ದಾವಣಗೆರೆ: ಕಾರ್ಮಿಕರಿಗೆ ರಾಜ್ಯ ವಿಮೆ ಮತ್ತು ಭವಿಷ್ಯ ನಿಧಿ ಪಾವತಿಸದೆ ವಂಚನೆ ಮಾಡಿದ ಆರೋಪದಡಿ ಟಾರ್ಗೆಟ್ ಸೆಕ್ಯೂರಿಟಿ ಮತ್ತು ಡಿಟೆಕ್ಟಿವ್ ಮ್ಯಾನ್ ಪವರ್ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಎಐಟಿಯುಸಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹೊರಗುತ್ತಿಗೆ ಕಾರ್ಮಿಕರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸದಿದ್ದಲ್ಲಿ ವಂಚನೆಗೆ ಒಳಗಾದ ಹೊರಗುತ್ತಿಗೆ ಕಾರ್ಮಿಕರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರಿಗೆ ಮನವಿ ಪತ್ರದ ಮೂಲಕ ಎಚ್ಚರಿಕೆ ನೀಡಲಾಯಿತು.
ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಚ್.ಜಿ. ಉಮೇಶ್ ಮಾತನಾಡಿ ರಾಜ್ಯದ ವಿವಿಧ ಆಸ್ಪತ್ರೆಗಳು, ನರ್ಸಿಂಗ್ ಹೋಂ ಸೇರಿ ಇತರೆಡೆ ಹೊರಗುತ್ತಿಗೆ ಆಧಾರದಡಿ ನೇಮಕ ಮಾಡಿಕೊಂಡ ಕಾರ್ಮಿಕರಿಗೆ ಏಜೆನ್ಸಿಗಳು ಕಾರ್ಮಿಕ ಇಲಾಖೆ ಕಾಯ್ದೆಯನ್ವಯ ರಾಜ್ಯ ವಿಮೆ ಮೊತ್ತ ಪಾವತಿ ಮಾಡಿಲ್ಲ. ಅಲ್ಲದೆ ಭವಿಷ್ಯನಿಧಿ ಪಾವತಿಸದೆ ಬೋಗಸ್ ದಾಖಲೆಗಳನ್ನು ಲಗತ್ತಿಸಿ ವಂಚನೆ ಮಾಡುತ್ತಿವೆ ಎಂದು ದೂರಿದರು.
ಚಿಗಟೇರಿ ಜಿಲ್ಲಾಸ್ಪತ್ರೆಯ ಕಾರ್ಮಿಕರಿಗೆ ರಾಜ್ಯ ವಿಮೆ ಮತ್ತು ಭವಿಷ್ಯ ನಿಧಿ ಮೊತ್ತ ಪಾವತಿಸಿದ್ದಾಗಿ ಇತರೆಡೆಗಳ ವಿಮೆ ಪಾವತಿ ಮಾಡಿದ ದಾಖಲೆ ಲಗತ್ತಿಸಿ ಸುಮಾರು 17 ರಿಂದ 25 ಲಕ್ಷಕ್ಕೂ ಹೆಚ್ಚು ಹಣವನ್ನು ಬಿಲ್ಲಿನ ಮೂಲಕ ಜಿಲ್ಲಾಸತ್ರೆ ಅಧೀಕ್ಷಕರಿಂದ ಪಡೆದಿದ್ದಾರೆ. ರಾಜ್ಯ ವಿಮಾ ಕಾರ್ಮಿಕರ ಭವಿಷ್ಯ ನಿಧಿಯ ವಂಚನೆ ಆಗಿದ್ದು, ಈ ಕುರಿತು ಅಧೀಕ್ಷಕರಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಟಾರ್ಗೆಟ್ ಏಜೆನ್ಸಿಯು ಕೂಡ ವಂಚನೆ ಮಾಡುತ್ತಿದೆ. ಒಂದು ಸಂಸ್ಥೆಯ ದಾಖಲೆಯನ್ನು ಮತ್ತೊಂದು ಸಂಸ್ಥೆಗೆ ನೀಡಿದ್ದಾರೆ. ಬೋಸ್ ದಾಖಲೆಗಳನ್ನು ಸಲ್ಲಿಸಿ ವಂಚನೆ ಮಾಡಲಾಗುತ್ತಿದೆ. ಸಿಬ್ಬಂದಿಗೆ ಮಾಸಿಕ ವೇತನಕ್ಕೆ ಅನುಗುಣವಾಗಿ ಇಪಿಎಫ್ ಪಾವತಿಸಿಲ್ಲ. ಮಾಸಿಕ ಹಾಜರಾತಿ ಪೂರ್ಣವಿದ್ದರೂ ಕಡಿಮೆ ವೇತನ ಜಮಾ ಮಾಡಲಾಗುತ್ತಿದೆ ಎಂದು ದೂರಿದರು.
ಜಿಲ್ಲಾಸ್ಪತ್ರೆ ಸಿಬ್ಬಂದಿಯ ಇಎಸ್‌ಐ ಯನ್ನು 2021ರಿಂದಲೂ ಪಾವತಿಸದೆ ಕಾರ್ಮಿಕರಲ್ಲದೆ ಸರ್ಕಾರಕ್ಕೂ ವಂಚನೆ ಮಾಡಲಾಗುತ್ತಿದೆ. ಟಾರ್ಗೆಟ್ ಸೆಕ್ಯೂರಿಟಿ ಮತ್ತು ಡಿಟೆಕ್ಟಿವ್ ಏಜೆನ್ಸಿಗಳ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ಒಂಬತ್ತು ಕೇಸುಗಳಿವೆ. ಅಲ್ಲದೆ ಲಕ್ಷಾಂತರ ರೂ. ಅಕ್ರಮ ಕುರಿತಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳ ಬಳಿ ದಾಖಲೆಗಳಿದ್ದರೂ ಹೊರಗುತ್ತಿಗೆ ಆಧಾರದ ಕಾರ್ಮಿಕರ ಹೆಸರಿನಲ್ಲಿ ಮೋಸ ಮಾಡುತ್ತಿರುವ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆ ಕಾಡುತ್ತಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ಪದಾಧಿಕಾರಿಗಳಾದ ವಿ.ಲಕ್ಷ್ಮಣ್, ಶಿವಕುಮಾರ್ ಡಿ. ಶೆಟ್ಟರ್, ಯರಗುಂಟೆ ಸುರೇಶ್, ಎಚ್.ಕೆ. ಸುರೇಶ್, ಡಿ.ಸುರೇಶ್, ಇಮಾಂ ಖಾನ್, ಚಂದ್ರು, ಮುದ್ದಪ್ಪ ಇತರರಿದ್ದರು