ಜಿಲ್ಲೆ

ಏ.30 ರಂದು ಬಸವಣ್ಣನವರ ಪುತ್ಥಳಿ ಉದ್ಘಾಟನೆ

ಎ.ಎಸ್.ಮಣಿಕಂಠ

ಚಾಮರಾಜನಗರ: ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ನಿರ್ಮಾಣ ಮಾಡಿರುವ ಸಾಂಸ್ಕೃತಿಕ ನಾಯಕ ಬಸವಣ್ಣನವರ ಪುತ್ಥಳಿ ಏ.30ರಂದು ಉದ್ಘಾಟನೆಯಾಗಲಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏ.30 ರಂದು ನಡೆಯಲಿರುವ ಬಸವೇಶ್ವರರ ಜಯಂತಿ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ತೀರ್ಮಾನಿಸಲಾಯಿತು.

ಬಸವೇಶ್ವರರ ಜಯಂತಿಯಂದು ಪ್ರತಿಮೆಯನ್ನು ಉದ್ಘಾಟನೆ ಮಾಡಬೇಕು. ಬಳಿಕ ಅಲ್ಲಿಂದ ಮೆರವಣಿಗೆ ಹೊರಟು ಬಿ.ರಾಚಯ್ಯ ಜೋಡಿ ರಸ್ತೆ, ಶ್ರೀಭುವನೇಶ್ವರಿ ವೃತ್ತ, ಡಿವಿಯೇಷನ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ರಸ್ತೆ, ಸುಲ್ತಾನ್ ಷರೀಫ್ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ ಮಾರ್ಗವಾಗಿ ವೇದಿಕೆ ಕಾರ್ಯಕ್ರಮ ನಡೆಯಲಿರುವ ಪೇಟೆಪ್ರೈಮರಿ ಶಾಲಾ ಆವರಣದಲ್ಲಿ ಮೆರವಣಿಗೆ ಮುಕ್ತಾಯವಾಗಬೇಕು ಎಂದು ಹಲವು ಮುಖಂಡರು ಸಲಹೆ ನೀಡಿದರು.

ಕಾರ್ಯಕ್ರಮದಂದು ಪ್ರತಿಯೊಬ್ಬ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಬಸವೇಶ್ವರರ ಜಯಂತಿ ಆಚರಣೆಗೆ ಕ್ರಮವಹಿಸಬೇಕು. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬಸವಣ್ಣನವರಿಗೆ ಸಂಬಂಧಿಸಿದ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಬೇಕು ಎಂಬ ಸಲಹೆಗಳನ್ನು ಹೇಳಿದರು.

ಸಭೆಯಲ್ಲಿ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇರ್ಶಕ ನಂಜುಂಡಯ್ಯ, ಮುಖಂಡರಾದ ಕಾಳನಹುಂಡಿ ಗುರುಸ್ವಾಮಿ, ಕರಿನಂಜನಪುರ ವೀರಭದ್ರಸ್ವಾಮಿ, ಬಿ.ಕೆ.ರವಿಕುಮಾರ್, ಕೋಡಿಮೋಳೆ ಶಿವರುದ್ರಸ್ವಾಮಿ, ಆಲೂರು ಮಲ್ಲು, ಬೇಗೂರು ಲೋಕೇಶ್, ರಾಮಸಮುದ್ರ ಆರ್.ವಿ.ಮಹದೇವಸ್ವಾಮಿ, ಬಸವರಾಜು, ಕುಮಾರ್, ಬಾಲಚಂದ್ರ, ಲೋಕೇಶ್, ಇಂದ್ರೇಶ್ ಹಾಗೂ ಇತರರು ಹಾಜರಿದ್ದರು.

5 ಸಾವಿರ ಜನರ ನಿರೀಕ್ಷೆ:

ಬಸವೇಶ್ವರರ ಜಯಂತಿ ಹಾಗೂ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮ ಒಟ್ಟಿಗೆ ಇರುವುದರಿಂದ ಜಿಲ್ಲೆಯಾದ್ಯಂತ ಸುಮಾರು 5 ಸಾವಿರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮುಖಂಡರು ತಿಳಿಸಿದರು. ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀದೇಶಿಕೇಂದ್ರ ಸ್ವಾಮೀಜಿ ಮತ್ತು ನಗರದ ಶ್ರೀಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀಚನ್ನಬಸವಸ್ವಾಮೀಜಿ ಅವರಿಗೆ ಸಾನಿಧ್ಯ ನೀಡಬೇಕು. ಕಲಾತಂಡಗಳನ್ನು ಮೆರವಣಿಗೆಗೆ ಕರೆಸಬೇಕು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಕದಳಿ ಮಹಿಳಾ ವೇದಿಕೆ ವತಿಯಿಂದ ವಚನ ಗಾಯನವನನ್ನು ಆಯೋಜಿಸಬೇಕು ಎಂದು ಸಲಹೆಗಳನ್ನು ನೀಡಿದರು.

ಅಧಿಕಾರಿಗಳಿಗೆ ನೋಟಿಸ್ ನೀಡಿ:

ಬಸವೇಶ್ವರರ ಜಯಂತಿ ಪೂರ್ವಭಾವಿ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಆಗ್ರಹಿಸಿದರು. ಯಾವುದೇ ಮಹಾಪುರುಷರ ಜಯಂತಿಗಳಾದರೂ ಅಧಿಕಾರಿಗಳು ಸಭೆ ಮತ್ತು ಕಾರ್ಯಕ್ರಮದಲ್ಲಿ ಹೆಚ್ಚಿನದಾಗಿ ಭಾಗವಹಿಸುವುದಿಲ್ಲ. ನಗರಸಭೆಯವರು ಪ್ರತಿಯೊಂದು ಜಯಂತಿಗಳಿಗೂ ಸ್ವಚ್ಛತೆಯನ್ನು ಕಾಪಾಡುತ್ತಿಲ್ಲ. ಜಯಂತಿಯ ದಿನದಂದು ಮದ್ಯ ಮಾರಾಟ ನಿಷೇಧಕ್ಕೆ ಕ್ರಮವಹಿಸಬೇಕು ಎಂದರು.

ಜಿಲ್ಲಾಡಳಿತದಿಂದ ಏ.30 ರಂದು ಬಸವೇಶ್ವರರ ಜಯಂತಿ ಕಾರ್ಯಕ್ರಮವನ್ನು ಶಿಷ್ಟಚಾರದ ಪ್ರಕಾರ ಆಚರಣೆ ಮಾಡಲಾಗುವುದು. ಮೆರವಣಿಗೆ, ವೇದಿಕೆ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುವುದು. ಸಮುದಾಯದ ಮುಖಂಡರ ಸಲಹೆಗಳನ್ನು ಪರಿಗಣಿಸಲಾಗುವುದು.

-ಗೀತಾ ಹುಡೇದ, ಅಪರ ಜಿಲ್ಲಾಧಿಕಾರಿ, ಚಾಮರಾಜನಗರ