?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯಾಗಲಿ

ಹನೂರು : ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯಾಗಬೇಕು...ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗಬೇಕು...ಗ್ರಂಥಾಲಯ ಕಟ್ಟಡ, ಅಡುಗೆ ಕೋಣೆ ನಿರ್ಮಾಣವಾಗಬೇಕು. ಹಾಸ್ಟೆಲ್ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು...

ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯೂ ಆದ ತಾಪಂ ಆಡಳಿತಾಧಿಕಾರಿ ಡಿ.ಸಿ.ಶ್ರುತಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಕೇಳಿ ಬಂದ ಪ್ರಮುಖ ಸೂಚನೆಗಳು. ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಡಿ.ಸಿ.ಶ್ರುತಿ, ಹನೂರು ಶೈಕ್ಷಣಿಕ ವಲಯದಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.58ರಷ್ಟು ಫಲಿತಾಂಶ ಪಡೆದಿರುವುದು ಕಳಪೆ ಸಾಧನೆಯಾಗಿದೆ. ಆದ್ದರಿಂದ ಕೊರತೆ ಇರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನಿಯೋಜಿಸಿ ಫಲಿತಾಂಶ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕು. ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತರಬೇಕು ಎಂದು ಬಿಇಒ ಗುರುಲಿಂಗಯ್ಯ ಅವರಿಗೆ ಸೂಚಿಸಿದರು.

ಕೆಲವು ಶಾಲೆಗಳಲ್ಲಿ ಅಡುಗೆ ಕೋಣೆ ಇಲ್ಲದಿರುವುದರ ಬಗ್ಗೆ ಬಿಸಿಯೂಟ ಸಹಾಯಕ ನಿರ್ದೇಶಕ ರಂಗಸ್ವಾಮಿ ಇದೇ ವೇಳೆ ಗಮನಕ್ಕೆ ತಂದರು. ಅಡುಗೆ ಕೋಣೆ ನಿರ್ಮಿಸಲು ನರೇಗಾ ಯೋಜನೆಯಡಿ ಅವಕಾಶವಿದೆ. ಆದರೆ ಈ ಬಗ್ಗೆ ಕ್ರಮವಹಿಸದಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಶ್ರುತಿ ಅಸಾಮಾಧಾನ ವ್ಯಕ್ತಪಡಿಸಿದರು. ಸಂಬಂಧಪಟ್ಟ ಇಂಜಿನಿಯರ್ ಈ ಕೂಡಲೇ ಅಗತ್ಯ ಕ್ರಮವಹಿಸಬೇಕು. ಪಿಡಿಒಗಳು ಅಡುಗೆ ಕೋಣೆ ನಿರ್ಮಾಣಕ್ಕೆ ಮುತುವರ್ಜಿ ವಹಿಸಬೇಕು. ತಾಪಂ ಹಾಗೂ ಜಿಪಂ ಅನುದಾನದಲ್ಲೂ ಕೋಣೆ ನಿರ್ಮಿಸಲು ಅಗತ್ಯ ಕ್ರಮವಹಿಸುವಂತೆ ತಾಪಂ ಇಒ ಉಮೇಶ್ ಅವರಿಗೆ ಸೂಚಿಸಿದರು.

ಅಂಗನವಾಡಿಗೆ ಕುಡಿಯುವ ನೀರು ಪೂರೈಸಿ: ಅಂಗನವಾಡಿಗಳಲ್ಲಿ ಮಕ್ಕಳಿಗೆ ಹಾಗೂ ಅಡುಗೆ ತಯಾರಿಸಲು ನೀರು ಅತ್ಯವಶ್ಯಕ. ಆದರೆ ಕೆಲವೊಂದು ಕೇಂದ್ರಗಳಲ್ಲಿ ನೀರಿನ ಸಮಸ್ಯೆಯಾಗಿರುವುದು ಸರಿಯಲ್ಲ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ನೀರಿನ ಸಮಸ್ಯೆಗಳಿರುವ ಕೇಂದ್ರಗಳ ಬಗ್ಗೆ ಪಟ್ಟಿ ನೀಡುವಂತೆ ಸಿಡಿಪಿಒ ಅಂಬಿಕಾ ಅವರಿಗೆ ತಿಳಿಸಿದರಲ್ಲದೆ, ಕೂಡಲೇ ಕ್ರಮವಹಿಸಿ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಿ ಸಮರ್ಪಕವಾಗಿ ನೀರು ಪೂರೈಸುವಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಹಾಗೆಯೇ ಅನುಮೋದನೆಗೊಂಡು ಬಾಕಿ ಇರುವ ಅಂಗನವಾಡಿ ಕೇಂದ್ರ ಹಾಗೂ ಗ್ರಂಥಾಲಯ ಕಟ್ಟಡ ನಿರ್ಮಾಣವಾಗಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದು ಸೂಚಿಸಿದರು. ಇನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಆಡಳಿತಾಧಿಕಾರಿ, ಫಲಿತಾಂಶದ ಹೆಚ್ಚಳಕ್ಕೆ ಅಗತ್ಯ ಕ್ರಮವಹಿಸುವುದರ ಮೂಲಕ ಮಕ್ಕಳಿಗೆ ನೀಡುವ ಆಹಾರದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದರು.

ಇದೇ ವೇಳೆ ಪಶು, ಕೃಷಿ, ತೋಟಗಾರಿಕೆ, ಆರೋಗ್ಯ, ಸಾಮಾಜಿಕ ಅರಣ್ಯ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಲಾಯಿತು. ಇನ್ನು ಪಿಡಿಒಗಳ ಸಭೆ ನಡೆಸಿದ ಡಿ.ಸಿ.ಶ್ರುತಿ, ಸರ್ಕಾರದಿಂದ ಸಿಗುವ ಅನುದಾನವನ್ನು ಬಳಕೆ ಮಾಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ತೆರಿಗೆ ಸಂಗ್ರಹವಾಗಬೇಕು. ನರೇಗಾ ಯೋಜನೆಯ ಕೆಲಸ ಕಾರ್ಯಗಳಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿದ್ದರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕಿ ವಿನುತಾ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಗಸ್ವಾಮಿ, ಸೆಸ್ಕ್ ಎಇಇ ರಂಗಸ್ವಾಮಿ, ತಾಪಂ ಎಡಿ ರಾಧಾ ಇತರರು ಇದ್ದರು.