ಜಿಲ್ಲೆ

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಟಾರ್ಗೆಟ್ ಹಂಡ್ರೆಡ್

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳೆದುಕೊಂಡ ನಂ.1 ಪಟ್ಟವನ್ನು ಮರಳಿ ಗಳಿಸಲು ಜಿಲ್ಲಾ ಪಂಚಾಯಿತಿ ಈ ಬಾರಿ ಟಾರ್ಗೆಟ್ 100 ಯೋಜನೆ ರೂಪಿಸಿದೆ.

ರಾಜ್ಯದಲ್ಲಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆ 29 ಅಂಶಗಳ ಅನುಷ್ಠಾನಕ್ಕೆ ಸೂಚಿಸಿತ್ತು. ಅದರ ಬೆನ್ನಲ್ಲೇ ಜಿಪಂ ಸಿಇಒ ಡಾ.ಎಸ್.ಆಕಾಶ್ ನೂತನ ಯೋಜನೆ ರೂಪಿಸಿದ್ದು, ರಾಜ್ಯದಲ್ಲೇ ಮೊಟ್ಟ ಮೊದಲ ಪ್ರಯತ್ನವಾಗಿದೆ.

2023 ರಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಚಿತ್ರದುರ್ಗ ಜಿಲ್ಲೆ ನಂತರದ ಸಾಲಿನಲ್ಲಿ ಕ್ರಮವಾಗಿ 21 ಹಾಗೂ 23ನೇ ಸ್ಥಾನಕ್ಕೆ ಕುಸಿದಿತ್ತು. ಕಳೆದ ವರ್ಷ 7902 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, 2 ಮತ್ತು 3 ನೇ ಪರೀಕ್ಷೆ ಬಳಿಕ ಅನುತ್ತೀರ್ಣರಾದವರ ಸಂಖ್ಯೆ 5800 ಕ್ಕೆ ಇಳಿದಿತ್ತು.

ಏನಿದು ಯೋಜನೆ?

ಜಿಲ್ಲೆಯ ಫಲಿತಾಂಶವನ್ನು 10 ನೇ ಸ್ಥಾನದೊಳಗೆ ತರಬೇಕೆಂಬ ಸಂಕಲ್ಪ ಯೋಜನೆಯಲ್ಲಿ ಅಡಕವಾಗಿದೆ. ಜಿಲ್ಲೆಯಲ್ಲಿ 20 ಮತ್ತು ಅದಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಅನುತ್ತೀರ್ಣರಾದ ಅನುದಾನಿತ ಮತ್ತು ಸರ್ಕಾರಿ 100 ಶಾಲೆಗಳನ್ನು ಆಯ್ದುಕೊಂಡಿದ್ದು, ಫಲಿತಾಂಶ ಸುಧಾರಣೆ ಗುರಿ ಹೊಂದಲಾಗಿದೆ. ಗುರುತಿಸಿದ 100 ಶಾಲೆಗಳಿಗೂ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಫಲಿತಾಂಶದಲ್ಲಿ ಏರಿಕೆ ಸಾಧಿಸಲು ದಾಂಗುಡಿ ಇಡಲಾಗಿದೆ.

ನೋಡಲ್ ಅಧಿಕಾರಿಕಾರಿಗಳಿಗೆ ನಿರ್ದಿಷ್ಟ ಹೊಣೆ ಇದೆ. ಅವರು ಟೆಸ್ಟ್, ಪರೀಕ್ಷೆ, ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಪ್ರತಿ ತಿಂಗಳು ಸಿಇಒಗೆ ಸಲ್ಲಿಸಬೇಕಿದೆ. ಫಲಿತಾಂಶ ಸುಧಾರಣೆಗೆ ‘ಟಾರ್ಗೆಟ್ 100’ ಉತ್ತಮ ಕಾರ‌್ಯಕ್ರಮವಾಗಿದೆ ಎಂದು ಶಾಲೆಯೊಂದರ ನೋಡಲ್ ಅಧಿಕಾರಿ, ಡಯಟ್ ಹಿರಿಯ ಉಪನ್ಯಾಸಕ ಎಸ್.ಬಸವರಾಜು ಅಭಿಪ್ರಾಯಪಟ್ಟಿದ್ದಾರೆ.

