ಕಾರವಾರ: ಕರೊನಾ ಮಹಾಮಾರಿಯ ಸಂದಿಗ್ಧ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಶಿಕ್ಷಣ ಇಲಾಖೆಯು ಇತರ ಇಲಾಖೆಗಳ ಸಹಕಾರದೊಂದಿಗೆ ಸಜ್ಜಾಗಿದೆ.
ಜೂನ್ 25ರಿಂದ ಪರೀಕ್ಷೆ ಪ್ರಾರಂಭವಾಗಲಿದ್ದು, ಕಾರವಾರ ಶೈಕ್ಷಣಿಕ ಜಿಲ್ಲೆಯ 38 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು, 9850 ವಿದ್ಯಾರ್ಥಿಗಳು, ಶಿರಸಿ ಶೈಕ್ಷಣಿಕ ಜಿಲ್ಲೆಯ 35 ಪರೀಕ್ಷಾ ಕೇಂದ್ರಗಳಲ್ಲಿ 10324 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದಾರೆ.
ಎಲ್ಲ ಕೇಂದ್ರಗಳಲ್ಲಿ ಈಗಾಗಲೇ ಡೆಸ್ಕ್ , ಬೆಂಚ್ಗಳನ್ನು ಅಂತರದಲ್ಲಿ ಜೋಡಿಸಿ, ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.
ಬುಧವಾರ ಎಲ್ಲ ಮೇಲ್ವಿಚಾರಕರು, ಆರೋಗ್ಯ ಸಿಬ್ಬಂದಿ ಹಾಗೂ ಶಿಕ್ಷಕರನ್ನು ಕರೆಸಿ ಕಲ್ಪಿತ ಪ್ರದರ್ಶನ ಪ್ರಕ್ರಿಯೆ ನಡೆಸಲಾಯಿತು. ಅಧಿಕಾರಿಗಳು ಆಯ್ದ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಪ್ರತಿ ಪರೀಕ್ಷೆಯ ನಂತರ ಎಲ್ಲ ಕೊಠಡಿಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ.
532 ಖಾಸಗಿ ವಿದ್ಯಾರ್ಥಿಗಳು: ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 364 ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 168 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಹೆಸರು ನೋಂದಾಯಿಸಿದ್ದಾರೆ. ಅವರಿಗಾಗಿ ಶಿರಸಿ ಹಾಗೂ ಕಾರವಾರದಲ್ಲಿ ಪ್ರತ್ಯೇಕ ಪರೀಕ್ಷಾ ಕೇಂದ್ರ ಗುರುತಿಸಲಾಗಿದೆ. ಹೊರ ಜಿಲ್ಲೆಗಳಿಂದ 72 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಜಿಲ್ಲೆಗೆ ಬರುತ್ತಿದ್ದಾರೆ.
200 ಬಸ್ಗಳು: ದಾಂಡೇಲಿ ಹಾಗೂ ಹಳಿಯಾಳ ಹೊರತುಪಡಿಸಿ ಉಳಿದೆಲ್ಲ ಸಾರಿಗೆ ಘಟಕಗಳು ಶಿರಸಿ ಎನ್ಡಬ್ಲ್ಯುಕೆಆರ್ಟಿಸಿ ವಿಭಾಗಕ್ಕೆ ಒಳಪಡುತ್ತಿದ್ದು, ಈ ವ್ಯಾಪ್ತಿಯಲ್ಲಿ 200 ವಿಶೇಷ ಬಸ್ಗಳನ್ನು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಿಡಲಾಗುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಪ್ರಯಾಣ ಸಂಪೂರ್ಣ ಉಚಿತವಾಗಿದೆ. ಬೆಳಗ್ಗೆ 8.30 ಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪುವಂತೆ ಹಾಗೂ ಮಧ್ಯಾಹ್ನ ಪರೀಕ್ಷೆ ಮುಗಿದ ನಂತರ ಮನೆಗೆ ತಲುಪುವಂತೆ ಈ ಬಸ್ ವ್ಯವಸ್ಥೆ ಇರಲಿದೆ. ಅಲ್ಲದೆ, ನಿಗಮದ ಸಾಮಾನ್ಯ ಬಸ್ಗಳಲ್ಲೂ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಉಚಿತ ಪ್ರಯಾಣ ಮಾಡಬಹುದು.
