ಜಿಲ್ಲೆ

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗೆ ರೆಡಿ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಜಿಲ್ಲೆಯಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ-1 ಮತ್ತು ಪಿಯುಸಿ-1 ಪರೀಕ್ಷೆಗಳಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾ.21ರಿಂದ ಏ.4ವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ-1ಕ್ಕೆ 6351 ಬಾಲಕರು, 6081 ಬಾಲಕಿಯರು ಸೇರಿ ಒಟ್ಟು 12432 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಚಾಮರಾಜನಗರ ತಾಲೂಕಿನಲ್ಲಿ 15, ಗುಂಡ್ಲುಪೇಟೆಯಲ್ಲಿ 10, ಹನೂರಿನಲ್ಲಿ 9, ಕೊಳ್ಳೇಗಾಲದಲ್ಲಿ 9, ಯಳಂದೂರಿನಲ್ಲಿ 4 ಸೇರಿ ಒಟ್ಟು 47 ಪರೀಕ್ಷಾ ಕೇಂದ್ರಗಳಿವೆ. 30 ಸರ್ಕಾರಿ ಪ್ರೌಢಶಾಲೆಗಳು, 9 ಅನುದಾನಿತ ಪ್ರೌಢಶಾಲೆಗಳು, 8 ಅನುದಾನರಹಿತ ಪ್ರೌಢಶಾಲೆಗಳಲ್ಲಿ ಪರೀಕ್ಷಾ ಕೇಂದ್ರಗಳಿವೆ ಎಂದು ವಿವರಿಸಿದರು.

ಮಾ.1ರಿಂದ 20ವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ-1 ಅನ್ನು ಒಟ್ಟು 7364 ವಿದ್ಯಾರ್ಥಿಗಳು ತೆಗೆದುಕೊಂಡಿದ್ದಾರೆ. 60 ಒಟ್ಟು ಪದವಿ ಕಾಲೇಜುಗಳು, 7 ಸರ್ಕಾರಿ ಪದವಿ ಪೂರ್ವ ಕಾಲೇಜುಗಳು, 4 ಅನುದಾನಿತ ಪದವಿ ಪೂರ್ವ ಕಾಲೇಜು, 6 ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷೇ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ ಎಲ್ಲ ಪರೀಕ್ಷಾ ಕೇಂದ್ರಗಳ ವೆಬ್ ಕ್ಯಾಸ್ಟಿಂಗ್ ಪೂರ್ವ ಸಿದ್ಧತೆ ಮಾಡಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಗೃಹ, ಬೆಳಕು, ಪೀಠೋಪಕರಣ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಪೊಲೀಸರ ಬೆಂಗಾವಲಿನಲ್ಲಿ ಪ್ರಶ್ನೆ ಪತ್ರಿಕೆ ಸರಬರಾಜು ಆಗಲಿದೆ. ಪರೀಕ್ಷಾ ಕೇಂದ್ರದ ಸುತ್ತ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಶುಶ್ರೂಷಕರನ್ನು ನಿಯೋಜನೆ ಮಾಡಲಾಗುತ್ತಿದೆ. ಪರೀಕ್ಷೆ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ ಎಂದರು. ಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಾಲೆ ವಿಭಾಗದ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್, ಪದವಿ ಪೂರ್ವ ವಿಭಾಗದ ಉಪ ನಿರ್ದೇಶಕ ಮಂಜುನಾಥ್‌ಪ್ರಸನ್ನ(ಮಂಜುಕೋಡಿ ಉಗನೆ) ಇದ್ದರು.

ವಿದ್ಯಾರ್ಥಿಗಳಿಗೆ ಅಧಿಕಾರಿಗಳಿಂದ ಹಿತನುಡಿ...

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಹಿತನುಡಿಗಳನ್ನು ಹೇಳಿದ್ದಾರೆ.