ಈಗ ಆಯ್ದ ನೂರು ಶಾಲೆಗಳಲಿ ್ಲಅರ್ಧವಾರ್ಷಿಕೆ ಪರೀಕ್ಷೆ ಹಾಗೂ 10ನೇ ತರಗತಿಯ ಟೆಸ್ಟ್‌ಗಳಿಗೆ ಸಂಬಂಧಿಸಿದಂತೆ ವೆಬ್‌ಕಾಸ್ಟಿಂಗ್‌ಗೆ ನಿರ್ಧರಿಸಲಾಗಿದೆ ಎಂದು ಸಿಇಒ ಡಾ.ಎಸ್.ಆಕಾಶ್ ತಿಳಿಸಿದ್ದಾರೆ. ಈಗಾಗಲೇ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ವೆಬ್ ಕಾಸ್ಟಿಂಗ್ ನಡೆಯುತ್ತಿದ್ದು, ಡಯಟ್ ಬದಲು ಜಿಪಂ ಕಚೇರಿಯಲ್ಲಿ ವೆಬ್‌ಕಾಸ್ಟಿಂಗ್ ಮಾನಿಟರಿಂಗ್ ಸೆಂಟರ್ ಸ್ಥಾಪನೆ ಆಗಿದೆ.

----

ಸ್ಥಳೀಯವಾಗಿ 15 ಅಂಶ ಜಾರಿಗೆ ಒತ್ತು

*ಡಿಸೆಂಬರ್‌ನೊಳಗೆ ಪಠ್ಯಕ್ರಮ ಪೂರ್ಣ* ಶಾಲೆಯಲ್ಲಿ ಪರಿಹಾರ ಬೋಧನೆ * ಶಾಲೆಯಲ್ಲಿ ವಿಶೇಷ ತರಗತಿ * ಮುಖ್ಯಶಿಕ್ಷಕರು, ಶಿಕ್ಷಕರ ಮೊಬೈಲ್ ಬಳಕೆಗೆ ಮಿತಿ* ಶಿಕ್ಷಕರ ದಿನಚರಿ ನಿರ್ವಹಣೆ* ಪ್ರತಿ ವಿದ್ಯಾರ್ಥಿಯ ಪಾಠ ಕಲಿಕೆ ಮೌಲ್ಯಮಾಪನ

* ನಿರಂತರ 7 ದಿನ ಗೈರಾಗುವ ವಿದ್ಯಾರ್ಥಿಗಳ ಮೇಲೆ ನಿಗಾ * ಶಾಲೆಯಿಂದ ಹೊರಗುಳಿದವರನ್ನು ಮರಳಿ ಶಾಲೆಗೆ ಕರೆತರುವುದು.* ನಿಧಾನಗತಿ ಕಲಿಕೆಯವರಿಗೆ ಬಡ್ಡಿ ಪೇರಿಂಗ್* ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದು * ಮಾರ್ನಿಂಗ್ ವೇಕ್‌ಅಪ್ ಕಾಲ್* ಕ್ರೀಡಾ ಅವಧಿ* ವಿದ್ಯಾರ್ಥಿಗಳು ಮೊಬೈಲ್ ದಾಸರಾಗದಂತೆ ನೋಡಿಕೊಳ್ಳುವುದು

ಒಟ್ಟು 29 ಅಂಶಗಳಲ್ಲಿ ಸ್ಥಳೀಯವಾಗಿ 15 ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಒತ್ತು ಕೊಡಲಾಗಿದೆ.

ಜಿಲ್ಲೆಯಲ್ಲಿರುವ ಪ್ರೌಢಶಾಲೆಗಳ ಸಂಖ್ಯೆ-484

ಸರ್ಕಾರಿ-157

ಅನುದಾನಿತ-181

ಅನುದಾನ ರಹಿತ-146

---

ಪ್ರಸಕ್ತ ಸಾಲಿನ ಜಿಲ್ಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸಂಖ್ಯೆ-23790

ಸರ್ಕಾರಿ-6427

ಅನುದಾನಿತ-10700

ಅನುದಾನ ರಹಿತ-6663

--------

ಕೋಟ್

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಆರಂಭಿಸಿರುವ ‘ಟಾರ್ಗೆಟ್-100’ ರಾಜ್ಯದಲ್ಲೇ ಮೊದಲ ಪ್ರಯತ್ನ. ಶಿಕ್ಷಣ ಇಲಾಖೆಯಲ್ಲಿ ಕಮಿಷನರ್ ಆಗಿ ಸಲ್ಲಿಸಿದ್ದ ಸೇವೆ ಆಧರಿಸಿ ಫಲಿತಾಂಶವನ್ನು 10ನೇ ಸ್ಥಾನದೊಳಗೆ ತರುವ ಆಶಯವಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳೂ ಇದನ್ನು ಅನುಸರಿಸಲು ಮುಂದಾಗಿವೆ. ಗುರುತಿಸಿದ ಶಾಲೆಗಳ ಭೇಟಿ ಕಾರ‌್ಯಕ್ರಮವನ್ನು ದಸರೆ ನಂತರ ಚುರುಕುಗೊಳಿಸಲಾಗುವುದು.

ಡಾ.ಎಸ್.ಆಕಾಶ್, ಸಿಇಒ, ಜಿಪಂ, ಚಿತ್ರದುರ್ಗ.

--