ಬಾಗಲಕೋಟೆ: ಸಮಾಜದ ಹಲವಾರು ನಾಯಕರು ವಿವಿಧ ರಾಜಕೀಯ ಪಕ್ಷದಲ್ಲಿದ್ದಾರೆ, ಸಮಾಜ ವಿಷಯ ಬಂದಾಗ ಪ್ರತಿಯೊಬ್ಬರು ಒಂದಾಗುವ ಮೂಲಕ ರಾಜಕೀಯ ಬೆರೆಸದೇ ಸಮಾಜಕ್ಕೆ ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಪ್ರತಿಯೊಬ್ಬರು ಒಂದೇ ಭಾವನೆಯಿಂದ ನಡೆದಾಗ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ತಾಲೂಕಾ ಗಾಣಿಗ ಸಮಾಜ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬೇರೆ ಪಕ್ಷದಲ್ಲಿ ಇದ್ದರು ಸಮಾಜದ ಕೆಲಸಕ್ಕೆ ಕುಟುಂಬದAತೆ ಮಾಡಿದಾಗ ಸಮಾಜಕ್ಕೆ ಒಳ್ಳೆಯದಾಗಲಿದೆ ಎಂದರು.
ಮಕ್ಕಳ ಓದಿನ ಬಗ್ಗೆ ಪ್ರತಿನಿತ್ಯ ಪಾಲಕರು ಗಮನಹರಿಸಬೇಕು. ಮಕ್ಕಳ ಭವಿಷ್ಯ ಭದ್ರವಾಗಬೇಕಾದರೆ ಕಡ್ಡಾಯವಾಗಿ ಶಿಕ್ಷಣಕ್ಕೆ ಒತ್ತು ಹಾಗೂ ಒಳ್ಳೆಯ ಸಂಸ್ಕಾರ ಕೊಡಲು ಪಾಲಕರು ಮುಂದಾಗಬೇಕು ಎಂದು ತಿಳಿಸಿದರು.
ಸಮಾಜದ ಮುಖಂಡ ಬಸವಪ್ರಭು ಸರನಾಡಗೌಡರ ಮಾತನಾಡಿ, ಶಿಕ್ಷಣವಂತರಾದರೆ ಸಮಾಜ ಅಭಿವೃದ್ಧಿ ಹೊಂದಲಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಪಾಲಕರು ನೀಡಿದರೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳು,ಅಽಕಾರಿಗಳಾಗಿ ಹೊರಹೊಮ್ಮಲಿದ್ದಾರೆ. ನಮ್ಮ ಸಮುದಾಯದ ಹಲವಾರು ಮನೆತನದವರು ವಿವಿಧ ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆಯನ್ನು ನೀಡಿದ್ದಾರೆ. ಆದರೆ ನಮ್ಮ ಸಮಾಜದಿಂದ ಒಂದು ಶಿಕ್ಷಣ ಸಂಸ್ಥೆಯಾದರೆ ಸಮುದಾಯದ ಮಕ್ಕಳಿಗೆ ನೆರವಾಗಲಿದೆ ಆ ಕೆಲಸಕ್ಕೆ ಒತ್ತು ನೀಡಬೇಕು. ಸಮುದಾಯದ ಏಳ್ಗೆಗೆ ಸಹಾಯ ಮಾಡುವುದಾಗಿ ಭರವಸೆ ನೀಡಿ, ಶಿಕ್ಷಣ ಸಂಸ್ಥೆ ಕಟ್ಟಲು ಮುಂದಾದರೆ ಸಮುದಾಯದ ಹಲವಾರು ಮುಖಂಡರು ದೇಣಿಗೆಯನ್ನು ನೀಡುತ್ತಾರೆ. ಸಮಾಜಕ್ಕೆ ಬೆನ್ನುಲುಬಾಗಿ ನಿಲ್ಲುತ್ತಾರೆ ಎಂದರು.
