ಜಿಲ್ಲೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ಗುಲಾಬಿ ಹೂ ನೀಡಿ ಸ್ವಾಗತ

ಬೇಲೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಶುಕ್ರವಾರ ವಿವಿಧ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆ ತಹಸೀಲ್ದಾರ್ ಎಂ.ಮಮತಾ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಮತ್ತು ಸಿಬ್ಬಂದಿ ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸಿ, ಯಾವುದೇ ಭಯ ಇಲ್ಲದೆ ನಿರ್ಭೀತಿಯಿಂದ ಪರೀಕ್ಷೆ ಬರೆಯುವಂತೆ ಶುಭ ಕೋರಿದರು.


ಬೇಲೂರು ಪಟ್ಟಣದ ಶಾಂತಳಾ ವಿದ್ಯಾಸಂಸ್ಥೆಯಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಮಾತನಾಡಿದ ತಹಸೀಲ್ದಾರ್ ಎಂ.ಮಮತಾ, ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಮಹತ್ವದ ಘಟ್ಟ. ಆದ್ದರಿಂದ ಪಾಲಕರು ಒತ್ತಡ ಹೇರದೆ ನಿರ್ಭೀತಿಯಿಂದ ಪರೀಕ್ಷೆ ಬರೆಯಲು ಸಹಕಾರ ನೀಡಬೇಕು. ವರ್ಷ ಕಾಲ ಪ್ರೋತ್ಸಾಹ ನೀಡಿ ವಿದ್ಯೆ ಕಲಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಪರೀಕ್ಷೆಯಾಗಿದೆ. ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಬರೆದು ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಉನ್ನತ ವಿದ್ಯೆಯೊಂದಿಗೆ ಅಧಿಕಾರ ಹಿಡಿದು ಜನರಿಗೆ ಸಹಕಾರ ನೀಡುವ ಮೂಲಕ ದೇಶದ ಜವಾಬ್ದಾರಿಯುತ ಪ್ರಜೆಯಾಗಬೇಕು ಎಂಬ ಅವರ ಕನಸನ್ನು ನನಸು ಮಾಡಬೇಕು ಎಂದು ಸಲಹೆ ನೀಡಿದರು.


ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಮಾತನಾಡಿ, ತಾಲೂಕಿನಲ್ಲಿ 57 ಪ್ರೌಢಶಾಲೆಗಳಿಂದ 1957 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಂದಿದ್ದಾರೆ. ವಿದ್ಯಾರ್ಥಿಗಳು ಎಲ್ಲ ಪ್ರಶ್ನೆಗಳಿಗೂ ಉತ್ತರ ಬರೆದು ಉತ್ತಮ ಅಂಕ ಪಡೆಯುವುದರೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ತರಬೇಕು ಎಂದು ಕಿವಿಮಾತು ಹೇಳಿದರು.


ಎಸ್‌ಇಎಸ್ ಬಾಲಿಕಾ ವಿದ್ಯಾಸಂಸ್ಥೆ ಪ್ರಾಂಶುಪಾಲ ಹರೀಶ್, ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆ ಪ್ರಾಂಶುಪಾಲ ಪ್ರಶಾಂತ್, ಶಿಕ್ಷಣ ಇಲಾಖೆ ಸಂಯೋಜಕರಾದ ರವಿಕುಮಾರ್, ಗೋಪಾಲ್, ಸಹಾಯಕ ನಿರ್ದೇಶಕ ಜಗದೀಶ್ ನಾಯಕ್ ಇತರರು ಇದ್ದರು.