ಮೈಸೂರು: ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ.7.5ಕ್ಕೆ ಏರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ವತಿಯಿಂದ ನಗರದ ಪುರಭವನದ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.
ಎಸ್‌ಟಿ ಪಟ್ಟಿಯಲ್ಲಿ ಸುಮಾರು 56 ಜಾತಿಗಳಿವೆ. 1962ರಲ್ಲಿ ಎಸ್‌ಟಿಗೆ ಶೇ.3ರಷ್ಟು ಮೀಸಲಾತಿ ನೀಡಿದಾಗ ಪರಿಶಿಷ್ಟ ಪಂಗಡದ ಜನಸಂಖ್ಯೆ 8 ಲಕ್ಷ. ಪ್ರಸ್ತುತ ಸುಮಾರು 60 ಲಕ್ಷ ಎಸ್‌ಟಿ ಜನರಿದ್ದು, ಈಗಲೂ ಮೀಸಲಾತಿ ಪ್ರಮಾಣ ಹೆಚ್ಚಾಗದೆ ಶೈಕ್ಷಣಿಕ, ಉದ್ಯೋಗದ ಪ್ರಗತಿಗೆ ತೊಡಕುಂಟಾಗಿದೆ. ಕೇಂದ್ರ ಸರ್ಕಾರ ರಾಜಕೀಯವಾಗಿ ಪ.ಪಂಗಡಕ್ಕೆ ಶೇ.6.75ರಷ್ಟು ಮೀಸಲಾತಿಯನ್ನು ನೀಡಿದೆ. ಆದರೆ ರಾಜ್ಯ ಸರ್ಕಾರ ಈ ವರೆಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ 24ಗಂಟೆಯೊಳಗೆ ಎಸ್‌ಟಿಗೆ ಶೇ.7.5ರಷ್ಟು ಮೀಸಲಾತಿ ನೀಡಲಾಗುವುದು ಎಂದು ಘೋಷಿಸಿದ್ದರು. ಆದರೆ, ಅಧಿಕಾರಕ್ಕೆ ಬಂದು ಒಂದುವರೆ ವರ್ಷವಾದ್ದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.
ಎಸ್‌ಟಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ 7.5ಕ್ಕೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಚಿಸಿದ್ದ ನಿವೃತ್ತ ನ್ಯಾ.ನಾಗಮೋಹನದಾಸ್ ಆಯೋಗದ ವರದಿಯನ್ನು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಬೇಕು. ಜತೆಗೆ, ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಶಿವಕುಮಾರ ಸ್ವಾಮಿ, ಸುತ್ತೂರು ಸುರೇಶ್ ನಾಯಕ, ಬೇಕರಿ ಪುಟ್ಟರಾಜು, ನೃಪತುಂಗ, ಪಾಂಡು, ಬಂಡಹಳ್ಳಿ ಕುಮಾರ್, ಸ್ವಾಮಿ ನಾಯಕ, ಟಿ.ಎನ್.ಮಲ್ಲೇಶ್‌ಕುಮಾರ್, ಉದ್ಬೂರು ಸೋಮಣ್ಣ, ಸಾಲುಂಡಿಸ್ವಾಮಿ ಇನ್ನಿತರರು ಪ್ರತಿಭಟನೆಯಲ್ಲಿದ್ದರು.