ಹುಣಸೂರು: ಪ್ರಸಕ್ತ ಸಾಲಿನಲ್ಲಿ ಮಾ.21ರಿಂದ ಆರಂಭಗೊಳ್ಳಲಿರುವ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಕಲ ಸಿದ್ಧತೆ ಮಾಡಿಕೊಂಡಿದೆ. ವಿದ್ಯಾರ್ಥಿಗಳಲ್ಲಿ ಆಸಕ್ತಿಯೊಂದಿಗೆ ಉತ್ತಮ ರೀತಿಯಲ್ಲಿ ಪರೀಕ್ಷೆಯನ್ನು ಎದುರಿಸಲು ಅಣಿಗೊಳಿಸಿದ್ದು ಕಳೆದ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯಲ್ಲಿ 6 ನೇ ಸ್ಥಾನ ಗಳಿಸಿದ್ದ ಹುಣಸೂರು ತಾಲೂಕು ಈ ಬಾರಿ ಮೊದಲ ಸ್ಥಾನಕ್ಕೇರುವ ಗುರಿಯೊಂದಿಗೆ ಶಿಕ್ಷಕ ವೃಂದ ಅವಿರತ ಶ್ರಮವಹಿಸಿದೆ.
ಶಾಸಕ ಜಿ.ಡಿ.ಹರೀಶ್‌ಗೌಡ ಅವರು ವೈಯಕ್ತಿಕವಾಗಿ ತಾಲೂಕಿನಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಎದುರಿಸುತ್ತಿರುವ 4300 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೈಪಿಡಿಯನ್ನು ಉಚಿತವಾಗಿ ವಿತರಿಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
4316 ಅಭ್ಯರ್ಥಿಗಳು: ಪಾಲಕರಷ್ಟೇ ಅಲ್ಲದೆ, ಶಿಕ್ಷಣ ಇಲಾಖೆ ಕೂಡ ಕಳೆದ 4 ತಿಂಗಳಿಂದ ವಿದ್ಯಾರ್ಥಿಗಳನ್ನು ಓದಿನತ್ತ ಹೆಚ್ಚು ಗಮನಹರಿಸುವಂತೆ ಅಗತ್ಯ ಕ್ರಮಗಳನ್ನು ಅನುಸರಿಸಿದೆ. 2024-25ನೇ ಶೈಕ್ಷಣಿಕ ಸಾಲಿನಲ್ಲಿ ಹುಣಸೂರಿನಲ್ಲಿ ಶಾಲಾ ಅಭ್ಯರ್ಥಿಗಳು, ಪುನರಾವರ್ತಿತ, ಖಾಸಗಿ ಅಭ್ಯರ್ಥಿಗಳು, ಪುನರಾವರ್ತಿತ ಖಾಸಗಿ ಅಭ್ಯರ್ಥಿಗಳು ಸೇರಿದಂತೆ ಒಟ್ಟು 4316 ವಿದ್ಯಾರ್ಥಿಗಳು(2213 ಬಾಲಕರು, 2103 ಬಾಲಕಿಯರು) ಪರೀಕ್ಷೆ ಎದುರಿಸುತ್ತಿದ್ದಾರೆ. ತಾಲೂಕಿನಲ್ಲಿ ಒಟ್ಟು 15 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ತಾಲೂಕು ಹಂತದಲ್ಲಿ 4, ಹೋಬಳಿ ಹಂದಲ್ಲಿ 4 ಮತ್ತು ಗ್ರಾಮೀಣ ಹಂತದಲ್ಲಿ 7 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷಾ ಚಟುವಟಿಕೆಗಳಲ್ಲಿ ಒಟ್ಟು 366 ಅಧಿಕಾರಿಗಳು, ಸಿಬ್ಬಂದಿ ನಿಯೋಜಿಸಲಾಗಿದೆ. ಈ ಪೈಕಿ ಮುಖ್ಯ ಅಧೀಕ್ಷಕರು 15, ಉಪ ಮುಖ್ಯ ಅಧೀಕ್ಷಕರು 3, ಕಸ್ಟೋಡಿಯನ್‌ಗಳು 15, ಸ್ಥಾನಿಕ ಜಾಗೃತ ದಳ 15, ಪೂರ್ಣಾಧಿಕಾರಿಗಳು 6, ಮೊಬೈಲ್ ಸ್ವಾಧೀನಾಧಿಕಾರಿಗಳು 15, ಕೊಠಡಿ ಮೇಲ್ವಿಚಾರಕರು 291 ಮತ್ತು 6 ವಿಚಕ್ಷಣಾ ದಳ ತಂಡವನ್ನು ಹೊಂದಿದೆ.
ಎಲ್ಲ 15 ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿ ಅಳವಡಿಕೆ, ವೆಬ್ ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷಾ ಕೊಠಡಿಯಲ್ಲಿ, ಕಾರಿಡಾರ್‌ಗಳಲ್ಲಿ, ಮುಖ್ಯ ಅಧೀಕ್ಷಕರ ಕೊಠಡಿಯಲ್ಲಿ ಸಿಸಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಅಳವಡಿಸಲಾಗಿದ್ದು ತಾಲೂಕಿನಾದ್ಯಂತ 300ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪ್ರತಿ ಕೇಂದ್ರದಲ್ಲಿ ಕುಡಿಯುವ ನೀರು, ಆಸನ ವ್ಯವಸ್ಥೆ ಮತ್ತು ಪೊಲೀಸ್ ಮತ್ತು ಆರೋಗ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್ ‘ವಿಜಯವಾಣಿ’ಗೆ ಮಾಹಿತಿ ನೀಡಿದರು.