ಅಖಿಲ ಭಾರತ ಗಾಣಿಗ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಗಾಣಿಗ ಸಮಾಜ ಯಾರ ಬಳಿಯೂ ಕೈ ಒಡ್ಡಿ ಕೇಳುವುದಿಲ್ಲ. ಉತ್ತರ ಕರ್ನಾಟಕದ ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ಗಾಣಿಗ ಸಮಾಜದ ಮನೆತನದವರು ನೀಡಿದ ಭೂ ದಾನದಿಂದ ಇವತ್ತು ಶಿಕ್ಷಣ ಸಂಸ್ಥೆಗಳು ಹೆಮ್ಮರವಾಗಿ ಬೆಳೆದು ನಿಂತಿವೆ. ಶಿಕ್ಷಣ ಕ್ಷೇತ್ರಕ್ಕೆ ಗಾಣಿಗ ಸಮಜದ ಕೊಡುಗೆ ಅಪಾರವಾಗಿದೆ ಎಂದ ಅವರು, ಗಾಣಿಗ ಸಮಾಜ ಇನ್ನಿತರ ಸಮಾಜದವರೊಂದಿಗೂ ಒಳ್ಳೆಯ ಬಾಂಧವ್ಯವನ್ನು ಹೊಂದಿ ಉಳಿದ ಸಮಾಜಕ್ಕೂ ಗೌರವ ಕೊಡುವ ಕೆಲಸ ಮಾಡುತ್ತದೆ. ಮಕ್ಕಳು ಸಾಧನೆ ಮಾಡಬೇಕಾದರೆ ಒಳ್ಳೆಯ ಪರಿಸರದಲ್ಲಿ ಬೆಳೆಸಬೇಕುಎಂದು ಹೇಳಿದರು.
ರಾಜ್ಯದಲ್ಲಿ ಗಾಣಿಗ ಸಮಾಜ ದೊಡ್ಡದಿದೆ. ಜಾತಿ ಜನಗಣತಿ ಸಮೀಕ್ಷೆಗೆ ಬಂದಾಗ ಸಮಾಜದವರು ಜಾತಿ ಕಾಲಂದಲ್ಲಿ ಗಾಣಿಗ, ಧರ್ಮ ಹಿಂದೂ ಎಂದು ಬರೆಸಬೇಕು. ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ಗಾಣಿಗ ಸಮಾಜದ ಸಮಾವೇಶ ನಡೆಸಲು ಸಿದ್ಧತೆ ನಡೆದಿದೆ ಎಂದರು.
ಗಾಣಿಗ ಸಮಾಜದ ಗುರುಪೀಠದ ಡಾ.ಜಯಬಸವಕುಮಾರ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವ ಜತೆಗೆ ಶಿಕ್ಷಣ ದೊರಕಿಸಿಕೊಟ್ಟರೆ ಸಮಾಜದಲ್ಲಿ ಅವರ ಭವಿಷ್ಯ ಭದ್ರವಾಗಲಿದೆ. ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮತ್ತೊಬ್ಬರಿಗೆ ಪ್ರೇರಣೆಯಾಗಲಿದೆ ಎನ್ನುವ ಮೂಲಕ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಅಖಿಲ ಭಾರತ ಗಾಣಿಗ ಸಂಘದ ರಾಜ್ಯಾಧ್ಯಕ್ಷ ಗುರಣ್ಣ ಗೋಡಿ, ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಲಾಗಲೋಟಿ, ರಾಜ್ಯ ಯುವ ಘಟಕದ ಅಧ್ಯಕ್ಷ ದುಂಡಪ್ಪ ಏಳೆಮ್ಮಿ,ಎಪಿಎಂಸಿ ಮಾಜಿ ಅಧ್ಯಕ್ಷ ಕುಮಾರ ಯಳ್ಳಿಗುತ್ತಿ, ಯುವ ಮುಖಂಡ ಸಂತೋಷ ಹೋಕ್ರಾಣಿ, ಆರ್.ಜಿ.ಪಾಟೀಲ, ಸಿದ್ದಣ್ಣ ಕಾಖಂಡಕಿ, ನಿಂಗಣ್ಣ ಗೋಡಿ, ಕವಿತಾ ಏಳೆಮ್ಮಿ, ಪ್ರಶಾಂತ ಮಾಚಕನೂರ ಇದ್ದರು.