ದಿಕೆರೆ ಗ್ರಾಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅವರನ್ನು ಜೆಡಿಎಸ್ ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿದರು. ಎಚ್.ಜಿ.ರಾಮಕೃಷ್ಣ, ದ್ವಾರಕೀಶ್, ಸತೀಶ್, ದೇವರಾಜ್ ಇದ್ದರು.