ಜಿಲ್ಲೆ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ಸಜ್ಜು

ಧಾರವಾಡ: ಕರೊನಾ ಹಾವಳಿ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಬಹುನಿರೀಕ್ಷಿತ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಗುರುವಾರದಿಂದ ಆರಂಭವಾಗಲಿದ್ದು, ಶಿಕ್ಷಣ ಇಲಾಖೆ ಎಲ್ಲ ಪೂರ್ವ ತಯಾರಿ ಮುಗಿಸಿ ಸುಗಮ ಪರೀಕ್ಷೆಗೆ ಸಜ್ಜಾಗಿದೆ.

ಸರ್ಕಾರದ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್​ಒಪಿ) ಪ್ರಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯಲ್ಲಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಏರ್ಪಡಿಸಲು ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 27,841 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 90 ಪರೀಕ್ಷೆ ಕೇಂದ್ರಗಳು ಹಾಗೂ 17 ಹೆಚ್ಚುವರಿ ಬ್ಲಾಕ್​ಗಳನ್ನು ಸಿದ್ಧಪಡಿಸಲಾಗಿದೆ. ಪರೀಕ್ಷೆ ಅಕ್ರಮ ತಡೆಗೆ ಎಲ್ಲ ಕೇಂದ್ರಗಳಿಗೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕೋವಿಡ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಕೊಠಡಿ, ಆವರಣಗಳಿಗೆ ಸ್ಯಾನಿಟೈಸೇಶನ್ ಮಾಡಲಾಗಿದ್ದು, ಮುನ್ನಾದಿನವಾದ ಬುಧವಾರ ಮತ್ತೊಮ್ಮೆ ದ್ರಾವಣ ಸಿಂಪಡಿಸಲಾಯಿತು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತದಿಂದ ಥರ್ಮಲ್ ಸ್ಕ್ಯಾನರ್​ಗಳನ್ನು ಪೂರೈಸಲಾಗಿದೆ.

ಭಯ, ಗೊಂದಲ ಬೇಡ

ಕೋವಿಡ್ ಹಿನ್ನೆಲೆಯಲ್ಲಿ ಇಲಾಖೆಯಿಂದ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಭಯ, ಗೊಂದಲಕ್ಕೆ ಒಳಗಾಗದೆ ಪರೀಕ್ಷೆಗೆ ಹಾಜರಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾಸ್ಕ್, ಸ್ಯಾನಿಟೈಸರ್ ನೀಡಲಾಗುವುದು. ಪರೀಕ್ಷೆ ಕೇಂದ್ರದಿಂದ ತೆರಳಲು ಬಸ್ ಸೌಕರ್ಯ ಇಲ್ಲದ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಕುರಿತು ಯಾವುದೇ ಮಾಹಿತಿಗೆ ಸಹಾಯವಾಣಿ ಸಂಖ್ಯೆ 1077ಗೆ ಕರೆ ಮಾಡಬೇಕು ಎಂದು ಡಿಡಿಪಿಐ ಮೋಹನಕುಮಾರ ಹಂಚಾಟೆ ಕೋರಿದ್ದಾರೆ.

ಅಣಕು ಪರೀಕ್ಷೆ

ಕರೊನಾ ಹಾವಳಿ ಮಧ್ಯ ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿರುವುದರಿಂದ ಮಕ್ಕಳಲ್ಲಿ ಮಾತ್ರವಲ್ಲದೆ ಪಾಲಕರಲ್ಲೂ ಭಯ ಉಂಟಾಗಿತ್ತು. ಹೀಗಾಗಿ ಸರ್ಕಾರ ಮಕ್ಕಳಲ್ಲಿ ಧೈರ್ಯ ತುಂಬುವ ಕೆಲಸಕ್ಕೆ ಮುಂದಾಗಿತ್ತು. ಇದರ ಬೆನ್ನಲ್ಲೇ ನಗರದಲ್ಲಿ ಬುಧವಾರ ಕೆಲ ಶಾಲೆಗಳಲ್ಲಿ ಅಣಕು ಪ್ರದರ್ಶನ ನಡೆಸಿ ಮಕ್ಕಳಲ್ಲಿನ ಭಯ ಹೋಗಲಾಡಿಸಲು ಯತ್ನಿಸಲಾಯಿತು. ಕೇಂದ್ರಗಳಲ್ಲಿದ್ದ ಆರೋಗ್ಯ ತಪಾಸಣೆ ತಂಡ ಹಾಗೂ ಸಿಬ್ಬಂದಿ, ಮಕ್ಕಳು ಪರೀಕ್ಷೆ ಕೇಂದ್ರಗಳಲ್ಲಿ ಪರಸ್ಪರ ಅಂತರ ಕಾಪಾಡುವುದು, ಮಾಸ್ಕ್ ಧಾರಣೆ, ತಪಾಸಣೆಗೆ ಒಳಗಾಗುವುದು, ಕೊಠಡಿ ಪ್ರವೇಶದ ಕುರಿತು ಸಮಗ್ರ ಮಾಹಿತಿ ನೀಡಿದರು. ಡಿಡಿಪಿಐ ಮೋಹನಕುಮಾರ ಹಂಚಾಟೆ, ನಗರ ಹಾಗೂ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಜರಿದ್ದು, ಮಕ್ಕಳಿಗೆ ಧೈರ್ಯ ತುಂಬಿದರು.

ಕಂಟೇನ್ಮೆಂಟ್​ನಲ್ಲಿ ಕೇಂದ್ರಗಳಿಲ್ಲ

ಜಿಲ್ಲೆಯಲ್ಲಿ 46 ಶಹರ ಮತ್ತು 44 ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷಾ ಕೇಂದ್ರಗಳಿವೆ. ಪರೀಕ್ಷೆ ಕೇಂದ್ರಗಳು ಘೊಷಿತ ಕಂಟೇನ್ಮೆಂಟ್ ವಲಯದಲ್ಲಿಲ್ಲ. ಪರೀಕ್ಷೆ ಕೇಂದ್ರವನ್ನು ಕ್ವಾರಂಟೈನ್ ಕೇಂದ್ರವಾಗಿ ಬಳಸಿಲ್ಲ. ನಗರದ ಮಾಳಮಡ್ಡಿ ಕೆ.ಇ. ಬೋರ್ಡ್ ಶಾಲೆ ಮುಖ್ಯ ದ್ವಾರದ ಸಮೀಪ ಸೀಲ್​ಡೌನ್ ಪ್ರದೇಶವಿದೆ. ಪೊಲೀಸ್ ಆಯುಕ್ತ ಆರ್. ದಿಲೀಪ್ ಸೂಚನೆಯಂತೆ ಬದಲಿ ಮಾರ್ಗದಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ.