ಜಿಲ್ಲೆ

ಎಸ್ಸೆಸ್ಸೆಲ್ಸಿ ಫಲಿತಾಂಶ ಕಲಬುರಗಿಯ ಶೈಕ್ಷಣಿಕ ಅಧಃಪತನ

ಕಲಬುರಗಿ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆಯೂ ಶೈಕ್ಷಣಿಕ ಅಧಃಪತನವನ್ನು ಕಂಡಿದ್ದು, ಪ್ರಸ್ತುತ ಜಿಲ್ಲಾ ರ‍್ಯಾಂಕಿಂಗ್‌ನಲ್ಲಿ 34ನೇ ಸ್ಥಾನವನ್ನು ಪಡೆದು ಕಳೆದ ಬಾರಿಗಿಂತ ಎರಡು ಸ್ಥಾನ ಕೆಳಕ್ಕೆ ಇಳಿದಿದೆ.
2023ರಲ್ಲಿ 29ನೇ ಸ್ಥಾನದಲ್ಲಿದ್ದ ಕಲಬುರಗಿ ಜಿಲ್ಲೆಯೂ ಇದೀಗ ಶೇ.52.04 ಫಲಿತಾಂಶದೊಂದಿಗೆ 34ನೇ ಸ್ಥಾನಕ್ಕೆ ಕುಸಿದಿದೆ. ಪರೀಕ್ಷೆ ಬರೆದ 45580 ವಿದ್ಯಾರ್ಥಿಗಳಲ್ಲಿ 24386 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಬುರಗಿ ಜಿಲ್ಲೆ ಮಾತ್ರವಲ್ಲ ಕಲ್ಯಾಣ ಕರ್ನಾಟಕದ ಯಾದಗಿರಿ 35, ಬೀದರ್ 33, ಕೊಪ್ಪಳ 32, ರಾಯಚೂರು 31, ಬಳ್ಳಾರಿ 28ನೇ ಸ್ಥಾನದಲ್ಲಿದ್ದು, ಫಲಿತಾಂಶ ಪಟ್ಟಿಯಲ್ಲಿ ಕೊನೇ ಸ್ಥಾನದಲ್ಲೇ ಉಳಿದಿದ್ದು, ಈ ಭಾಗದ ಜನರಲ್ಲಿ ಭಾರಿ ನಿರಾಸೆ ಮೂಡಿಸಿದೆ.
ಜನಪ್ರತಿನಿಧಿಗಳ ನಿರಾಸಕ್ತಿ: ಕಲ್ಯಾಣ ಕರ್ನಾಟಕಕ್ಕೆ ೩೭೧ (ಜೆ) ವಿಧಿ ಅಡಿ ಹಲವು ಸೌಲಭ್ಯಗಳು ಬರುತ್ತಿದ್ದರೂ ಸಹ ಅದನ್ನು ಸಮರ್ಪಕವಾಗಿ ಅನುಷ್ಠಾನದಲ್ಲಿ ವೈಫಲ್ಯ ಮತ್ತು ಶೈಕ್ಷಣಿಕ ಆದ್ಯತೆಗಿಂತ ಪರ್ಸೆಂಟೇಜ್ ದೊರೆಯುವ ನಿರ್ಮಾಣ ಕಾಮಗಾರಿಗಳಿಗೆ ಆದ್ಯತೆ ನೀಡಿರುವುದು ಇಂತಹ ದುರಂತಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳೊಬ್ಬರು.