ಗೋಣಿಕೊಪ್ಪ: ಅಖಿಲ ಅಮ್ಮಕೊಡವ ಸಮಾಜದಲ್ಲಿ ಶುಕ್ರವಾರ ಆಯೋಜಿಸಿದ್ದ ಅಮ್ಮತ್ತೀರ ಕ್ರಿಕೆಟ್ ನಮ್ಮೆ ಲಾಂಚನ ಬಿಡುಗಡೆ ಕಾರ್ಯಕ್ರಮದಲ್ಲಿ ಏ.29ರಿಂದ ಅಮ್ಮಕೊಡವ ಕೌಟುಂಬಿಕ ಅಮ್ಮತ್ತೀರ ಕ್ರಿಕೆಟ್ ಕಪ್ ಆಯೋಜಿಸುವುದಾಗಿ ಪ್ರಕಟಿಸಲಾಯಿತು.
8ನೇ ವರ್ಷದ ಕೌಟುಂಬಿಕ ನಮ್ಮೆಯನ್ನು ಹಾತೂರು ಫೀಲ್ಡ್ ಮಾರ್ಷಲ್ ಕೆ.ಎ.ಕಾರ್ಯಪ್ಪ ಮೈದಾನದಲ್ಲಿ ಏ.29, 30 ಹಾಗೂ ಮೇ 1ರಂದು ಆಯೋಜಿಸಲಾಗಿದೆ. ಅಮ್ಮಕೊಡವ ಜನಾಂಗದ ಕುಟುಂಬ ತಂಡಗಳು ಭಾಗವಹಿಸಲಿದ್ದು, ಜನಾಂಗದ ಒಗ್ಗಟ್ಟಿಗೆ ಪೂರಕವಾಗಿ ನಡೆಸುವುದಾಗಿ ಹಿರಿಯರು ತಿಳಿಸಿದರು.
ಕಡಿಮೆ ಜನಸಂಖ್ಯೆ ಇರುವ ಕುಟುಂಬವನ್ನು ಸೇರಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. 5 ಕುಟುಂಬದ ಸದಸ್ಯರು ಒಂದು ತಂಡವಾಗಿ ಆಡಲಿದ್ದಾರೆ. ಎಲ್ಲರೂ ಒಂದೆಡೆ ಸೇರಬೇಕು. ಕ್ರೀಡೆ ಮೂಲಕ ಒಗ್ಗಟ್ಟು ಕಾಪಾಡಿಕೊಳ್ಳಬೇಕು ಎಂಬ ಉದ್ದೇಶ ಇಟ್ಟುಕೊಂಡಿದ್ದೇವೆ. ಇದೇ ಮೊದಲ ಬಾರಿಗೆ ಅಮ್ಮಕೊಡವ ಕುಟುಂಬಗಳು ಒಟ್ಟಾಗಿ ಸೇರಿಕೊಂಡು ಹಲವು ತಂಡಗಳನ್ನು ರಚಿಸಿಕೊಂಡು ರಿಂಕ್ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಫೈಸೈಡ್ ಮಾದರಿಯಲ್ಲಿ ರಿಂಕ್ ಹಾಕಿ ಕೂಡ ನಮ್ಮೆಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಪ್ರಮುಖರು ತಿಳಿಸಿದರು.
ಒಂದಾಗಿ ಸೇರಲು ಸಹಕಾರಿ:
ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರತ್ಯು ನಂಜುವಮಯ್ಯ ಮಾತನಾಡಿ, ಜನಾಂಗದ ಸದಸ್ಯರು ಒಂದಾಗಿ ಸೇರಲು ಟೂರ್ನಿ ಸಹಕಾರಿಯಾಗಿದೆ. ಜನಾಂಗದ ಗೌರವ ಕಾಪಾಡಿಕೊಳ್ಳುವಂತೆ ಟೂರ್ನಿ ನಡೆಯಬೇಕಿದೆ ಎಂದರು.
ಒಂದು ಕುಟುಂಬ, ಒಂದು ಕನಸು ಎಂಬ ಸಂದೇಶವನ್ನು ಅಮ್ಮತ್ತೀರ ಕಪ್ ಲಾಂಛನದಲ್ಲಿ ಸಾರಲಾಗಿದ್ದು, ಕಾವೇರಿ ಮಾತೆ ಮತ್ತು ಅಮ್ಮತ್ತೀರ ಕುಟುಂಬದ ಮೂಲ ಗ್ರಾಮವಾಗಿರುವ ಬಾಡಗರಕೇರಿಯ ಮೃತ್ಯುಂಜಯ ದೇವರ ಚಿತ್ರದ ಮೂಲಕ ಗೌರವ ನೀಡಲಾಯಿತು. ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.
ಸಮಾಜದ ಕಾರ್ಯದರ್ಶಿ ಪುತ್ತಾಮನೆ ಅನಿಲ್ ಪ್ರಸಾದ್, ಅಮ್ಮತ್ತೀರ ಕುಟುಂಬ ಅಧ್ಯಕ್ಷ ಅಮ್ಮತ್ತೀರ ಪ್ರಸಾದ್, ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಅಮ್ಮತ್ತೀರ ಸುರೇಶ್, ಸಲಹಾ ಸಮಿತಿ ಸದಸ್ಯ ವಾಸುವರ್ಮ, ಸಂಘಟನಾ ಕಾರ್ಯದರ್ಶಿ ರಾಜೇಶ್, ಹಿರಿಯರಾದ ಅಮ್ಮತ್ತೀರ ಅಶೋಕ್ ಇದ್ದರು.