ಜಿಲ್ಲೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಧಾರಣೆಗೆ ಪಣತೊಟ್ಟ ಮೈಸೂರು

ಮೈಸೂರು: ಇದು ಪರೀಕ್ಷೆಯ ಕಾಲ. ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಶಿಕ್ಷಕರು ಹಾಗೂ ಅಧಿಕಾರಿಗಳಿಗೂ ಪರೀಕ್ಷೆಯ ಕಾಲ. ಈ ಬಾರಿ ಜಿಲ್ಲೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರಬೇಕು ಎಂದು ಪಣತೊಟ್ಟಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಅದಕ್ಕೆ ಪೂರಕವಾದ ಕಾರ್ಯಯೋಜನೆ ರೂಪಿಸಿದ್ದಾರೆ.

ಪ್ರತಿಯೊಂದು ಶಾಲೆಗಳಲ್ಲೂ ಕಲಿಕೆಯಲ್ಲಿ ಹಿಂದುಳಿಯುವ ವಿದ್ಯಾರ್ಥಿಗಳು ಇದ್ದೇ ಇರುತ್ತಾರೆ. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡುವ ಜವಾಬ್ದಾರಿಯನ್ನು ಶಿಕ್ಷಕರು ಹಾಗೂ ಅಧಿಕಾರಿಗಳಿಗೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಂಜನಗೂಡು ತಾಲೂಕಿನಲ್ಲಿ ಶಿಕ್ಷಕರು, ಅಧಿಕಾರಿಗಳು ಗ್ರಾಮ ವಾಸ್ತವ್ಯ ಕೈಗೊಂಡು ಇತರ ತಾಲೂಕುಗಳಿಗೆ ಮಾದರಿಯಾಗಿ ದ್ದಾರೆ.

ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ದೃಷ್ಟಿಯಲ್ಲಿ ನಂಜನಗೂಡು ತಾಲೂಕು ಹಾಗೂ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಎಲ್ಲರಿಗೂ ಮಾದರಿಯಾಗಿದೆ. ನಂಜನಗೂಡು ತಾಲೂಕು ಹಾಗೂ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿ ಗಳನ್ನು ಗುರುತಿಸಿ ಅವರ ಪಾಲಕರಿಗೆ ಬೆಳ್ಳಂಬೆಳಗೆ ಕರೆ ಮಾಡಿ ವಿದ್ಯಾರ್ಥಿ ಎದ್ದಿದ್ದಾರೆಯೇ? ಓದುತ್ತಿದ್ದಾರೆಯೇ ಎಂದು ಸ್ವತಃ ಅಧಿಕಾರಿ ಗಳು ಹಾಗೂ ಶಿಕ್ಷಕರು ಪರಿಶೀಲಿಸುತ್ತಿದ್ದಾರೆ. ಕೆ.ಆರ್. ಕ್ಷೇತ್ರದಲ್ಲಿ ಶಾಸಕ ಎಸ್.ಎ. ರಾಮದಾಸ್ ಅವರೇ ಈ ಕಾರ್ಯವನ್ನು ಮಾಡುತ್ತಿದ್ದಾರೆ.

