ಜಿಲ್ಲೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ,ಟಾಪ್ ಟೆನ್‌ವೊಳಗೆ ಚಿತ್ರದುರ್ಗ ಜಿಲ್ಲೆ

ಚಿತ್ರದುರ್ಗ: ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯುವಂಥ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ಮೂಡಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಡಿಡಿಪಿಐ ಎಂ.ಆರ್.ಮಂಜುನಾಥ್ ಹೇಳಿದರು. ಶಿಕ್ಷಣ ಇಲಾಖೆ, ಸಮಾಜ ವಿಜ್ಞಾನ ಶಿಕ್ಷಕರುಗಳ ಕ್ಲಬ್‌ನಿಂದ ನಗರದ ತರಾಸು ರಂಗ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ತಮ್ಮಲ್ಲಿರುವ ಕೌಶಲ ಬಳಸಿಕೊಂಡು ಮಕ್ಕಳ ಮನಸ್ಸಿಗೆ ನಾಟುವ ರೀತಿ ಪಠ್ಯ ಬೋಧಿಸ ಬೇಕು.

ಹಿಂದುಳಿದ ನಮ್ಮ ಈ ಜಿಲ್ಲೆಯಲ್ಲಿ ರೈತರು, ಶ್ರಮಿಕರು, ಗ್ರಾಮೀಣರ ಮಕ್ಕಳು ಅಧಿಕ ಸಂಖ್ಯೆಯಲ್ಲಿದ್ದಾರೆ. ವೇಳಾಪಟ್ಟಿ ಪ್ರಕಾರ ವಿವಿಧ ಕಾರ‌್ಯಕ್ರಮಗಳನ್ನು ಹಾಕಿಕೊಂಡು ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಲಾಗುತ್ತಿದೆ. ಉತ್ತಮ ಬೋಧನೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಜಿಲ್ಲೆ ಉತ್ತಮ ಸಾಧನೆ ಕಾಣಲು ಸಾಧ್ಯವಾಗಲಿದ್ದು, ಚಿತ್ರದುರ್ಗ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಟಾಪ್‌ಟೆನ್ ಒಳಗೆ ಬರಬೇಕು.

ಜಿಲ್ಲೆಯಲ್ಲಿ ಉತ್ತಮ ಶಿಕ್ಷಕರಿದ್ದಾರೆ. ನಿಮ್ಮಿಂದ ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಕೆಲಸವಾಗಬೇಕು. ಪಾಲಕರ ಸಭೆ ನಡೆಸ ಬೇಕು ಹಾಗೂ ಮಕ್ಕಳಲ್ಲೂ ಆತ್ಮವಿಶ್ವಾಸವನ್ನು ತುಂಬಿದಾಗ ಗುಣಮಟ್ಟದ ಫಲಿತಾಂಶ ಪಡೆಯಬಹುದಾಗಿದೆ ಎಂದರು.

ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕ ಪ್ರಶಾಂತ್ ಮಾತನಾಡಿ,10ನೇ ತರಗತಿ ಪರೀಕ್ಷೆ ಫಲಿತಾಂಶ ಸುಧಾರಣೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರ ಪಾತ್ರ ಪ್ರಮುಖವಾದುದು. ಮಕ್ಕಳನ್ನು ಕೇವಲ ಪಠ್ಯಕ್ಕಷ್ಟೇ ಸೀಮಿತಗೊಳಿಸಬಾರದು. ಶಿಕ್ಷಣದ ಜತೆ ಸಂಸ್ಕಾರ,ಮೌಲ್ಯ ಕಲಿಸ ಬೇಕಿದೆ. ಈಗಿನಿಂದಲೆ ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡಬೇಕಿದೆ ಎಂದರು.

ವಿದ್ಯಾಧಿಕಾರಿಗಳಾದ ಎನ್.ಆರ್.ತಿಪ್ಪೇಸ್ವಾಮಿ, ಸಿದ್ದಪ್ಪ, ಡಿವೈಪಿಸಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್,ವಿಷಯ ಪರಿವೀಕ್ಷಕರಾದ ಶಿವಣ್ಣ, ಚಂದ್ರಣ್ಣ, ಗೋವಿಂದಪ್ಪ, ಮಹಲಿಂಗಪ್ಪ, ಸಮಾಜ ವಿಜ್ಞಾನ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಂ.ಆರ್.ನಾ ಗರಾಜ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್,ಶ್ರೀನಿವಾಸ್, ಗೋವಿಂದಪ್ಪ,ಡಿ.ಎಸ್.ಪಾಲಯ್ಯ ಮತ್ತಿತರರು ಇದ್ದರು.