ಜಿಲ್ಲೆ

ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆಗೆ ಬಾಲಕರೇ ಹೆಚ್ಚು ಗೈರು!

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮೊದಲ ದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆಗಿಂತಲೂ ಎರಡನೇ ದಿನದ ಗಣಿತ ಪರೀಕ್ಷೆಗೆ ಹೆಚ್ಚಿನ ವಿದ್ಯಾರ್ಥಿಗಳು ಗೈರಾಗಿದ್ದು, ಗಂಡು ಮಕ್ಕಳೇ ಹೆಚ್ಚಾಗಿರುವುದು ವಿಶೇಷ.

ಗುರುವಾರ ನಡೆದ ಆಂಗ್ಲಭಾಷೆ ಪರೀಕ್ಷೆಗೆ 686 ವಿದ್ಯಾರ್ಥಿಗಳು ಗೈರಾಗಿದ್ದರು. ಶನಿವಾರದ ಗಣಿತ ಪರೀಕ್ಷೆಗೆ 425 ಬಾಲಕರು ಮತ್ತು 340 ಬಾಲಕಿಯರು ಸೇರಿ 765 ಮಂದಿ ಗೈರಾದರು.

ಗಣಿತ ಪರೀಕ್ಷೆಗೆ 9,146 ಬಾಲಕರು ಮತ್ತು 8,229 ಬಾಲಕಿಯರು ಸೇರಿ 17,375 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು, 8,721 ಬಾಲಕರು ಮತ್ತು 7,889 ಬಾಲಕಿಯರು ಸೇರಿ 16,610 ಪರೀಕ್ಷೆ ಬರೆದಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲೆಯ 64 ಪರೀಕ್ಷಾ ಕೇಂದ್ರಗಳಲ್ಲಿ ಶನಿವಾರ ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಯಿತು. ಪರಸ್ಪರ ಅಂತರ ಕಾಪಾಡುವಿಕೆ ಮತ್ತು ಮಾಸ್ಕ್ ಧರಿಸಿರುವುದು ಕಂಡು ಬಂತು. ಆರೋಗ್ಯ ಇಲಾಖೆ ಸಿಬ್ಬಂದಿ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಒಳಗೆ ಕಳುಹಿಸಿದರು.

ನೀರು ತರದ ಮಕ್ಕಳು: ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಮನೆಯಿಂದಲೇ ನೀರು ತಂದುಕೊಳ್ಳಬೇಕೆಂಬ ಸೂಚನೆಗೆ ಹಲವರು ಕಿವಿಗೊಟ್ಟಿಲ್ಲ. ಪರೀಕ್ಷೆ ಬರೆಯುವುದರ ನಡುವೆ ನೀರು ಪೂರೈಸಲು ಸಿಬ್ಬಂದಿಯನ್ನು ಒತ್ತಾಯಿಸಿದರು. ಮುಂಜಾಗ್ರತಾ ಕ್ರಮವಾಗಿ ಮನೆಯಿಂದಲೇ ನೀರು ತರಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಹಾಗೆಯೇ ಪಾಲಕರು ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳೊಂದಿಗೆ ಹೆಚ್ಚಿನ ಸಮಯ ಗುಂಪಿನಲ್ಲಿರದೆ ಮನೆಗೆ ತೆರಳಬೇಕು ಎಂದು ತಹಸೀಲ್ದಾರ್ ನಾಗಪ್ರಶಾಂತ್ ಮನವಿ ಮಾಡಿದ್ದಾರೆ.