ಜಿಲ್ಲೆ

ಏಕತೆಗೆ ಪೆಟ್ಟು ಕೊಡುವ ಮನಸ್ಥಿತಿ ಸರಿಯಲ್ಲ

ಮೊಳಕಾಲ್ಮೂರು: ದೇಶದ ಏಕತೆಗೆ ಪೆಟ್ಟುಕೊಡುವ ಕೆಟ್ಟ ಮನಸ್ಥಿತಿ ಸರಿಯಲ್ಲ. ಇದು ವ್ಯವಸ್ಥಿತವಾಗಿ ತಳ ಸಮುದಾಯಗಳ ದಿಕ್ಕು ತಪ್ಪಿಸುವ ಹುನ್ನಾರವಾಗಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ಕೊಂಡಾಪುರ ಪರಮೇಶಿ ಹೇಳಿದರು.

ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಆಡಿರುವ ಮಾತನ್ನು ಖಂಡಿಸಿ ಈ ಕೂಡಲೇ ಅವರು ರಾಜೀನಾಮೆ ನೀಡುವಂತೆ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಟಿ.ಜಗದೀಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿ, ವಿಶ್ವವೇ ಕೊಂಡಾಡುವಂತೆ ಸಂವಿಧಾನವನ್ನ ದೇಶಕ್ಕೆ ಕೊಡುಗೆಯಾಗಿ ನೀಡಿರುವ ಬಾಬಾ ಸಾಹೇಬರ ಬಗ್ಗೆ ಹಗುರವಾಗಿ ಮಾತನಾಡಿರುವ ವ್ಯಕ್ತಿ ಅಮಿತ್ ಷಾ ಗೃಹ ಖಾತೆಯಲ್ಲಿ ಮುಂದುವರೆಯಲು ಯೋಗ್ಯರಲ್ಲ ಎಂದು ಕಿಡಿಕಾರಿದರು.

ದಲಿತ ಸಂಘರ್ಷ ರಾಜ್ಯ ಸಮಿತಿ ಸದಸ್ಯ ಬಿ.ಟಿ.ನಾಗಭೂಷಣ ಮಾತನಾಡಿ, ದೂರ ದೃಷ್ಠಿ ಚಿಂತನೆಯ ಹರಿಕಾರ ಅಂಬೇಡ್ಕರ್ ಸಂವಿಧಾನದ ಆಶಯದಿಂದ ಶೋಷಿತರು ಶಾಶ್ವತ ಬದುಕನ್ನು ಕಟ್ಟಿಕೊಳ್ಳುವ ವೇಳೆ ಅಮಿತ್ ಷಾ ಹೇಳಿಕೆ ಎಲ್ಲರನ್ನು ರೊಚ್ಚಿಗೇಳಿಸಿದೆ. ಅಖಂಡ ಭಾರತ ಉಳಿಯಬೇಕಾದರೆ ತಳ ಸಮುದಾಯಗಳು ಜೇನುಗೂಡಿನಂತೆ ಒಗ್ಗೂಡಬೇಕು ಎಂದರು.

ಸಮಿತಿ ಪದಾಧಿಕಾರಿಗಳಾದ ಎಚ್.ಚಂದ್ರಶೇಖರ, ಟಿ.ಉಮೇಶ, ಲಕ್ಷ್ಮಣ, ಎನ್.ಮಹಾದೇವ, ಗಂಗಾಧರ, ಜಿ.ಪ್ರಕಾಶ್, ಆನಂದ, ತಿಪ್ಪೇಸ್ವಾಮಿ, ಅನಿಲ್‌ಕುಮಾರ, ಪ್ರಸನ್ನ, ಬಸವರಾಜ್, ಹೊನ್ನೂರಸ್ವಾಮಿ, ನಾಗರಾಜ, ಯಲ್ಲಪ್ಪ, ಪರಮೇಶ, ಗಂಗಣ್ಣ ಇದ್ದರು.