ಚಿತ್ರದುರ್ಗ: ಹೊಳಲ್ಕೆರೆ ವಿಧಾನಸಭೆ ಕ್ಷೇತ್ರದಲ್ಲಿ ಶೈಕ್ಷಣಿಕ ಪ್ರಗತಿಗೆ ಮುನ್ನುಡಿ ಬರೆಯುವ ಆಶಯ ಹೊತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷ 2 ಕೋಟಿ ರೂ.ಮೀಸಲಿಡುತ್ತಿರುವುದಾಗಿ ಶಾಸಕ ಡಾ.ಎಂ.ಚಂದ್ರಪ್ಪ ಘೋಷಿಸಿದರು.
ಹೊಳಲ್ಕೆರೆ ಸಂವಿಧಾನ ಸೌಧದಲ್ಲಿ ಸೋಮವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕಾರ್ಯಾಗಾರ, ಎರಡು ವರುಷ ಶಿಕ್ಷಣದಲ್ಲಿ ಹರುಷ ಕಾರ್ಯಕ್ರಮ, ವಿಜಯವಾಣಿ ವಿದ್ಯಾರ್ಥಿಮಿತ್ರ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದರು.
ಕಳೆದ ವರ್ಷ 625ಕ್ಕೆ 625 ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂ.ಬಹುಮಾನ ಘೋಷಿಸಿದ್ದೆ. ಇಬ್ಬರು ಮಾತ್ರ ಇದಕ್ಕೆ ಭಾಜನರಾಗಿದ್ದಾರೆ. ಈ ವರ್ಷ ಒಂದು ಹೆಜ್ಜೆ ಮುಂದಿಟ್ಟು ಬಹುಮಾನದ ಮೊತ್ತವನ್ನು 1 ಲಕ್ಷ ರೂ. ಗೆ ಏರಿಸಿದ್ದೇನೆ ಎಂದು ಪ್ರಕಟಿಸಿದರು.
ಹೊಳಲ್ಕೆರೆ ತಾಲೂಕಿನ 200 ವಿದ್ಯಾರ್ಥಿಗಳು 625 ಪೂರ್ಣ ಅಂಕ ಪಡೆಯಬೇಕು ಎಂಬುದು ನನ್ನ ಬಯಕೆ. 200 ಮಕ್ಕಳು ಶೇ.ನೂರು ಅಂಕ ಪಡೆದರೆ ಎಲ್ಲರಿಗೂ ತಲಾ 1 ಲಕ್ಷ ರೂ. ನೀಡಲಾಗುವುದು. ಇದಕ್ಕಾಗಿ 2 ಕೋಟಿ ರೂ. ಎತ್ತಿಡುತ್ತಿದ್ದೇನೆ ಎಂದರು.
ಜಿಲ್ಲೆ ಮಾತ್ರವಲ್ಲ, ರಾಜ್ಯದಲ್ಲಿ ಹೊಳಲ್ಕೆರೆ ಶೈಕ್ಷಣಿಕ ಕೇಂದ್ರವಾಗಿ ರೂಪುಗೊಳ್ಳಬೇಕು ಎಂದ ಸದಾಶಯದಿಂದ ಮಕ್ಕಳಿಗೆ ಪ್ರೋತ್ಸಾಹ ನೀಡಲು ಬಹುಮಾನ ಘೋಷಿಸಿದ್ದೇನೆ. ಇದನ್ನು ಸವಾಲಾಗಿ ಸ್ವೀಕರಿಸಿ ಅಧ್ಯಯನ ಮಾಡುವಂತೆ ಕಿವಿಮಾತು ಹೇಳಿದರು.
ಪರೀಕ್ಷೆಗೆ ಇನ್ನು ಎಂಟು-ಹತ್ತು ತಿಂಗಳು ಸಮಯಾವಕಾಶವಿದೆ. ಕಷ್ಟಪಟ್ಟು ಓದಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಸಂಪಾದಿಸಿ ಮೆಡಿಕಲ್, ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯುವಂತೆ ಸಲಹೆ ನೀಡಿದರು.