ಇಂತಹ ಒಂದು ಉತ್ತಮ ಚಟುವಟಿಕೆಯನ್ನು ಜಿಲ್ಲೆಯಾದ್ಯಂತ ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಫೆ.2 ರಂದು ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯನ್ನು ಡಿಡಿಪಿಐ ಹಮ್ಮಿಕೊಂಡಿದ್ದಾರೆ. ಸಭೆ ಬಳಿಕ ಎಲ್ಲ ತಾಲೂಕುಗಳಲ್ಲಿಯೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವ ಹಾಗೂ ಅವರು ಮನೆಯಲ್ಲಿ ಕಲಿಯುತ್ತಿದ್ದಾರೆಯೇ ಎಂದು ಪರಿಶೀಲಿಸುವ ಕಾರ್ಯ ನಡೆಯಲಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಈ ಬಾರಿ ಉತ್ತಮ ಫಲಿತಾಂಶ ಪಡೆಯಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಲು 77 ಅಂಶಗಳ ಕಾರ್ಯಕ್ರಮವನ್ನು ಸಿದ್ಧಪಡಿಸಿದ್ದು, ಆ ಪ್ರಕಾರ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರಿಗೊಳಿಸಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ, ಶಿಕ್ಷಕರಿಗೆ ತರಬೇತಿ, ಪಾಲಕರ ಸಭೆ, ಶಾಲಾ ಶೈಕ್ಷಣಿಕ ಮೌಲ್ಯಮಾಪನ ಕಾರ್ಯಕ್ರಮ, ಮಕ್ಕಳ ಮನೆಗೆ ಭೇಟಿ, ಮಕ್ಕಳ ಕಡ್ಡಾಯ ಹಾಜರಾತಿ ಸೇರಿದಂತೆ ವಿವಿಧ ಅಂಶಗಳ ಕಡೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಈ ಬಾರಿ 37,475 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಈಗಾಗಲೇ ಬಹುತೇಕ ಪಠ್ಯ ಪೂರ್ಣಗೊಂಡಿದ್ದು, ಪುನರ್ ಮನನ ತರಗತಿಗಳು ಪ್ರಾರಂಭಗೊಂಡಿವೆ. ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳು ಹಾಗೂ ವಿವಿಧ ವಿಷಯಗಳಲ್ಲಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಮಾ. 31 ರಿಂದ ಏ.14ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯಲ್ಲಿ 276 ಸರ್ಕಾರಿ, 134 ಅನುದಾನಿತ, 264 ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು 674 ಶಾಲೆಗಳು ಇವೆ. 19,054 ಬಾಲಕರು, 18,421 ಬಾಲಕಿಯರು ಸೇರಿದಂತೆ ಒಟ್ಟು 37,455 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

ಜಿಲ್ಲೆಯು 2019-20ರಲ್ಲಿ ಶೇ.74.45 ಫಲಿತಾಂಶ ಪಡೆದುಕೊಂಡಿತ್ತು. 2020-21ರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಯಿತು. 2021-22ರಲ್ಲಿ ಶೇ.91.38 ಫಲಿತಾಂಶವನ್ನು ಜಿಲ್ಲೆ ಪಡೆದುಕೊಂಡಿದ್ದು, ಈ ಬಾರಿ ಫಲಿತಾಂಶದಲ್ಲಿ ಮತ್ತಷ್ಟು ಸುಧಾರಣೆ ಕಾಣುವಂತೆ ಮಾಡಲು ಸಿದ್ಧತೆ ಪ್ರಾರಂಭಗೊಂಡಿದೆ.

ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ 77 ಅಂಶಗಳ ಕಾರ್ಯಕ್ರಮ ರೂಪಿಸಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ಉತ್ತಮ ಫಲಿತಾಂಶ ಪಡೆಯಲು ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಕಾರ್ಯ ನಡೆಯುತ್ತ್ದಿು, ವಿದ್ಯಾರ್ಥಿಗಳಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ಹಾಗಾಗಿ ಈ ಬಾರಿ ಉತ್ತಮ ಫಲಿತಾಂಶ ಪಡೆಯುವ ನಿರೀಕ್ಷೆಯನ್ನು ಹೊಂದಿದ್ದೇವೆ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ವಿದ್ಯಾರ್ಥಿಗಳು ಹಾಗೂ ಶಾಲೆಗಳಿಗೆ ಬಹುಮಾನ ನೀಡಲು ಸಾಧ್ಯವೇ ಎಂಬ ಕುರಿತು ಸಹ ಪರಿಶೀಲನೆ ನಡೆಸಲಾಗುತ್ತಿದೆ. ಒಟ್ಟಾರೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ
ರಾಮಚಂದ್ರರಾಜೇ ಅರಸ್, ಡಿಡಿಪಿಐ