ಜಿಲ್ಲೆ

ಏ.25ರಂದು ಜನತಾ ಜಲಧಾರೆಗೆ ಚಾಲನೆ : ಅಂದು ಮುಳಬಾಗಿಲಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಭಾಗಿ

ವಿಜಯವಾಣಿ ಸುದ್ದಿಜಾಲ ಕೋಲಾರ ಮಳೆಯಾಧಾರಿತ ಜಿಲ್ಲೆಯಲ್ಲೂ ಜೆಡಿಎಸ್​ ಜನತಾ ಜಲಧಾರೆ ಯಾತ್ರೆಯನ್ನು ಏ.25ರಿಂದ ಆರಂಭಿಸಲು ಸಿದ್ಧತೆ ನಡೆಸಿದೆ. 2023ಕ್ಕೆ ಜನತಾ ಸರ್ಕಾರ ಸ್ಥಾಪಿಸುವ ಉದ್ದೇಶದಿಂದ ನಾಡಿನ 15 ಜೀವ ನದಿಗಳಿಂದ ನೀರು ಸಂಗ್ರಹಿಸಿ ಏ.16ರಿಂದ ರಾಜ್ಯದೆಲ್ಲೆಡೆ ಏಕಕಾಲಕ್ಕೆ ಯಾತ್ರೆ ಆರಂಭಕ್ಕೆ ನಿರ್ಧರಿಸಿರುವ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ, ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯಲ್ಲಿ ಏ.25ರಂದು ಪ್ರವಾಸ ಕೈಗೊಳ್ಳಲಿದ್ದಾರೆ. ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎಫ್​ ಹಾಗೂ ಬಂಗಾರಪೇಟೆ ತಾಲೂಕಿನಲ್ಲಿ ಪುಣ್ಯಜಲ ಸಂಗ್ರಹಣೆ ಮಾಡಿ ಆ ನೀರಿಗೆ ಜನರಿಂದ ಪೂಜೆ ಮಾಡಿಸಿ ಮುಂದಿನ ಚುನಾವಣೆಯಲ್ಲಿ ಅಧಿಕಾರ ಹಿಡಿಯುವುದು ಪಕ್ಷದ ವರಿಷ್ಠರ ಆಶಯವಾಗಿದ್ದು, ಈ ಸಂಬಂಧ ಏ.22ರಂದು ಜಿಲ್ಲೆಯ ಜೆಡಿಎಸ್​ ಮುಖಂಡರು ಸಿದ್ಧತೆ ಪ್ರಾರಂಭಿಸಲಿದ್ದಾರೆ. ಏ.25ರಂದು ಅಂತರಗಂಗೆ ಬೆಟ್ಟದಲ್ಲಿನ ಕಾಶಿ ವಿಶ್ವನಾಥ ದೇವಾಲಯದ ಬಳಿಯ ಕಲ್ಯಾಣಿಗೆ ಬಸವನ ಬಾಯಿಂದ ಹರಿಯುವ ನೀರನ್ನು ಸಂಗ್ರಹಣೆ ಮಾಡುವ ಮೂಲಕ ತಾಲೂಕಿನ ಜೆಡಿಎಸ್​ ಮುಖಂಡರು ಯಾತ್ರೆ ಆರಂಭಿಸಲಿದ್ದು, ಅದೇ ದಿನ ಮುಳಬಾಗಿಲು ತಾಲೂಕಿನ ಪ್ರಸಿದ್ಧ ಪುಣ್ಯ ೇತ್ರವಾದ ಕುರುಡುಮಲೆಯಲ್ಲಿ ಜಲಧಾರೆ ಯಾತ್ರೆಗೆ ಮಾಜಿ ಪ್ರಧಾನಿ ದೇವೇಗೌಡ ಅವರು ಚಾಲನೆ ನೀಡುವರು. ಅಲ್ಲಿನ ಬತ್ತದ ಕಲ್ಯಾಣಿಯೊಂದರಿಂದ ಜಲ ಸಂಗ್ರಹಣೆ ಮಾಡಿ ಪೂಜೆ ಸಲ್ಲಿಸಲಿದ್ದಾರಲ್ಲದೆ, ಪಕ್ಷದಿಂದ ಹಮ್ಮಿಕೊಂಡಿರುವ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ. ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ನೇತೃತ್ವದ ತಂಡ ಶ್ರೀನಿವಾಸಪುರದಲ್ಲಿ ಹಮ್ಮಿಕೊಂಡಿರುವ ಜಲಧಾರೆ ಯಾತ್ರೆಯಲ್ಲಿ ಪಾಲ್ಗೊಳ್ಳಲಿದೆ. ಈ ತಾಲೂಕಿನ ಗಡಿ ಗ್ರಾಮದ ಕೆರೆಯಲ್ಲಿ ಸದಾ ಸಂಗ್ರಹಣೆಯಲ್ಲಿರುವ ನೀರನ್ನು ಸಂಗ್ರಹಣೆ ಮಾಡಿ ಪೂಜೆ ಸಲ್ಲಿಸುವುದಲ್ಲದೆ, ಕುಡಿಯಲು ಹಾಗೂ ಕೃಷಿಗೆ ನೀರು ಒದಗಿಸಲು ಜೆಡಿಎಸ್​ ರೂಪಿಸಿರುವ ಕಾರ್ಯಕ್ರಮಗಳ ಬಗ್ಗೆ ಕುಮಾರಸ್ವಾಮಿ ಮಾಹಿತಿ ನೀಡಲಿದ್ದಾರೆ. ಬಂಗಾರಪೇಟೆ ತಾಲೂಕಿನ ಯರಗೋಳ್​ ಡ್ಯಾಮ್​ನಲ್ಲಿ ಕಳೆದ ವರ್ಷ ಸುರಿದ ಮಳೆಯಿಂದಾಗಿ 84 ಅಡಿ ನೀರು ಸಂಗ್ರಹಣೆ ಆಗಿತ್ತು, ಪ್ರಸ್ತುತ 72 ಅಡಿ ನೀರು ಇದೆ, ಮಳೆ ನೀರನ್ನು ಸಂಗ್ರಹಣೆ ಮಾಡುವುದಲ್ಲದೆ, ಡ್ಯಾಮ್​ ಬಳಿಯೇ ದೊಡ್ಡ ಮಟ್ಟದ ಕಾರ್ಯಕ್ರಮ ರೂಪಿಸಲು ಮುಖಂಡರು ನಿರ್ಧರಿಸಿದ್ದಾರೆ. ಯರಗೋಳ್​ ಯೋಜನೆಗೆ ಚಾಲನೆ ನೀಡಲು ಸರ್ಕಾರ ತೋರುತ್ತಿರುವ ವಿಳಂಬ ನೀತಿ ಹಾಗೂ ತಾಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಕುರಿತು ಕುಮಾರಸ್ವಾಮಿ ಮಾತನಾಡುವರು. ಕೆಜಿಎಫ್​ ತಾಲೂಕಿನ ಕಮ್ಮಸಂದ್ರದಲ್ಲೂ ಗಂಗೆಯನ್ನು ಸಂಗ್ರಹಣೆ ಮಾಡಿ ಜಲಧಾರೆಯ ವಿಚಾರವನ್ನು ಜನರಿಗೆ ಮುಟ್ಟಿಸುವುದು ಜೆಡಿಎಸ್​ ಉದ್ದೇಶವಾಗಿದೆ.