ಶಿಕ್ಷಕರಿಗೂ ಸವಾಲು: 10. 15 ರಿಂದ ಪರೀಕ್ಷೆ ನಡೆಯಲಿದ್ದು, 7.30 ಕ್ಕೆ ಶಿಕ್ಷಕರು ಕೇಂದ್ರಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. 8.30 ಕ್ಕೆ ವಿದ್ಯಾರ್ಥಿಗಳಿಗೆ ಕೇಂದ್ರಕ್ಕೆ ಬರುವಂತೆ ಸೂಚಿಸಲಾಗಿದೆ. ಎಲ್ಲ ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತೆಯರಿಂದ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತಿದೆ. ಶಿಕ್ಷಕರು ಬೆಳಗ್ಗೆ ಬಂದವರು ಮಧ್ಯಾಹ್ನ 2 ಗಂಟೆಯವರೆಗೂ ಇರಬೇಕಿದೆ. ಅಲ್ಲದೆ, ಕರೊನಾ ಆತಂಕ ಕೂಡ ಶಿಕ್ಷಕರಿಗೆ ಕಾಡುತ್ತಿದೆ.
ಮನೆ ಮನೆಗೆ ತೆರಳಿ ಧೈರ್ಯ ತುಂಬಿದ ಶಿಕ್ಷಕರು: ಶಿಕ್ಷಣಾಧಿಕಾರಿಗಳ ಸೂಚನೆಯಂತೆ ಕಳೆದ ಒಂದು ವಾರದಿಂದ ಕಾರವಾರ ಶೈಕ್ಷಣಿಕ ಜಿಲ್ಲೆಯ ಬಹುತೇಕ ಹೈಸ್ಕೂಲ್ಗಳ ಶಿಕ್ಷಕರು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಮನೆಗಳಿಗೆ ತೆರಳುತ್ತಿದ್ದಾರೆ. ಪ್ರತಿ ವಿದ್ಯಾರ್ಥಿಯನ್ನು ಭೇಟಿಯಾಗಿ ಮಕ್ಕಳು, ಪಾಲಕರಿಗೆ ಧೈರ್ಯ ತುಂಬುತ್ತಿದ್ದಾರೆ. ಮಾಸ್ಕ್ ಬಳಕೆ, ಪರೀಕ್ಷೆಯ ಕುರಿತು ಮಾಹಿತಿ ನೀಡುತ್ತಿದ್ದಾರೆ. ಶಿರಸಿಯ ಸೂರ್ಯನಾರಾಯಣ ಪ್ರೌಢಶಾಲೆಯ ಶಿಕ್ಷಕರು ಮುಖ್ಯಾಧ್ಯಾಪಕ ಗಣೇಶ ಭಟ್ಟ ವಾನಳ್ಳಿ ಅವರ ಮಾರ್ಗದರ್ಶನದಲ್ಲಿ ಪ್ರತಿ ವಿದ್ಯಾರ್ಥಿಯ ಮನೆಗೆ ತೆರಳಿ ಪಾಠ ಮಾಡಿದ್ದಾರೆ. ಸಮೀಪ ಇರುವ ವಿದ್ಯಾರ್ಥಿಗಳನ್ನು ಒಟ್ಟಿಗೆ ಕರೆಸಿ ಪರಸ್ಪರ ಅಂತರದಲ್ಲಿ ಕೂರಿಸಿ ಓದಿದ ವಿಷಯಗಳನ್ನು ಮನನ ಮಾಡಿಸಿದ್ದಾರೆ.
ಪರಸ್ಪರ ಅಂತರ ಕಾಯ್ದುಕೊಳ್ಳಿ: ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಜಿಲ್ಲಾಡಳಿತ ಎಲ್ಲ ವ್ಯವಸ್ಥೆ ಕಲ್ಪಿಸಿದ್ದು, ವಿದ್ಯಾರ್ಥಿಗಳು ವಿಚಲಿತರಾಗಬೇಕಿಲ್ಲ . ಧೈರ್ಯದಿಂದ ಬಂದು ಪರೀಕ್ಷೆ ಬರೆಯಿರಿ ಎಂದು ಶಾಸಕಿ ರೂಪಾಲಿ ನಾಯ್ಕ ಕರೆ ನೀಡಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾಸ್ಕ್ ಧರಿಸಿ ಪರೀಕ್ಷಾ ಕೇಂದ್ರಗಳಲ್ಲಿ ಪರಸ್ಪರ ಅಂತರ ಕಾಪಾಡಿಕೊಳ್ಳಿ ಎಂದು ಸೂಚಿಸಿದ್ದಾರೆ.