ಜಿಲ್ಲೆ

ಏ.29ರಿಂದ ಮೇ 6ರ ವರೆಗೆ ಅಂಚೆ ಮತದಾನಕ್ಕೆ ಅವಕಾಶ

80 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲ ಮತದಾರರಿಗೆ ಏ.29ರಿಂದ ಮೇ 6ರ ವರೆಗೆ ಮನೆ ಮನೆಗೆ ತೆರಳಿ ಬ್ಯಾಲೆಟ್ ಪೇಪರ್ ನೀಡಿ ಮತದಾನ ಮಾಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.


ಮೈಸೂರು ವಿಶ್ವ ವಿದ್ಯಾಲಯದ ಸೆನೆಟ್ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸೆಕ್ಟರ್ ಅಧಿಕಾರಿಗಳು ಹಾಗೂ ಮತದಾನ ಪ್ರಕ್ರಿಯೆಯ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು


ಈಗಾಗಲೇ 12 ಡಿ ಅಡಿ ಅರ್ಜಿ ಸಲ್ಲಿರುವವರ ಮನೆ ಮನೆಗೆ ತೆರಳಿ ಮತದಾನ ಅಧಿಕಾರಿಗಳು ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಿಸಬೇಕು. ಈ ಸಂದರ್ಭದಲ್ಲಿ ಮತ ಯಾರಿಗೆ ಚಲಾಯಿಸುತ್ತಾರೆ ಎಂಬುದನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರಕ್ರಿಯೆ ವಿಡಿಯೋ ಮಾಡಲಾಗುವುದು. ಮತದಾನ ಮಾಡಿಸಲು ಆರ್‌ಒಗಳು ರೂಟ್ ಮ್ಯಾಪ್, ನಿಗದಿತ ಸಮಯ, ದಿನಾಂಕವನ್ನು ನೀಡುವರು. ಅ ಸಮಯದಲ್ಲಿ ನಿರ್ದಿಷ್ಟ ವಿಳಾಸಗಳಿಗೆ ತೆರಳಿ ಮತದಾನವನ್ನು ಬ್ಯಾಲೆಟ್ ಪೇಪರ್‌ನಲ್ಲಿ ಪಡೆಯಬೇಕು ಎಂದು ತಿಳಿಸಿದರು.


ಪೋಸ್ಟಲ್ ಬ್ಯಾಲೆಟ್ ಮತದಾನ ಸಂದರ್ಭದಲ್ಲಿ ಅಭ್ಯರ್ಥಿಗಳು ತಮ್ಮ ಏಜೆಂಟ್‌ಗಳನ್ನು ನೇಮಿಸಿಕೊಳ್ಳಲು ಅವಕಾಶವಿರುತ್ತದೆ. ಈ ಸಂಬಂಧ ತಮ್ಮ ಏಜೆಂಟ್‌ಗಳ ವಿವರವನ್ನು ಆರ್‌ಒಗಳಿಗೆ ನೀಡಿರಬೇಕು. ಆರ್‌ಒಗಳಿಂದ ದೃಢೀಕರಿಸಲ್ಪಟ್ಟ ಏಜೆಂಟರ್‌ಗಳು ಮಾತ್ರ ಬ್ಯಾಲೆಟ್ ಮತದಾನ ಪಡೆಯುವ ಸಂದರ್ಭದಲ್ಲಿ ಉಪಸ್ಥಿತರಿರಲು ಅವಕಾಶವಿರುತ್ತದೆ ಎಂದರು.


ಬ್ಯಾಲೆಟ್ ಮತದಾನದ ವೇಳೆ ಯಾವುದೇ ವ್ಯಕ್ತಿ ಪ್ರಭಾವ ಬೀರಲು ಅವಕಾಶ ಇರಬಾರದು. ಮತದಾನ ಮಾಡುವ ವ್ಯಕ್ತಿ ಅಂಧರಾಗಿದ್ದರೆ ಅಥವಾ ಹಾಸಿಗೆಯ ಮೇಲಿದ್ದು ಅಸಕ್ತರಾಗಿದ್ದರೆ ಅಂತವರು 18 ವರ್ಷ ತುಂಬಿದ ಒಬ್ಬರು ವೋಟಿಂಗ್ ಅಸಿಸ್ಟೆಂಟ್ ಅನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಒಬ್ಬ ವೋಟಿಂಗ್ ಅಸಿಸ್ಟೆಂಟ್ ಒಬ್ಬರಿಗೆ ಮಾತ್ರ ಸಹಾಯಕರಾಗಿ ನೇಮಕವಾಗಬಹುದು ಎಂದರು.


ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರು ಯಾವುದೇ ಲೋಪವಾಗದಂತೆ ಕರ್ತವ್ಯ ನಿರ್ವಹಿಸಿ, ತಮಗೆ ಯಾವುದೇ ಅನುಮಾನಗಳಿದ್ದರೆ ಕೇಳಿ ಬಗೆಹರಿಸಿಕೊಳ್ಳಿ, ಗಡಿಬಿಡಿಯಲ್ಲಿ ತೊಂದರೆ ತಂದುಕೊಳ್ಳಬೇಡಿ. ವಿಷಯವನ್ನು ಪೂರ್ಣವಾಗಿ ಅರ್ಥಮಾಡಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು


ಚುನಾವಣಾ ವೀಕ್ಷಕ ರಾಮ್ ಪ್ರತಾಪ್ ಸಿಂಗ್ ಜೊಡನ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜರಾಂ ಸೇರಿದಂತೆ ಸೆಕ್ಟರ್ ಅಧಿಕಾರಿಗಳು, ಪ್ರಿಸೈಡಿಂಗ್ ಅಧಿಕಾರಿಗಳು, ಪೋಲಿಂಗ್ ಅಧಿಕಾರಿಗಳು ಉಪಸ್ಥಿತರಿದ್ದರು.