ಜಿಲ್ಲೆ

ಏ.29ರಂದು ಅರಕಲಗೂಡು, ಸಕಲೇಶಪುರಕ್ಕೆ ಖರ್ಗೆ ಆಗಮನ

reportermys

ಹಾಸನ : ಇದೇ ಏ.29ರಂದು ಜಿಲ್ಲೆಯ ಅರಕಲಗೂಡು ಹಾಗು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇ.ಎಚ್ ಲಕ್ಷ್ಮಣ್ ತಿಳಿಸಿದರು.

ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್ ಸೇರಿದಂತೆ ಪಕ್ಷದ ಇತರೆ ಮುಖಂಡರು ಇದೇ 29ರಂದು ಜಿಲ್ಲೆಗೆ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ 10.30ಕ್ಕೆ ಅರಕಲಗೂಡು ಕ್ರೀಡಾಂಗಣದಲ್ಲಿ ಸಭೆ ಏರ್ಪಡಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಸಕಲೇಶಲಪುರ ವಿಧಾನಸಭಾ ಕ್ಷೇತ್ರದ ಬಾಳುಪೇಟೆಯಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದೆ. ಸಭೆಗಳಿಗೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಮೇ 1ಕ್ಕೆ ಅರಸೀಕೆರೆಗೆ ರಾಹುಲ್ ಗಾಂಧಿ ಬರುವುದು ಖಚಿತವಾಗಿದೆ. ಜಿಲ್ಲೆಯಲ್ಲಿ ಏಳು ಕ್ಷೇತ್ರದಲ್ಲಿ ಉತ್ತಮ ಅಭ್ಯರ್ಥಿಗಳು ಸ್ಪರ್ಧಿಸಲು ಕಣಕ್ಕಿಳಿದಿದ್ದಾರೆ. ಏಳು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ. ಪಕ್ಷದಿಂದ ನಾಲ್ಕು ಗ್ಯಾರಂಟಿ ಕಾರ್ಡ್ ನೀಡಿದ್ದೇವೆ. ಜನಪರ ಕೆಲಸ ಮಾಡಲು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಜನರು ಬೆಂಬಲ ನೀಡಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಾಗೂರು ಮಂಜೇಗೌಡ, ಕಾಂಗ್ರೆಸ್ ಪಕ್ಷದ ಮುಖಂಡರಾದ ದೇವರಾಜೇಗೌಡರು, ತಾರಾ ಚಂದನ್, ಹಿರಿಯ ಮುಖಂಡ ಎಚ್.ಕೆ. ಮಹೇಶ್ ಸೇರಿದಂತೆ ಇತರರು ಹಾಜರಿದ್ದರು.