ಡಿಸಿ ಶಿಲ್ಪಾನಾಗ್ ಮಾತನಾಡಿ, ವಿದ್ಯಾರ್ಥಿಗಳು ಓದಿದನ್ನು ಮರೆತು ಹೋಗುತ್ತದೆ ಎಂದು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಹೆಚ್ಚು ಪುನರಾವರ್ತನೆ ಮಾಡಬೇಕು. ಅಧ್ಯಯನದ ವೇಳಾಪಟ್ಟಿಯನ್ನು ಪ್ರತಿದಿನ ವಿಷಯವಾರು ಗುರಿ ನಿಗದಿಪಡಿಕೊಂಡು ಕಲಿಕೆಯನ್ನು ಉತ್ತಮಪಡಿಸಿಕೊಳ್ಳಬೇಕು. ಬೇಸಿಗೆ ಕಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯದ ಮೇಲೆ ಕಾಳಜಿವಹಿಸಬೇಕು. ಪರೀಕ್ಷಾ ಲಿತಾಂಶ ಕಲಿಕೆಯ ಅಂತಿಮವಲ್ಲ. ಪಡೆದ ಲಿತಾಂಶದ ಆಧಾರದಲ್ಲಿ ಲೋಪಗಳನ್ನು ಗುರುಸಿಕೊಂಡು ಪ್ರಯತ್ನ ಮುಂದುವರೆಸಿ ಉತ್ತಮ ಸಾಧನೆ ಮಾಡಬೇಕು. ಪಾಲಕರು ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ 1 ತಾಸು ಮುಂಚಿತವಾಗಿಯೇ ಕರೆದುಕೊಂಡು ಹೋಗಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷಾ ಕೇಂದ್ರಗಳಿಗೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಗೆ ಭಯ ಪಡಬಾರದು. ಧೈರ್ಯವಾಗಿ ಪರೀಕ್ಷೆಗಳಿಗೆ ಹಾಜರಾಗಿ. ಈ ಸಲದ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಉತ್ತಮವಾಗಿ ಸಜ್ಜುಗೊಳಿಸಲಾಗಿದೆ. ಉತ್ತಮ ಲಿತಾಂಶ ಬರಲಿದೆ ಎಂದು ಹೇಳಿದರು.

ಧ್ವನಿವರ್ಧಕಗಳ ಕಿರಿಕಿರಿ: ಜಿಲ್ಲೆಯ ಹಲವು ಕಡೆಗಳಲ್ಲಿ ಜಾತ್ರೆಗಳು ನಡೆಯುತ್ತಿವೆ. ದೇಗುಲಗಳ ಮುಂದೆ ಧ್ವನಿವರ್ಧಕಗಳನ್ನು ಅಳವಡಿಸಿ ಗೀತೆಗಳನ್ನು ಹಾಕಲಾಗುತ್ತಿದೆ. ಜೋರು ಸದ್ದಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಓದಿಕೊಳ್ಳಲು ತೊಂದರೆಯಾಗುತ್ತಿದೆ ಎಂಬ ವಿಷಯ ಅಧಿಕಾರಿಗಳ ಗಮನಕ್ಕೆ ಬಂದಿತು. ಈ ಕುರಿತು ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ವಿದ್ಯಾರ್ಥಿಗಳ ಓದಿಗೆ ತೊಂದರೆಯಾಗಬಾರದು. ಸಾರ್ವಜನಿಕರ ಸಹಕಾರ ನೀಡಬೇಕೆಂದರು.

ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳಿಗೆ ಕಿವಿಗೊಡಬಾರದು. ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು. ಪರೀಕ್ಷಾ ಕಾರ್ಯಕ್ಕೆ ಅಡಚಣೆ ಉಂಟು ಮಾಡುವ ಸುಳ್ಳು ಸುದ್ದಿ ಹರಡುವವರ ವಿರುದ್ಧ ನಿರ್ದಾಕ್ಷ್ಯಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು. ಶಿಲ್ಪಾನಾಗ್, ಜಿಲ್ಲಾಧಿಕಾರಿ, ಚಾಮರಾಜನಗರ