ಏ.25ರಂದು ಜಿಲ್ಲೆಯಲ್ಲಿ ಜನತಾ ಜಲಧಾರೆ ಯಾತ್ರೆ ಆರಂಭವಾಗಲಿದೆ. ಜೆಡಿಎಸ್​ ನಾಯಕರಾದ ಎಚ್​.ಡಿ.ದೇವೇಗೌಡ, ಎಚ್​.ಡಿ.ಕುಮಾರಸ್ವಾಮಿ ಭಾಗವಹಿಸುವರು. ಮಾಲೂರು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಜಲಧಾರೆ ಯಾತ್ರೆ ನಡೆಯಲಿದೆ. ನಮ್ಮ ಜಿಲ್ಲೆಯಲ್ಲಿ ನದಿ ಮೂಲಗಳು ಇಲ್ಲದಿದ್ದರೂ, ಲಭ್ಯವಿರುವ ಜಲಧಾರೆಯನ್ನು ಸಂಗ್ರಹಿಸಿ ಕಾರ್ಯಕ್ರಮದ ಉದ್ದೇಶವನ್ನು ಜನರಿಗೆ ತಿಳಿಸಲಾಗುತ್ತದೆ. ಗಂಗಾರಥ ಯಶಸ್ವಿಗೆ ಪಕ್ಷದ ಎಲ್ಲ ಮುಖಂಡರು ಶ್ರಮಿಸಲಿದ್ದಾರೆ. ಇಂಚರ ಗೋವಿಂದರಾಜು, ವಿಧಾನ ಪರಿಷತ್​ ಸದಸ್ಯ, ಕೋಲಾರ