ಬೇಲೂರು: ಬೇಲೂರು ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ 10ನೇ ತರಗತಿಯ ಸಂಕಲನಾತ್ಮಕ ಮೌಲ್ಯಮಾಪನ-01 ಪರೀಕ್ಷೆಯ ಫಲಿತಾಂಶ ವಿಶ್ಲೇಷಣಾ ಪ್ರಗತಿ ಪರಿಶೀಲನೆ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ಹಾಗೂ ತಿಂಗಳ ಗುರಿ 5ರ ಮೂರನೇ ಕಿರು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಸಾಲಿನ ಹತ್ತನೇ ತರಗತಿ ಫಲಿತಾಂಶ ಗುಣಾತ್ಮಕವಾಗಿರಬೇಕು ಎಂಬ ನಿಟ್ಟಿನಲ್ಲಿ ಶಿಕ್ಷಕರ ಪ್ರಯತ್ನ ಸೀಮಿತ ಅವಧಿಗೆ ಮೀಸಲಾಗದೆ ದೀರ್ಘಾವಧಿಯದಾಗಿರಬೇಕು. ಹತ್ತನೇ ತರಗತಿ ಫಲಿತಾಂಶಕ್ಕಾಗಿ ಹಲವು ಚಟುವಟಿಕೆಗಳ ನಡುವೆ ಕ್ರಿಯಾಶೀಲವಾಗಿ ಸಾಗುತ್ತಿರುವುದರಿಂದ ಈ ಬಾರಿ ಉತ್ತಮ ಫಲಿತಾಂಶ ನಿಮ್ಮದಾಗಲಿದೆ.
ಆದ್ದರಿಂದ ಶಾಲೆಗಳ ಮುಖ್ಯ ಶಿಕ್ಷಕರು ಹೆಚ್ಚಿನ ಸಮಯ ಶಾಲೆಯಲ್ಲಿ ಇರಬೇಕು. ವಿದ್ಯಾರ್ಥಿಗಳಲ್ಲಿ ಜ್ಞಾನವನ್ನು ತುಂಬುವ ಮೂಲಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಉತ್ತಮ ಫಲಿತಾಂಶಕ್ಕೆ ಭದ್ರ ಬುನಾದಿ ಹಾಕುವುದಕ್ಕಾಗಿ ಹೆಚ್ಚಿನ ಮುತುವರ್ಜಿ ವಹಿಸಿ ತಿಂಗಳ ಗುರಿ 5 ರ ಮೂರನೆಯ ಕಿರು ಪುಸ್ತಕವನ್ನೂ ಹೊರ ತರುತಿದ್ದೇವೆ. ವಿದ್ಯಾರ್ಥಿಗಳಲ್ಲಿ ಓದಿನತ್ತ ಹಾಗೂ ವಿಷಯವಾರುಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಲಾಗುತ್ತಿದೆ. ಪ್ರತಿಯೊಂದು ಶಾಲೆಯ ಸಂಕಲನಾತ್ಮಕ ಪರೀಕ್ಷೆಯ ಪ್ರಗತಿಯನ್ನು ಪರಿಶೀಲಿಸಲಾಗುತ್ತದೆ ಎಂದರು.
ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮುಳ್ಳಯ್ಯ, ಬಿಆರ್‌ಸಿ ಶಿವಮರಿಯಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ.ಜಗದೀಶ್, ಇಸಿಒಗಳಾದ ರವಿಕುಮಾರ್, ಶಿವಪ್ಪ, ಗೋಪಾಲ್, ಉಮೇಶ್, ಬಾಲಕಿಯರ ಪ್ರೌಢಶಾಲೆ ಮುಖ್ಯ ಶಿಕ್ಷಕ ಚಂದ್ರಶೇಖರ್ ಸೇರಿದಂತೆ ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳಿದ್ದರು.