ಜಿಲ್ಲೆ

ಏಡ್ಸ್ ಖಾಯಿಲೆ ಕುರಿತು ಹೆಚ್ಚಿನ ಜಾಗೃತಿ ಅಗತ್ಯ

*ಜಿಲ್ಲಾ ಪ್ರಧಾನ ನ್ಯಾಯಾಧೀಶೆ ಬಿ.ಎಸ್.ಭಾರತಿ ಅಭಿಪ್ರಾಯ

*ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ

ಚಾಮರಾಜನಗರ: ಏಡ್ಸ್ ಮಾರಣಾಂತಿಕ ಖಾಯಿಲೆಯಾಗಿದ್ದು, ಈ ಖಾಯಿಲೆಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ ಸಲಹೆ ನೀಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಏಡ್ಸ್ ಪ್ರಿವೆನ್ಷರ್ ಸೊಸೈಟಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸಮತಾ ಸೊಸೈಟಿ ಅವರ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ಬುಧವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಾರಣಾಂತಿಕ ಖಾಯಿಲೆಯಾಗಿರುವ ಏಡ್ಸ್ ಖಾಯಿಲೆ, ಒಮ್ಮೆ ಬಂದರೆ ಆ ವ್ಯಕ್ತಿ ಜೀವನಪೂರ್ತಿ ಮಾತ್ರೆ ಸೇವಿಸಬೇಕಾಗುತ್ತದೆ.‌ ಇದರ ಜತೆಗೆ ಜೀವನವು ಹಾಳಾಗುತ್ತದೆ. ಹಾಗಾಗಿ ಏಡ್ಸ್ ಕುರಿತು ಹೆಚ್ಚಿನ ಜಾಗೃತಿ ಇರಬೇಕು. ಏಡ್ಸ್ ದಿನೇ ದಿನೇ ಹೆಚ್ಚುತ್ತಿದ್ದು, 20 ರಿಂದ 25 ವರ್ಷದವರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಏಡ್ಸ್ ಯಾವ ರೀತಿ ಬರುತ್ತದೆ ಎಂಬೆಲ್ಲ ಮಾಹಿತಿ ಇದ್ದರೂ ಸಹ, ಹೆಚ್ಚಾಗಿ ಏಡ್ಸ್ ರೋಗಕ್ಕೆ ಜನರು ತುತ್ತಾಗುತ್ತಿದ್ದಾರೆ. ಇನ್ನಾದರೂ ಜಾಗೃತಿವಹಿಸಬೇಕಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಗುರುಪ್ರಸಾದ್ ಮಾತನಾಡಿ, ಏಡ್ಸ್ ಹೇಗೆ ಹರಡುತ್ತದೆ ಎಂಬುದರ ಕುರಿತು ಮುಖ್ಯವಾಗಿ ಮಾತನಾಡುವಲ್ಲಿ ಹಿಂಜರಿಯುತ್ತಿದ್ದೇವೆ. ಈ ಹಿಂಜರಿಕೆ ಮನೋಭಾವ ದೂರವಾಗಬೇಕು. ಏಡ್ಸ್ ಕುರಿತು ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಅರಿವು ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ರವಿಕುಮಾರ್, ಗಾಂಧಿ ಅಧ್ಯಯನ ಕೇಂದ್ರದ ಶಿವಸ್ವಾಮಿ, ಸಮತಾ ಸೊಸೈಟಿಯ ಅಧ್ಯಕ್ಷೆ ದೀಪಾಬುದ್ಧೆ ಹಾಗೂ ಇತರರು ಹಾಜರಿದ್ದರು.

ಏಡ್ಸ್ ಕುರಿತು ಜಾಥಾ ಕಾರ್ಯಕ್ರಮ:

ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಏಡ್ಸ್ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಶಿಲ್ಪನಾಗ್ ಚಾಲನೆ ನೀಡಿದರು.

ಜಿಲ್ಲಾಡಳಿತ ಭವನದ ಮುಂಭಾಗದಿಂದ ಸಾಗಿದ ಜಾಥಾ ಬಿ.ರಾಚಯ್ಯ ಜೋಡಿ ರಸ್ತೆ, ಡಿವಿಯೇಷನ್ ರಸ್ತೆ ಮೂಲಕ ಸಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತ್ಯವಾಯಿತು.

ಈ ವೇಳೆ ಜಿ.ಪಂ ಸಿಇಒ ಮೋನಾ ರೋತ್, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್, ಜಿಲ್ಲಾ ಆರೋಗ್ಯ ಅಧಿಕಾರಿ ಚಿದಂಬರ ಹಾಗೂ ಇತರರು ಹಾಜರಿದ್ದರು.