ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಡಾ.ಎಂ.ವೆಂಕಟಸ್ವಾಮಿ ಮಾತನಾಡಿದರು. ದಿಲ್ಶಾದ್ ತಹಸೀಲ್ದಾರ್, ಪರಶುರಾಮ ಶಿಂಧೆ, ಹನುಮಂತ ಅಗಸಿಮನಿ ಇತರರಿದ್ದರು. 
ಜಿಲ್ಲೆ

ಏ.17ರಂದು ಬೆಳಗಾವಿಯಲ್ಲಿ ಬೃಹತ್ ಸಮ್ಮೇಳನ

ಬೆಳಗಾವಿ: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಪಕ್ಷ ಪುನಶ್ಚೇತನಗೊಳಿಸಲು ಏಪ್ರಿಲ್ 17ರಂದು ಬೆಳಗಾವಿಯಲ್ಲಿ ಕೇಂದ್ರ ಸಚಿವ ರಾಮದಾಸ್ ಅಠವಳೆ ನೇತೃತ್ವದಲ್ಲಿ ಬೃಹತ್ ಸಮ್ಮೇಳನ ಆಯೋಜಿಸಲಾಗಿದೆ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ) ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಎನ್‌ಡಿಎ ಮೈತ್ರಿಕೂಟದಲ್ಲಿ ಪಕ್ಷ ಗುರುತಿಸಿಕೊಂಡಿರುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತು ಬಿಜೆಪಿ ಕೈಗೊಳ್ಳುವ ನಿರ್ಧಾರದ ಮೇಲೆ ನಮ್ಮ ಪಕ್ಷ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು, ತತ್ತ್ವ-ಸಿದ್ಧಾಂತಗಳು ಮತ್ತು ಅವರು ಭಾರತ ದೇಶಕ್ಕೆ ನೀಡಿದ ಕಾರ್ಯಕ್ರಮಗಳು ಪ್ರಚಲಿತಗೊಳ್ಳುತ್ತಿವೆ. ಅಂಬೇಡ್ಕರ್ ವಾದಗಳನ್ನು ವಿರೋಧಿಸುತ್ತ ಬಂದಿರುವ ಕಾಂಗ್ರೆಸ್ ಹುನ್ನಾರಗಳಿಂದ ಆರ್‌ಪಿಐ ಪಕ್ಷವು ದೇಶದಲ್ಲಿ ಆಳುವ ಪಕ್ಷವಾಗಿ ಹೊರಹೊಮ್ಮಲಾಗಿಲ್ಲ. ಕಾಂಗ್ರೆಸ್ ಕುತಂತ್ರ, ಅಕ್ರಮದಿಂದಾಗಿ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ. ಇದೀಗ ಪಕ್ಷವನ್ನು ಪುನಶ್ಚೇತನಗೊಳಿಸುವುದು ಅವಶ್ಯಕವಾಗಿದೆ. ಶೋಷಿತ ಸಮುದಾಯಗಳ ಜನರು ದೇಶವನ್ನಾಳುವ ಜನವಾಗಬೇಕು ಎಂಬ ಉದ್ದೇಶದಿಂದ ಪಕ್ಷ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ನಗರದ ಗಾಂಧಿ ಭವನದಲ್ಲಿ ಏಪ್ರಿಲ್ 17ರಂದು ಬೆಳಗ್ಗೆ 11:30ಕ್ಕೆ ನಡೆಯುವ ರಾಜ್ಯ ಕಾರ್ಯಕಾರಿಣಿ ಮತ್ತು ಜಿಲ್ಲಾ ಸಮ್ಮೇಳನದಲ್ಲಿ 5,000ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ರಾಮದಾಸ್ ಅಠವಳೆ ನೇತೃತ್ವದಲ್ಲಿ ನಡೆಯುವ ಸಮ್ಮೇಳನದಲ್ಲಿ ವಿವಿಧ ರಾಜ್ಯ, ಜಿಲ್ಲೆಗಳಿಂದ ವಿವಿಧ ದಲಿತ ಸಂಘಟನೆಗಳ ಮುಖಂಡರು, ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸಂಸದೆ ಮಂಗಲ ಅಂಗಡಿ, ಶಾಸಕರು ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ದಿಲ್ಶಾದ್ ತಹಸೀಲ್ದಾರ್, ಜಿಲ್ಲಾಧ್ಯಕ್ಷ ಪರಶುರಾಮ ಶಿಂಧೆ, ಹನುಮಂತ ಅಗಸಿಮನಿ, ದಿವಾನ್‌ಬಾಬು ಸಾಹೇಬ್ ದೇಸಾಯಿ ಇತರರಿದ್ದರು.