ಜಿಲ್ಲೆ

ಏಕ ಕಾಲದಲ್ಲಿ ಲಕ್ಷ ಸಸಿ ನೆಡುವ ಅಭಿಯಾನ

ಬಾಗಲಕೋಟೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ಜೂನ್ 16 ರಂದು ಏಕ ಕಾಲದಲ್ಲಿ ಒಂದು ಲಕ್ಷ ಸಸಿಗಳನ್ನು ನೆಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಲಕ್ಷ ಸಸಿ ನೆಡುವ ಅಭಿಯಾನದ ಅಂಗವಾಗಿ ಜರುಗಿದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯನ್ನು ಹಸರಿಕರಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಕಾರ್ಯಕ್ಕೆ ಮುಂದಾಗಿದ್ದು, ಅಭಿಯಾನದ ಯಶಸ್ವಿಗೆ ವಿವಿಧ ಇಲಾಖೆಗಳು, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಕೈಜೋಡಿಸಬೇಕು ಎಂದು ತಿಳಿಸಿದರು.

ನಗರದ ಮುಚಖಂಡಿ ಕೆರೆಯು 480 ಹೆಕ್ಟೆರ್ ಅಚ್ಚುಕಟ್ಟು ಪ್ರದೇಶ ಹೊಂದಿದ್ದು ಈ ವ್ಯಾಪ್ತಿಯಲ್ಲಿ ಬೆಂಗಳೂರಿನಂತಹ ಕಬ್ಬನ್ ಪಾರ್ಕ ಮತ್ತು ಲಾಲ್‍ಬಾಗ್ ತರಹ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಬೇಕು. ಕೆರೆಯ ವ್ಯಾಪ್ತಿಯಲ್ಲಿ ಯಾವ ಬಗೆಯ ಸಸಿಗಳು ಬೇಕಾಗುತ್ತವೆ. ಎಷ್ಟು ಸಸಿಗಳು ಬೇಕು. ಹಾಗೂ ಸಸಿ ನೆಡಲು ಗುಂಡಿ ತೋಡಲು ಬೇಕಾಗುವ ಯಂತ್ರಗಳ ಬಗ್ಗೆ ಮಾಹಿತಿ ನೀಡುವಂತೆ ಸಣ್ಣ ನೀರಾವರಿ ಇಲಾಖೆಗೆ ತಿಳಿಸಿದರು.

ಬಾಗಲಕೋಟೆ ನವನಗರದ ಯುನಿಟ್-1ರಲ್ಲಿ ವ್ಯಾಪ್ತಿಯಲ್ಲಿ ಸೆಕ್ಟರವಾರು ಗಿಡ ನೆಡಲು ಯೋಜನೆ ರೂಪಿಸಿ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ 195 ಗ್ರಾಮ ಪಂಚಾಯತಿಗಳು ಹಾಗೂ 17 ನಗರ ಸ್ಥಳೀಯ ಸಂಸ್ಥೆಗಳು ಇದ್ದು, ತಮ್ಮ ತಮ್ಮ ವ್ಯಾಪ್ತಿಯಲ್ಲಿ ಗಿಡಗಳನ್ನು ನೆಡಲು ಯೋಜನೆ ರೂಪಿಸಬೇಕು. ಕೇವಲ ಗಿಡ ನೆಡವುದಷ್ಟೇ ಅಲ್ಲ ಅವುಗಳ ಪೋಷಣೆಗೆ ನೋಡಲ್ ಅಧಿಕಾರಿಗಳನ್ನು ಸಹ ನೇಮಕ ಮಾಡಲಾಗುತ್ತಿದೆ. ಕೆರೆ ವ್ಯಾಪ್ತಿಯಲ್ಲಿ ನೆಡುಸ ಸಸಿಗಳ ಪೋಷಣೆಗೆ ಕ್ರಮವಹಿಸಲಾಗುತ್ತಿದೆ ಎಂದರು.

ಪರಿಸರ ಸಂರಕ್ಷಣೆಗೆ ಈ ಅಭಿಯಾನ ಮುಖ್ಯವಾಗಿದ್ದು, ಸರಕಾರಿ ಕಚೇರಿಯಲ್ಲಿರುವ ಸಿಪಾಯಿಯಿಂದ ಹಿಡಿದು ಅಧಿಕಾರಿಗಳವರೆಗೆ ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ಕೈ ಜೋಡಿಸಬೇಕು. ಇದರೊಂದಿಗೆ ವಿದ್ಯಾರ್ಥಿಗಳು, ಎನ್.ಎಸ್.ಎಸ್., ಎನ್.ಸಿ.ಸಿ ಕೆಡೆಟ್‍ಗಳನ್ನು ತೊಂಡಗಿಸಿಕೊಳ್ಳಬೆಕೆಂದು ಶಾಲಾ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿ ಮತಕ್ಷೇತ್ರಕ್ಕೆ ಇಂತಿಷ್ಟು ಗ್ರಾಮ ಪಂಚಾಯತಿ ಎಂದು ಗುರುತಿಸಿ ಅದಕ್ಕೆ ಒಬ್ಬರು ಉಸ್ತುವಾರಿ ಮಾಡಲು ತಿಳಿಸಿದರು. ಶಾಲಾ-ಕಾಲೇಜು ಆವರಣದಲ್ಲಿ ಸಸಿ ನೆಡಲು ಕ್ರಮವಹಿಸಲು ತಿಳಿಸಿದರು.

ಎಲ್ಲೆಲ್ಲಿ ಸಸಿ ನೆಡಲಾಗುತ್ತಿದೆ. ಅವುಗಳ ಪಟ್ಟಿಯನ್ನು ಮಾಡಿ ಎರಡು ದಿನಗಳ ಒಳಗಾಗಿ ಜಿಲ್ಲಾಡಳಿತಕ್ಕೆ ಸಲ್ಲಿಸಲು ಸೂಚಿಸಿದರು. ಅಲ್ಲದೇ ಲಕ್ಷ ಸಸಿಗಳಲ್ಲಿ ಎಷ್ಟು ಸಾಧ್ಯವಾಗುತ್ತದೆ ಅಷ್ಟು ಸಸಿಗಳನ್ನು ಅರಣ್ಯ ಇಲಾಖೆಗೆ ಸಸಿಗಳನ್ನು ಪೂರೈಸಬೇಕು. ಉಳಿದ ಸಸಿಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಸ್ವಯಂ ಪ್ರೇರಿತವಾಗಿ ಸಸಿ ನೆಡಲು ಬರುವವರಿಗೆ ಅಭಿಯಾನದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ ಇದೊಂದು ಉತ್ತಮ ಕಾರ್ಯವೆಂದು ಭಾವಿಸಿ ಸಮಾಜಕ್ಕೆ ಒಂದು ಒಳ್ಳೇಯ ಕೆಲಸ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ನೆನಪು ಬರುವ ರೀತಿಯಲ್ಲಿ ಈ ಅಭಿಯಾನ ನಡೆಸಲು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ, ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ಕಾರ್ಯನಿರ್ವಾಹಕ ಅಭಿಯಂತರ ವಿಜಯಶಂಕರ ಹೆಬ್ಬಳ್ಳಿ, ಜಿಲ್ಲಾ ಪಂಚಾಯತ ಸಹಾಯಕ ಕಾರ್ಯದರ್ಶಿ ವೆಂಕಟೇಶ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.