ಹುಣಸೂರು: ನಗರದ ಗೋಕುಲ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆಯಿದ್ದು, ವರ್ತಕರು ಮತ್ತು ನಿವಾಸಿಗಳಿಗೆ ಅನನುಕೂಲವಾಗದಂತೆ ವ್ಯವಸ್ಥೆಯಲ್ಲಿ ಅಲ್ಪಪ್ರಮಾಣದಲ್ಲಿ ಸಡಿಲಗೊಳಿಸುವತ್ತ ಪೊಲೀಸರು ಕ್ರಮವಹಿಸಬೇಕೆಂದು ಶಾಸಕ ಎಚ್.ಪಿ.ಮಂಜುನಾಥ್ ಸಲಹೆ ನೀಡಿದರು.
ನಗರದ ಶಾಸಕರ ಕಚೇರಿಯಲ್ಲಿ ಶನಿವಾರ ಗೋಕುಲ ರಸ್ತೆಯ ವರ್ತಕರು, ನಿವಾಸಿಗಳು ಮತ್ತು ಪೊಲೀಸರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಗೋಕುಲ ರಸ್ತೆಯಲ್ಲಿ ನಿತ್ಯ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದು, ಸಂಚಾರ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಇತ್ತೀಚೆಗೆ ರಸ್ತೆಯನ್ನು ಏಕಮುಖ ವಾಹನ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಿರುವುದು ಸರಿಯಷ್ಟೆ. ಶಾಲಾ-ಕಾಲೇಜುಗಳ ಆರಂಭ ಮತ್ತು ಮುಕ್ತಾಯದ ಅವಧಿಯನ್ನು ಹೊರತುಪಡಿಸಿ ಮಿಕ್ಕ ಸಮಯದಲ್ಲಿ ರಸ್ತೆಯಲ್ಲಿ ಸಂಚಾರ ವ್ಯತ್ಯವಾಗುತ್ತಿಲ್ಲವೆನ್ನುವುದು ಅಲ್ಲಿನ ವರ್ತಕರ ವಾದ ಎಂದರು.
ಸುತ್ತಮುತ್ತಲಿನ ಬಡಾವಣೆ ನಾಗರಿಕರು ಮನೆಗೆ ತೆರಳಲು ರಸ್ತೆಯನ್ನು ಸುತ್ತುಹಾಕಬೇಕಿದೆ. ಪೊಲೀಸರ ನಿರ್ಧಾರ ಸರಿಯಾದರೂ ವರ್ತಕರ ಮತ್ತು ನಾಗರೀಕರ ಅನುಕೂಲಕ್ಕಾಗಿ ದಿನದ ಬೆಳಗ್ಗೆ ಮತ್ತು ಸಂಜೆಯ ವೇಳೆ ತಲಾ ಎರಡು ಗಂಟೆಗಳ ಕಾಲ(ಬೆಳಗ್ಗೆ 8ರಿಂದ 10 ಮತ್ತು ಸಂಜೆ 3ರಿಂದ 5ಗಂಟೆಯವರೆಗೆ) ನಿಯಮವನ್ನು ಸಡಿಲಗೊಳಿಸುವತ್ತ ಇಲಾಖೆ ಗಮನಹರಿಸುವುದು ಸೂಕ್ತ. ಈ ಕುರಿತು ಪರಿಶೀಲನೆ ನಡೆಸಿ ಎಂದು ಡಿವೈಎಸ್‌ಪಿ ರವಿಪ್ರಸಾದ್ ಅವರಿಗೆ ಸೂಚಿಸಿದರು.
ವರ್ತಕರಾದ ಮಹಮದ್ ಷಫಿ, ಮಾಲಿಕ್ ಪಾಷಾ ಇತರರು ಮಾತನಾಡಿ, ದಿನವಿಡೀ ಏಕಮುಖ ಸಂಚಾರ ವ್ಯವಸ್ಥೆಯಿಂದಾಗಿ ವ್ಯಾಪಾರ ಗಣನೀಯವಾಗಿ ತಗ್ಗಿದೆ. ಇಷ್ಟಕ್ಕೂ ರಸ್ತೆ ಬದಿ ವಾಹನಗಳನ್ನು 15ದಿನಕ್ಕೊಮ್ಮೆ ಒಂದೊಂದು ಬದಿಗೆ ನಿಲ್ಲಿಸುವ ಪದ್ಧತಿಯನ್ನು ಪೊಲೀಸರ ನಿರ್ದೇಶನದಂತೆ ಈಗಾಗಲೇ ಅನುಸರಿಸಲಾಗುತ್ತಿದೆ. ಶಾಲೆ ಆರಂಭ ಮತ್ತು ಬಿಟ್ಟ ವೇಳೆಯಲ್ಲಿ ಮಾತ್ರ ಸಮಸ್ಯೆಯಾಗುತ್ತಿದ್ದು, ವ್ಯವಹಾರಕ್ಕೆ ಧಕ್ಕೆ ಬಾರದಂತೆ ಹಾಗೂ ನಿವಾಸಿಗಳಿಗೆ ಅನನುಕೂಲವಾಗದಂತೆ ಕ್ರಮ ವಹಿಸಬೇಕೆಂದು ಕೋರಿದರು.
ಡಿವೈಎಸ್‌ಪಿ ರವಿಪ್ರಸಾದ್ ಮಾತನಾಡಿ, ಮುಂದಿನ ದಿನಗಳಲ್ಲಿ ಕಾನೂನು ಇನ್ನಷ್ಟು ಕಠಿಣವಾಗಲಿದೆ. ಶಾಲಾ ಕಾಲೇಜುಗಳ ಅವಧಿ ಹೊರತುಪಡಿಸಿ ಗೋಕುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವುದು ನಿಜ. ವರ್ತಕರು ತಮ್ಮ ಅಂಗಡಿಗೆ ಬರುವ ಗ್ರಾಹಕರ ವಾಹನಗಳನ್ನು ಅಡ್ಡಡ್ಡವಾಗಿ ನಿಲ್ಲಿಸಿಕೊಳ್ಳುವುದನ್ನು ನಿಯಂತ್ರಿಸಬೇಕು. ಸೆಲ್ಪ್ ಡಿಸಿಪ್ಲಿನ್ ಇಲ್ಲದಿದ್ದರೆ ಸಮಸ್ಯೆ ಬಗೆಹರಿಯುವುದಿಲ್ಲ. ನಿಯಮ ಸಡಿಲಗೊಳಿಸುವ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮವಹಿಸಲಾಗುವುದು ಎಂದರು.
ಸಭೆಯಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಗಿರಿ, ಗೋಪಿ, ಮಹಮದ್ ಷಫಿ, ಮಾಲಿಕ್‌ಪಾಷಾ, ನಿಶ್ಚಲ್. ಎಲ್ಡೊ ಮುಂತಾದವರು ಇದ್ದರು.