ಕುಮಟಾ: ವಿಶ್ವಕವಿ ಕುವೆಂಪು ಅವರ 116ನೇ ಜನ್ಮ ದಿನದ ಸ್ಮರಣಾರ್ಥವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶನದಂತೆ ಇತ್ತೀಚೆಗೆ ಕನ್ನಡ ಜಾಗೃತಿ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬ್ಯಾಂಕ್ಗಳಲ್ಲಿ ಕನ್ನಡ ಬಳಕೆಯ ಕುರಿತಂತೆ ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿ ಹಕ್ಕೊತ್ತಾಯ ಮಾಡಲಾಯಿತು.
ಬ್ಯಾಂಕುಗಳಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡಬೇಕು ಹಾಗೂ ಎಟಿಎಂಗಳಲ್ಲಿ ಕನ್ನಡ ಭಾಷೆ ಬಳಕೆಯಾಗಬೇಕು. ಬ್ಯಾಂಕ್ಗಳಲ್ಲಿ ಕನ್ನಡಕ್ಕೆ ಪ್ರಾಧ್ಯಾನ್ಯತೆ ನೀಡುವ ಉದ್ದೇಶದಿಂದ ಬ್ಯಾಂಕಿನ ಜಾಲತಾಣಗಳು ಎಟಿಎಂ ವ್ಯವಹಾರಗಳು ಎಲ್ಲವೂ ಕನ್ನಡದಲ್ಲಿರಬೇಕು. ಸೂಚನಾ ಫಲಕಗಳು ಕನ್ನಡದಲ್ಲಿಯೇ ಇರಬೇಕು. ಗ್ರಾಹಕರು ಚೆಕ್-ಚಲನ್ಗಳನ್ನು ಕನ್ನಡದಲ್ಲಿ ಭರ್ತಿಮಾಡಲು ಬ್ಯಾಂಕ್ಗಳು ಕೂಡ ಪ್ರೋತ್ಸಾಹಿಸಬೇಕು, ನಿತ್ಯ ವ್ಯವಹಾರದ ಅಗತ್ಯದ ಪದಗಳನ್ನು ಸಿದ್ಧಪಡಿಸಿ ಅದನ್ನು ಗ್ರಾಹಕರಿಗೆ ದೊರಕುವಂತೆ ಮಾಡಬೇಕು. ಗ್ರಾಹಕರ ಅನುಕೂಲಕ್ಕಾಗಿ ಕನ್ನಡ ಬಲ್ಲವರನ್ನು ಕನ್ನಡ ಸಂಪರ್ಕಾಧಿಕಾರಿಯಾಗಿ ನೇಮಿಸಿಬೇಕು. ಬ್ಯಾಂಕ್ ಸಿಬ್ಬಂದಿಗೆ ವಾರಕ್ಕೊಮ್ಮೆಯಾದರೂ ಕನ್ನಡ ಸ್ಪರ್ಧೆಗಳನ್ನು ಏರ್ಪಡಿಸಬೇಕು ಎಂದು ಬ್ಯಾಂಕಿನ ವ್ಯವಸ್ಥಾಪಕ ಪ್ರಭಾಕರ ಭಟ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಕನ್ನಡ ಜಾಗೃತಿ ಸಮಿತಿಯ ಜಿಲ್ಲಾ ಸದಸ್ಯ ಎಂ.ಎಂ.ನಾಯ್ಕ, ಶಾಂತಾಬಾಯಿ ಭಟ್, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಚಿದಾನಂದ ಭಂಡಾರಿ, ಗಣೇಶ ಜೋಶಿ, ಶೈಲಾ ಗುನಗಿ, ನಿತ್ಯಾನಂದ ನಾಯ್ಕ, ರಾಜು ಶೇಟ್, ಲಲಿತಾ ನಾಯ್ಕ ಇನ್ನಿತರರು ಇದ್ದರು.