ಜಿಲ್ಲೆ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

ಜಗಳೂರು: ವಿದ್ಯಾರ್ಥಿಗಳು ಭಯ ಬಿಟ್ಟು ಆತ್ಮಸ್ಥೈರ್ಯದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಬೇಕು ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

ಇಲ್ಲಿನ ಪ್ರೇರಣಾ ಸಮಾಜ ಸೇವಾ ಸಂಸ್ಥೆ (ಚರ್ಚ್)ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಒಂದು ಹಬ್ಬ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ತಾಲೂಕು ಆರ್ಥಿಕವಾಗಿ ಹಿಂದುಳಿದಿದ್ದರೂ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದೆ. ತಾಲೂಕಿನ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೂ ಸಾಧನೆ ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ ಮಕ್ಕಳು ರಾಷ್ಟ್ರ ಕಟ್ಟುವ ಕೆಲಸಕ್ಕೆಕೈ ಜೋಡಿಸಬೇಕು ಎಂದರು.

ಊಟಕ್ಕಾಗಿ ಎರಡು ಕಿ.ಮೀ. ನಡೆದ ಮಕ್ಕಳು:
ಬೆಳಗ್ಗೆ 11ಕ್ಕೆ ಆರಂಭವಾಗಬೇಕಿದ್ದ ಕಾರ್ಯಾಗಾರ ಶಾಸಕರು ತಡವಾಗಿ ಬಂದಿದ್ದರಿಂದ ಮಧ್ಯಾಹ್ನ 3.30ಕ್ಕೆ ಶುರುವಾಯಿತು. ಸರ್ಕಾರಿ ಪ್ರೌಢಶಾಲೆಯ 200 ಮಕ್ಕಳಿಗೆ ಊಟ ಕೊಡಿಸಲು ಪಟ್ಟಣಕ್ಕೆ ಎರಡು ಕಿ.ಮೀ. ದೂರ ಬಿಸಿನಲ್ಲೇ ನಡೆಸಿಕೊಂಡು ಕರೆದೊಯ್ಯಲಾಯಿತು. ಇದರಿಂದ ಪಾಲಕರು ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸಂವಾದ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ದರಾಗಿದ್ದೀರಾ, ನಿಮ್ಮ ಶಿಕ್ಷಕರ ಮಾರ್ಗದರ್ಶನ ಹೇಗಿದೆ, ಓದುವ ತಯಾರಿ ನಡೆಸಿದ್ದೀರಾ ಎಂದು ಪ್ರಶ್ನಿಸುವ ಮೂಲಕ ಶಾಸಕ ಎಸ್.ವಿ. ರಾಮಚಂದ್ರ ಸಂವಾದ ಆರಂಭಿಸಿದರು.

ಪರೀಕ್ಷೆ ಎಂದರೆ ನಮಗೆ ಬಯವಿಲ್ಲ, ಶಿಕ್ಷಕರು ನಿರಂತರ ಪಾಠ ಪ್ರವಚನಗಳಿಂದ ಸಿದ್ಧಪಡಿಸಿದ್ದಾರೆ. ಈಗಲೂ ಪರೀಕ್ಷೆ ಎದುರಿಸಲು ರೆಡಿ. ಶೇ. 100 ರಷ್ಟು ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುತ್ತೇವೆ ಎಂದು ಕೆಲ ಮಕ್ಕಳು ವಿಶ್ವಾಸ ವ್ಯಕ್ತಪಡಿಸಿದರು.