ಕಳೆದ ವರ್ಷ 625ಕ್ಕೆ 623 ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳನ್ನು ಆಗಸ್ಟ್ 15 ರಂದು ಪುರಸ್ಕರಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಹೊಳಲ್ಕೆರೆ ತಾಲೂಕಿನ ವಿದ್ಯಾರ್ಥಿಗಳಿಗೆ ಬಸ್‌ಗಳ ವ್ಯವಸ್ಥೆ ಮಾಡಿದ್ದೇನೆ. ಅತ್ಯುತ್ತಮ ಶಿಕ್ಷಕರನ್ನು ನೇಮಿಸಲಾಗಿದೆ. ಕೊಠಡಿಗಳನ್ನು ನಿರ್ಮಿಸಲಾಗಿದೆ.ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸಲು ಹಾಗೂ ಫಲಿತಾಂಶ ಸುಧಾರಣೆ ಬಯಸಿ 60 ಪ್ರೌಢ ಶಾಲೆಗಳಿಗೆ ವಿಜಯವಾಣಿ ವಿದ್ಯಾರ್ಥಿಮಿತ್ರ ಪತ್ರಿಗಳನ್ನು ಸರಬರಾಜು ಮಾಡಲಾಗುತ್ತಿದೆ ಇದರ ಸದುಪಯೋಗ ಪಡೆಯಿರಿ ಎಂದರು.
ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೆಡ್ಡು ಹೊಡೆಯುವ ರೀತಿ ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ನೀಡಲಾಗಿದೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯರಾಗಬೇಕು ಎಂದು ತಿಳಿಸಿದರು.
ವಿಜಯವಾಣಿ ಪತ್ರಿಕೆಯ ಚಿತ್ರದುರ್ಗ ಆವೃತ್ತಿಯ ಸ್ಥಾನಿಕ ಸಂಪಾದಕ ನವೀನ ಎಂ. ಬಿ. ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಪೂರಕವಾಗಿ ಶಾಸಕ ಎಂ.ಚಂದ್ರಪ್ಪ ಅವರು ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಪ್ರತಿಭಾ ಪುರಸ್ಕಾರಕ್ಕೆ ಬಹುಮಾನ ಘೋಷಿಸುವ ಮೂಲಕ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಗೌರವಾಧ್ಯಕ್ಷ ಲೋಕೇಶ್ ಮಾತನಾಡಿ,ಶಿಕ್ಷಣ ಕ್ಷೇತ್ರದ ಪ್ರಗತಿಗೆ ಪೂರಕ ವಾತಾವರಣವನ್ನು ಶಾಸಕರು ಕಲ್ಪಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ಪ್ರಯತ್ನ ನಿರಂತರವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಮಾತನಾಡಿ, ಶೈಕ್ಷಣಿಕ ಪ್ರಗತಿಗೆ ಶಾಸಕರು ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಇದೇ ವೇಳೆ ಗೌರವಿಸಲಾಯಿತು. ವಿವಿಧ ಶಾಲೆಗಳಿಗೆ ಕ್ರೀಡಾ ಸಾಮಗ್ರಿ, ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ, ನೋಟ್‌ಪುಸ್ತಕ ವಿತರಿಸಲಾಯಿತು. ಪುರಸಭೆ ಉಪಾಧ್ಯಕ್ಷೆ ನಾಗರತ್ನ ವೇದ ಮೂರ್ತಿ,ವಿಜಯವಾಣಿ ಪತ್ರಿಕೆ ಪ್ರಸರಣ ವಿಭಾಗದ ಶುಭಾಕರ, ಬಿಆರ್‌ಸಿ ಸುರೇಂದ್ರ ಇದ್ದರು.