ಹುಬ್ಬಳ್ಳಿ: ಇಲ್ಲಿನ ಮಿನಿವಿಧಾನ ಸೌಧದ ತಾಲೂಕು ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನಿಗೆ (27) ಕರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ 24 ಗಂಟೆ ಸೀಲ್ಡೌನ್ ಮಾಡಲಾಗಿದ್ದು, ಸ್ಯಾನಿಟೇಜೇಷನ್ ಕಾರ್ಯ ನಡೆದಿದೆ.
ಮನೆಗೆ ಬಂದಿದ್ದ ತಮ್ಮ ಗೆಳೆಯನಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಎಸ್ಡಿಸಿ ತಾನೂ ಗಂಟಲ ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದ. ವರದಿ ಪಾಸಿಟಿವ್ ಬಂದಿದ್ದರಿಂದ ಈಗ ಕಿಮ್ಸ್ಗೆ ದಾಖಲಿಸಲಾಗಿದೆ. ವರದಿ ಬರುವವರೆಗೆ ಆತ ಮನೆಯಲ್ಲಿಯೇ ಉಳಿದಿದ್ದನಾದರೂ ಆತನೊಟ್ಟಿಗೆ ಕೆಲಸ ಮಾಡಿದ್ದವರಿಗೆ ನಡುಕ ಶುರುವಾಗಿದೆ. ಆತನ ಸಂಪರ್ಕ ಹೊಂದಿದ್ದ ಕೆಲವರ ಗಂಟಲ ದ್ರವ ಪರೀಕ್ಷೆಯನ್ನೂ ಮಾಡಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಹೊರ ಬಂದ ಸಿಬ್ಬಂದಿ: ಸೋಂಕು ದೃಢಪಟ್ಟ ವರದಿ ಬೆಳಗ್ಗೆ ಅಧಿಕಾರಿಗಳ ಕೈ ಸೇರಿದೆ. ಸುದ್ದಿ ಹೊರಗಡೆ ಹರಡುತ್ತಿದ್ದಂತೆ ಬಹಳಷ್ಟು ನೌಕರರು ಮಿನಿವಿಧಾನ ಸೌಧದಿಂದ ಹೊರಬಂದರು.