ಜಿಲ್ಲೆ

ಏ. 27ರಂದು ನಗರದಲ್ಲಿ ನಮ್ಮೂರ ವರನಟ ವಿಚಾರ ಸಂಕಿರಣ

ಚಾಮರಾಜನಗರ: ಕರ್ನಾಟಕ ಸಾಹಿತ್ಯ ಅಕಾಡಮಿ ಬೆಂಗಳೂರು ಮತ್ತು ಚಾಮರಾಜನಗರದ ರಂಗವಾಹಿನಿ ಸಂಸ್ಥೆ ಹಾಗೂ ಚಕೋರ ಸಾಹಿತ್ಯ ವೇದಿಕೆ ಸಂಯುಕ್ತಾಶ್ರಯದಲ್ಲಿ ಪದ್ಮಭೂಷಣ ಡಾ. ರಾಜ್‌ಕುಮಾರ್ ಕುರಿತ ನಮ್ಮೂರ ವರನಟ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಏಪ್ರಿಲ್ 27ರಂದು ಬೆಳಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಕಾರ್ಯಕ್ರಮ ಉದ್ಘಾಟಿಸುವರು. ಚಾಮರಾಜನಗರದ ದೀನಬಂಧು ಸಂಸ್ಥೆಯ ಮುಖ್ಯಸ್ಥ ಪ್ರೊ. ಜಿ.ಎಸ್. ಜಯದೇವ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಕೆ. ವೆಂಕಟರಾಜು ಕಾರ್ಯಕ್ರಮದ ಆಶಯ ನುಡಿಗಳನ್ನಾಡುವರು.

ಖ್ಯಾತ ಚಲನಚಿತ್ರ ಕಥೆಗಾರ ಬಿ.ಎ. ಮಧು, ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಪಾಪು ವೆಂಕಟರಮಣಸ್ವಾಮಿ, ಚಲನಚಿತ್ರ ನಿರ್ಮಾಪಕ ಎಸ್.ಎ.ಶ್ರೀನಿವಾಸ್, ಸಮಾಜ ಸೇವಕರು ಹಾಗೂ ರಾಣಿ ಐಶ್ವರ್ಯ ಗ್ರೂಪ್‌ನ ಎಚ್.ಎಲ್. ಸತೀಶ್ ಮುದ್ದೂರು ಭಾಗವಹಿಸುವರು.

ವೇದಿಕೆ ಕಾರ್ಯಕ್ರಮದ ಬಳಿಕ ನಡೆಯಲಿರುವ ಮೊದಲನೇ ಗೋಷ್ಠಿಯಲ್ಲಿ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಡಾ. ರಾಜ್‌ಕುಮಾರ್ ಮತ್ತು ಕನ್ನಡ ಸಂವೇದನೆ ಕುರಿತು ಉಪನ್ಯಾಸ ನೀಡುವರು. ಎರಡನೇ ಗೋಷ್ಠಿಯಲ್ಲಿ ಕರ್ನಾಟಕದ ಗ್ರಾಮೀಣ ಬದುಕಿನ ಮೇಲೆ ಡಾ. ರಾಜ್‌ಕುಮಾರ್ ಬೀರಿದ ಪ್ರಭಾವ ಕುರಿತು ಮಾತನಾಡುವರು. ಮೂರನೇ ಗೋಷ್ಠಿಯಲ್ಲಿ ಖ್ಯಾತ ಚಲನಚಿತ್ರ ಸಾಹಿತಿ ಡಾ. ಕೃಷ್ಣಮೂರ್ತಿ ಚಮರಂ ಅವರು ಡಾ. ರಾಜ್‌ಕುಮಾರ್ ಸಿನಿಮಾಗಳಲ್ಲಿ ತಳ ಸಮುದಾಯಗಳ ಚಿತ್ರಣ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ. ನಾಲ್ಕನೇ ಗೋಷ್ಠಿಯಲ್ಲಿ ಚಲನಚಿತ್ರ ನಟ ಹಾಗೂ ಮೈಸೂರಿನ ರಂಗ ಸಂಘಟಕರಾದ ಮಂಡ್ಯ ರಮೇಶ್ ಉಪನ್ಯಾಸ ನೀಡುವರು.

ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಬಳಿಕ ಲೋಕೇಶ್ ಕೊಳ್ಳೇಗಾಲ, ಡಾ. ಸುಗಂಧರಾಜು, ರಾಮದಾಸ್, ನಟರಾಜ್ ಹರದನಹಳ್ಳಿ, ಸಿ.ಎಂ. ವೆಂಕಟೇಶ್, ರಾಜಣ್ಣ, ಶಿವಣ್ಣ ಮಂಗಲ ಹೊಸೂರು, ಕಲೆ ನಟರಾಜ್, ಮಾಂಬಳ್ಳಿ ಅರುಣ್‌ಕುಮಾರ್, ಲತಾ ಪುಟ್ಟಸ್ವಾಮಿ, ರಾಕ್ ಗಿರೀಶ್, ಕೃಷ್ಣಕುಮಾರ್ ಹನೂರು ಇವರಿಂದ ಡಾ. ರಾಜ್‌ಕುಮಾರ್ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.