ಜಿಲ್ಲೆ

ಏಟಿಗೆ ತಿರುಗೇಟು, ಎಂ.ಬಿ.ಪಾಟೀಲ ಹೇಳಿಕೆಗೆ ಶಾಸಕ ಯಶವಂತರಾಯಗೌಡ ಪ್ರತ್ಯುತ್ತರ,ನಿನಗಿಂತಲೂ ಮೊದಲೇ ನಾನು ರಾಜಕೀಯದಲ್ಲಿದ್ದೆ...!

Vijyapura - Parsuram Bhasagi

ವಿಜಯಪುರ: ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ನಾನೇ ಎಂದು ಯಾರೋ ಪುಣ್ಯಾತ್ಮ ತಿಳಿಸಿದ್ದಾನೆ. ಆದರೆ, ಆತನಿಗಿಂತಲೂ ಮೊದಲೇ ನಾನು ರಾಜಕೀಯದಲ್ಲಿದ್ದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸಾಂಪ್ರದಾಯಿಕ ಎದುರಾಳಿ ಡಾ.ಎಂ.ಬಿ. ಪಾಟೀಲರಿಗೆ ಪರೋಕ್ಷವಾಗಿ ಚಾಟಿ ಬೀಸಿದರು.

ಇಂಡಿ ಪಟ್ಟಣದ ಕೋಳೆಕರ್ ಕಟ್ಟಡದಲ್ಲಿ ಮಂಗಳವಾರ ನೂತನ ಕಾಂಗ್ರೆಸ್ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ನನ್ನನ್ನು ರಾಜಕೀಯಕ್ಕೆ ತಂದವರು ಎಚ್.ಕೆ. ಪಾಟೀಲ ಹಾಗೂ ದಿವಂಗತ ಗುಡದಿನ್ನಿ. ಇದಕ್ಕೂ ಮೊದಲೇ ನನ್ನ ತಂದೆ ರಾಜಕೀಯದಲ್ಲಿದ್ದವರು ಎಂಬುದು ಗೊತ್ತಿರಲಿ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ. ಪಕ್ಷಕ್ಕೆ ಬದ್ದತೆಯಿಂದ ಇರಬೇಕು, ಪಕ್ಷ ವಿರೋಧ ಚಟುವಟಿಕೆ ಮಾಡಿದರೆ ತಂದೆ ತಾಯಿಗೆ ಹುಟ್ಟಿದಂತಾಗುವುದಿಲ್ಲ. ನಿನ್ನೆಯೇ ರಣಕಹಳೆ ಊದಿಯಾಗಿದೆ. ಕುಚೇಷ್ಟೆ ರಾಜಕಾರಣ ಬೇಡ. ಕಾಲ ಬದಲಾಗಿದೆ, ಒಳಹೊರ ಒಪ್ಪಂದಗಳು ಮಾಡಿದರೆ ಮನೆಗೆ ಕಳಿಸುವ ದಿನಗಳು ಸನ್ನಿಹಿತವಾಗಿವೆ ಎಂದರು.

ನೀವು ವಿಜಯಪುರ ನಗರ ಸೇರಿದಂತೆ ಉಳಿದ ಕ್ಷೇತ್ರದಲ್ಲಿ ಯಾವ್ಯಾವ ರೀತಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದೀರಿ ಎಂದು ಗೊತ್ತಿದೆ. ನಿಮ್ಮ ವಿವೇಕ, ವಿವೇಚನೆ ಬದಲಾವಣೆ ಮಾಡಿಕೊಳ್ಳಿ. ಪ್ರೀತಿ, ವಿಶ್ವಾಸದಿಂದ ಜನರ ಮನಸ್ಸು ಗೆಲ್ಲುವ ರಾಜಕೀಯ ಮಾಡಿ. ಅಧಿಕಾರ ಶಾಶ್ವತ ಅಲ್ಲ. ನಾನು ಇರುವವರೆಗೂ ನನ್ನ ಮತಕ್ಷೇತ್ರದಲ್ಲಿ ನನ್ನ ಕುಟುಂಬದವರನ್ನು ರಾಜಕೀಯಕ್ಕೆ ತರಲ್ಲ ಎಂದು ಎಂ.ಬಿ. ಪಾಟೀಲರ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ, ಮುಖಂಡರಾದ ಗುರಣ್ಣಗೌಡ ಪಾಟೀಲ, ಸಾಂಬಾಜಿರಾವ ಮಿಸಾಳೆ, ಅಣ್ಣಾರಾಯ ಬಿದರಕೋಟಿ, ಲಿಂಬಾಜಿ ರಾಠೋಡ, ಎಸ್.ಎಂ. ಪಾಟೀಲ ಗಣಿಹಾರ, ಜಬ್ಬಾರ ಅರಬ, ಮಲ್ಲುಗೌಡ ಪಾಟೀಲ, ಇಲಿಯಾಸ ಬೋರಾಮಣಿ ಮತ್ತಿತರರಿದ್ದರು.