ಭದ್ರಾವತಿ: ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮರುಬಳಕೆ ಮಾಡುವ ತಲಾ 2 ಮಾಸ್ಕ್ ವಿತರಿಸಲಾಗುವುದು. ಅಲ್ಲದೆ ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆ ಹಾಗೂ ಸ್ಯಾನಿಟೈಸರ್ ಬಳಕೆ ಕುರಿತು ಮಾಹಿತಿ ಕೂಡ ನೀಡಲಾಗುವುದು ಎಂದು ತಹಸೀಲ್ದಾರ್ ಶಿವಕುಮಾರ್ ಹೇಳಿದರು.
ನಗರದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಎಸ್ಎಸ್ಎಲ್ಸಿ ಪರೀಕ್ಷೆ ಪೂರ್ವ ಸಿದ್ಧತೆ ಕುರಿತ ವಿವಿಧ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಒಂದು ವೇಳೆ ಥಮೋಸ್ಕ್ರೀನಿಂಗ್ನಲ್ಲಿ ತಾಪಮಾನ ಹೆಚ್ಚು ಕಂಡು ಬಂದಲ್ಲಿ ಹಾಗೂ ಕಂಟೇನ್ವೆುಂಟ್ ಜೋನ್ನಿಂದ ಬಂದಂತಹ ವಿದ್ಯಾರ್ಥಿಗಳಿಗಾಗಿ ವಿಶೇಷ ಕೊಠಡಿಗಳಲ್ಲಿ ಆಸನದ ವ್ಯವಸ್ಥೆ ಕಲ್ಪಿಸಿ ಎನ್-95 ಮಾಸ್ಕ್ ನೀಡಿ ಪರೀಕ್ಷೆ ಬರೆಸಲಾಗುವುದು ಎಂದರು.
ತಾಲೂಕಿನಲ್ಲಿ ಗುರುತಿಸಲಾಗಿರುವ ಎಲ್ಲ 15 ಪರೀಕ್ಷಾ ಕೇಂದ್ರಗಳಲ್ಲಿಯೂ ಪರೀಕ್ಷೆ ಆರಂಭಕ್ಕೂ ಮುನ್ನ ಹಾಗೂ ನಂತರ 2 ಬಾರಿ ಸ್ಯಾನಿಟೈಸ್ ಮಾಡುವಂತೆ ಹಾಗೂ ಕಡ್ಡಾಯವಾಗಿ ಪರೀಕ್ಷಾರ್ಥಿಗಳ ಥಮೋ ಸ್ಕ್ರೀನಿಂಗ್ ನಡೆಸುವಂತೆ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ತಪಾಸಣೆ ನಡೆಸಲು ತಂಡಗಳ ರಚನೆ ಮಾಡಲಾಗಿದ್ದು 200 ಮಕ್ಕಳಿಗೆ ಒಂದರಂತೆ, 500 ಮಕ್ಕಳಿದ್ದರೆ ಎರಡು ತಂಡ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗದ 7 ಪರೀಕ್ಷಾ ಕೇಂದ್ರಗಳಲ್ಲಿ ತಾಪಂ ಇಒ ನೇತೃತ್ವದಲ್ಲಿ ಆಯಾ ಗ್ರಾಪಂ ಅಧಿಕಾರಿ, ಸಿಬ್ಬಂದಿಗೆ ಸ್ಯಾನಿಟೈಸರ್ ಹಾಗೂ ತಪಾಸಣೆ ಕಾರ್ಯದ ಜವಾಬ್ದಾರಿ ನೀಡಲಾಗಿದೆ. ಉಳಿದ ನಗರ ವ್ಯಾಪ್ತಿಯ 8 ಪರೀಕ್ಷಾ ಕೇಂದ್ರಗಳಲ್ಲಿ ನಗರಸಭೆ ಅಧಿಕಾರಿಗಳು ಕಾರ್ಯನಿರ್ವಹಿಸುವರು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿಯೂ ಮುಖ್ಯ ಅಧೀಕ್ಷಕರಿದ್ದು ವಿದ್ಯಾರ್ಥಿಗಳು ತರುವ ಮೊಬೈಲ್ ಇನ್ನಿತರೆ ವಸ್ತುಗಳನ್ನು ವಶಕ್ಕೆ ಪಡೆಯಲಿದ್ದಾರೆ ಎಂದರು.
ಉಚಿತ ಪ್ರಯಾಣಕ್ಕೆ ಅವಕಾಶ: ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಲು ಅನುಕೂಲವಾಗುವಂತೆ ಕೆಎಸ್ಆರ್ಟಿಸಿ ಬಸ್ ಹಾಗೂ ಖಾಸಗಿ ಶಾಲಾ ವಾಹನಗಳನ್ನು ಬಳಕೆ ಮಾಡಿಕೊಳ್ಳಲಿದ್ದು ಅವಶ್ಯವಿರುವ ಕಡೆಗೆ ನಿಯೋಜನೆ ಮಾಡಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಬಹುದು ಎಂದು ಶಿವಕುಮಾರ್ ಹೇಳಿದರು. ಕರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಮೂಲಕ ಮಕ್ಕಳ ಆರೋಗ್ಯ ರಕ್ಷಣೆ ಹಾಗೂ ವಿದ್ಯಾರ್ಥಿಗಳ ಮನಸ್ಥಿತಿಯನ್ನು ತಿಳಿಗೊಳಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡುವ ಜವಾಬ್ದಾರಿ ಪ್ರತಿ ಅಧಿಕಾರಿಗಳ ಮೇಲಿದೆ ಎಂದರು.
ಬಿಇಒ ಟಿ.ಎನ್.ಸೋಮಶೇಖರ್, ಟಿಎಚ್ಒ ಡಾ. ಎಂ.ಆರ್.ಗಾಯತ್ರಿ, ತಾಪಂ ಇಒ ಕೊಟ್ರೇಶಪ್ಪ, ನಗರಸಭೆ ಅಧಿಕಾರಿ ರುದ್ರೇಗೌಡ, ಡಿವೈಎಸ್ಪಿ ಸುಧಾಕರ್ನಾಯಕ್, ಚಿದಾನಂದ್, ವಿವಿಧ ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು.