ಜಿಲ್ಲೆ

ಎಸ್ಸೆಸ್ಸೆಲ್ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಹುಣಸೂರು: ನಗರದ ಜಯಪ್ರಕಾಶ್ ನಾರಾಯಣ್ ಮೆಮೋರಿಯಲ್ ಜನತಾ ಟ್ರಸ್ಟ್ ವತಿಯಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಉನ್ನತ ವ್ಯಾಸಂಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು.

ನಗರದ ಟ್ರಸ್ಟ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಟ್ರಸ್ಟ್ ಅಧ್ಯಕ್ಷೆ ವಿಜಯಾ ಕರೀಗೌಡರ ನೇತೃತ್ವದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ತಾಲೂಕಿನ ಶ್ರೇಯಸ್ ಸೇರಿದಂತೆ 14 ವಿದ್ಯಾರ್ಥಿಗಳನ್ನು ಟ್ರಸ್ಟ್ ಸದಸ್ಯರು ಸನ್ಮಾನಿಸಿದರು.

ವಿಜಯಾ ಕರೀಗೌಡ ಮಾತನಾಡಿ, ಟ್ರಸ್ಟ್ ವತಿಯಿಂದ ಹಲವು ವರ್ಷಗಳಿಂದ ತಾಲೂಕಿನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ. ಭವಿಷ್ಯದ ದೇಶದ ಪ್ರಜೆಗಳಾದ ವಿದ್ಯಾರ್ಥಿಗಳು ತಮ್ಮ ಸಾಧನೆಯ ಮೂಲಕ ಸುಭದ್ರ ದೇಶ ಕಟ್ಟುವ ಕಾರ್ಯ ನಡೆಸಬೇಕಿದೆ. ಯಾರು ಅಪಹರಿಸಲಾಗದ ಸಂಪತ್ತು ವಿದ್ಯೆಯಾಗಿದ್ದು, ನಿಮ್ಮ ಸಾಧನೆ ನಿಮ್ಮ ಕುಟುಂಬಕ್ಕೆ ಮತ್ತು ಈ ದೇಶದ ಆರ್ಥಿಕ, ಸಾಮಾಜಿಕ, ಮತ್ತು ಶೈಕ್ಷಣಿಕ ಪ್ರಗತಿಗೆ ಮುಡಿಪಾಗಲಿ ಎಂದು ಹಾರೈಸಿದರು.

ಟ್ರಸ್ಟ್‌ನ ಉಪಾಧ್ಯಕ್ಷ ಚಿಕ್ಕಹುಣಸೂರು ಗೋವಿಂದೇಗೌಡ ಮಾತನಾಡಿ, ದೇಶದ ಅಭಿವೃದ್ಧಿಗಾಗಿ ಹೋರಾಟ ನಡೆಸಿದ ಮತ್ತೊಬ್ಬ ಮಹಾತ್ಮ ಜಯಪ್ರಕಾಶ್ ನಾರಾಯಣ್ ಆಗಿದ್ದು, ರಾಷ್ಟ್ರಪಿತ ಬಾಪೂಜಿಯ ಜಯಂತಿಯಂದೇ ಟ್ರಸ್ಟ್ ವತಿಯಿಂದ ತಾಲೂಕಿ ಪ್ರತಿಭಾನ್ವಿತರನ್ನು ಸನ್ಮಾನಿಸಲಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಟ್ರಸ್ಟ್ ಖಜಾಂಚಿ ಕೃಷ್ಣರಾಜ ಗುಪ್ತ, ಸದಸ್ಯರಾದ ಲತಾ ಆನಂದ್, ವೆಂಕಟಪತಿ, ಬಾಬು, ವೆಂಕಟೇಶ್, ಫಜಲ್ ಉಲ್ಲಾ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸುರೇಶ್, ಮುಖಂಡರಾದ ಲಿಂಗರಾಜು, ಪಾಪೇಗೌಡ, ಶಿಕ್ಷಕ ಗೋವಿಂದೇಗೌಡ, ವಿದ್ಯಾರ್ಥಿಗಳು ಮತ್ತು ಪಾಲಕರು ಹಾಜರಿದ್ದರು.