ನಾಲ್ಕು ತಿಂಗಳಿಂದ ತಯಾರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಿಟ್ಟಿಸಿಕೊಳ್ಳುವ ಉದ್ದೇಶದೊಂದಿಗೆ 4 ತಿಂಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅವಿರತ ಶ್ರಮವಹಿಸಿದೆ. ನವೆಂಬರ್-ಡಿಸೆಂಬರ್ ತಿಂಗಳೊಳಗೆ ಒಂದು ಬಾರಿ ಎಲ್ಲ ವಿಷಯವಾರು ಪಾಠಗಳು ಪೂರ್ಣಗೊಂಡಿವೆ. ನಂತರ ಶಾಲೆಗಳಲ್ಲಿ ಪಾಠಗಳ ಪುನರಾವರ್ತನೆ ಆರಂಭಿಸಲಾಗಿದೆ. ಕೆಲವು ಸರ್ಕಾರಿ ಶಾಲೆಗಳಲ್ಲಿ ವಾರಕ್ಕೊಮ್ಮೆ ಯೂನಿಟ್ ಟೆಸ್ಟ್‌ಗಳನ್ನು ನಡೆಸಿ ಮಕ್ಕಳನ್ನು ಹೆಚ್ಚಿನ ಸಮಯ ವ್ಯಾಸಂಗದಲ್ಲೇ ಇರುವಂತೆ ಕ್ರಮವಹಿಸಿದ್ದಾರೆ. ಇದಲ್ಲದೆ ಶಿಕ್ಷಕರಿಗೆ 6 ಬಾರಿ ವಿಷಯವಾರು ಕಾರ್ಯಾಗಾರಗಳನ್ನು ನಡೆಸಲಾಗಿದೆ ಎಂದು ಇಸಿಒ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ನೋಡಲ್ ಅಧಿಕಾರಿ ಹೇಮಂತ್ ಕುಮಾರ್ ತಿಳಿಸಿದರು.
ಹೋಬಳಿ ಹಂತಗಳಲ್ಲಿ ನಿಧಾನಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರಗಳು, ಪ್ರತಿ ಶಾಲೆಯಲ್ಲಿ ಬೆಳಗ್ಗೆ ವಿಶೇಷ ತರಗತಿಗಳು, 6 ಬಾರಿ ಪ್ರಶ್ನೆಪತ್ರಿಕೆ ಕಾರ್ಯಾಗಾರ, ಸಂಜೆಯ ನಂತರ ಗುಂಪು ಅಧ್ಯಯನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಹೋಬಳಿ ಮಟ್ಟದಲ್ಲಿ ಮತ್ತು ಶಾಲಾ ಮಟ್ಟದಲ್ಲೂ ತಾಯಂದಿರ ಸಭೆಗಳನ್ನು ಆಯೋಜಿಸಿ ಮಕ್ಕಳನ್ನು ಓದಿನಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲು ಕೋರಲಾಗಿದೆ. ಪ್ರತಿ ತಿಂಗಳು ಮುಖ್ಯ ಶಿಕ್ಷಕರಿಂದ ಶೈಕ್ಷಣಿಕ ಪ್ರಗತಿ ವರದಿ ಅಥವಾ ನಿರೀಕ್ಷಿತ ಫಲಿತಾಂಶ ದೊರಕದಿದ್ದಾಗ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ಒದಗಿಸಿ ಪ್ರೇರೇಪಿಸಲಾಗಿದೆ. ಜಿಲ್ಲಾ ಉಪನಿರ್ದೇಶಕರು ಕೂಡ ಹಲವು ಕಾರ್ಯಾಗಾರಗಳಲ್ಲಿ ಭಾಗವಹಿಸಿ ಶಿಕ್ಷಕರಿಗೆ ಅಮೂಲ್ಯ ಸಲಹೆ, ಸೂಚನೆಗಳನ್ನು ನೀಡಿದ್ದಾರೆ ಎಂದು ಹೇಮಂತ್ ಕುಮಾರ್ ತಿಳಿಸಿದರು.
--------------
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹುಣಸೂರು ತಾಲೂಕು ಪ್ರಥಮ ಸ್ಥಾನಕ್ಕೇರುವ ಎಲ್ಲ ವಿಶ್ವಾಸ ನನ್ನಲ್ಲಿದೆ. ನಮ್ಮ ಶಿಕ್ಷಕರ ಸಂಘಟಿತ ಪ್ರಯತ್ನ, ವಿದ್ಯಾರ್ಥಿಗಳು ಮತ್ತು ಪಾಲಕರ ಸಹಕಾರ ನನ್ನ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಶಾಸಕ ಹರೀಶ್‌ಗೌಡರಿಂದ ಎಲ್ಲ 4316 ವಿದ್ಯಾರ್ಥಿಗಳಿಗೂ ಉಚಿತವಾಗಿ ಪರೀಕ್ಷಾ ಕೈಪಿಡಿ ವಿತರಿಸುವ ಮೂಲಕ ನಮ್ಮ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರಿಪರೇಟರಿ ಪರೀಕ್ಷೆಗಳಲ್ಲಿ ತಾಲೂಕಿನಲ್ಲಿ ಶೇ.82.5ರ ಫಲಿತಾಂಶ ದೊರಕಿದ್ದು, ವಿದ್ಯಾರ್ಥಿಗಳು ಧೈರ್ಯದಿಂದ, ಸಕಾರಾತ್ಮಕ ಆಲೋಚನೆಗಳೊಂದಿಗೆ ಪರೀಕ್ಷೆಯನ್ನು ಎದುರಿಸಬೇಕೆಂದು ಕೋರುತ್ತೇನೆ.
ಎಸ್.ಪಿ.ಮಹದೇವ್, ಕ್ಷೇತ್ರ ಶಿಕ್ಷಣಾಧಿಕಾರಿ, ಹುಣಸೂರು