ಪ್ರಸ್ತಕ 2025-26ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ 25 ಅಂಶಗಳ ಕಾರ್ಯಕ್ರಮ ರೂಪಿಸಲಾಗಿದೆ. ಇದರೊಂದಿಗೆ ಮೈಸೂರು ಜಿಲ್ಲೆ ‘ಟಾಪ್ 10’ ಒಳಗೆ ಬರಲು ಕಸರತ್ತು ಮಾಡಲಾಗುತ್ತಿದೆ...!
ಕಳೆದ 2024-25ನೇ ಸಾಲಿನ ಈ ಪರೀಕ್ಷೆಯ ಫಲಿತಾಂಶ ಶೇ.68.22ಕ್ಕೆ ಕುಸಿದು, ಜಿಲ್ಲೆ 15ನೇ ಸ್ಥಾನ ಪಡೆದುಕೊಂಡಿತ್ತು. ಮುಖ್ಯಮಂತ್ರಿ ತವರು ಜಿಲ್ಲೆಯಾಗಿರುವುದರಿಂದ ಶಾಲಾ ಶಿಕ್ಷಣ ಇಲಾಖೆ ತೀವ್ರ ಮುಜುಗರ ಅನುಭವಿಸಿತ್ತು. ಹೀಗಾಗಿ, ಈ ಸಲ ರಿಸಲ್ಟ್ ಸುಧಾರಣೆಗೆ ಸಂಕಲ್ಪ ಮಾಡಿದೆ. ಇದು ಫಲ ಕೊಡಲಿದೆಯೇ ಎಂಬುದು ಮುಂದಿನ ಫಲಿತಾಂಶದಲ್ಲೇ ಗೊತ್ತಾಗಲಿದೆ.
ಫಲಿತಾಂಶವನ್ನು ಉತ್ತಮ ಪಡಿಸುವ ಪ್ರಯತ್ನವಾಗಿ ಶಿಕ್ಷಣ ಇಲಾಖೆ ಈಗಿನಿಂದಲೇ ಕಾರ್ಯೋನ್ಮುಖವಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿರುವಂತಹ ಪರ್ಯಾಯ ಮಾರ್ಗ ಅನುಸರಿಸಿ 25 ಅಂಶಗಳ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಇಲಾಖೆಯ ಕೇಂದ್ರ ಕಚೇರಿಯಿಂದ ಬಂದಿರುವ 20 ಅಂಶಗಳ ಸೂಚನೆಯನ್ನೂ ಪಾಲನೆ ಮಾಡಲಾಗುತ್ತಿದೆ.
ನಿರಂತರ ಕಲಿಕಾ ಚಟುವಟಿಕೆಗಳಿಂದ ವಿದ್ಯಾರ್ಥಿಗಳು ವಿಮುಖರಾಗದಂತೆ ಗಮನ ಹರಿಸಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಸಂಪರ್ಕಿಸುವಂತೆ ಮತ್ತು ಎಲ್ಲ ವಿಷಯ ಶಿಕ್ಷಕರ ಮಾರ್ಗದರ್ಶನ ಲಭ್ಯವಾಗುವಂತೆ ಶಾಲಾ ವೇಳಾ ಪಟ್ಟಿ ಸಿದ್ಧಪಡಿಸಲಾಗಿದೆ. ಜತೆಗೆ, ಬ್ಲಾಕ್ ಹಂತದಲ್ಲಿ ಸ್ಥಳೀಯ ಅಗತ್ಯತೆಗೆ ಅನುಗುಣವಾಗಿ ಯೋಜನೆ ತಯಾರಿಸಿ ಜಾರಿಗೊಳಿಸಲು ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಕ್ರಮ ತೆಗೆದುಕೊಂಡಿದ್ದಾರೆ.
ಕಳೆದ ಸಾಲಿನ ಫಲಿತಾಂಶ ಪರಿಶೀಲನೆ ಮಾಡಿ ಪ್ರತಿ ಶಾಲೆಯಿಂದ ಹಿಡಿದು ತಾಲೂಕು, ಜಿಲ್ಲಾ ಹಂತದಲ್ಲೂ ವಿಶ್ಲೇಷಣೆ ಮಾಡಲಾಗಿದೆ. ಶೇ.60ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಮುಖ್ಯಶಿಕ್ಷಕರ ಸಭೆಯನ್ನು ತಾಲೂಕು ಹಂತದಲ್ಲಿ ಮಾಸಿಕವಾಗಿ ನಡೆಸಿ ಅಗತ್ಯ ಸಲಹೆ, ಮಾರ್ಗದರ್ಶನ ನೀಡಲಾಗುತ್ತಿದೆ.
ಜತೆಗೆ, ಇಂತಹ ಶಾಲೆಗಳನ್ನು ಇಲಾಖಾ ಅಧಿಕಾರಿಗಳಿಗೆ ದತ್ತು ನೀಡಲಾಗುತ್ತಿದೆ. ತಿಂಗಳಿಗೆ 2 ಬಾರಿ ಕಡ್ಡಾಯ ಭೇಟಿ ನೀಡಿ ಬೋಧನಾ, ಕಲಿಕಾ ಪ್ರಗತಿ ಪರಿಶೀಲಿಸಿ ದಾಖಲಿಸಲಾಗುತ್ತಿದೆ. ಜತೆಗೆ, ಈ ಸಂಬಂಧ ಅನುಪಾಲನಾ ಅಧಿಕಾರಿಗಳು ಸಹ ತಿಂಗಳಿಗೊಮ್ಮೆ ಆನ್‌ಲೈನ್ ಸಭೆ ನಡೆಸುತ್ತಿದ್ದಾರೆ. ತಿಂಗಳ ಅಂತ್ಯಕ್ಕೆ ಜಿಲ್ಲಾ ಕಚೇರಿಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಸಂಪನ್ಮೂಲ ಶಿಕ್ಷಕರಿಂದ ಜಿಲ್ಲಾ ಹಂತದಲ್ಲಿ ಪ್ರಶ್ನೆ ಪತ್ರಿಕೆ ತಯಾರಿಕಾ ಕಾರ್ಯಾಗಾರ ನಡೆಸಿ, ವಿದ್ಯಾರ್ಥಿಗಳ ಅಭ್ಯಾಸಕ್ಕಾಗಿ ಮಾದರಿ ಪ್ರಶ್ನೆಗಳನ್ನು ನೀಡಲಾಗುತ್ತಿದೆ. ಬ್ಲಾಕ್ ಹಂತದಲ್ಲಿ ಶಿಕ್ಷಕರಿಗೂ ಸಂಪನ್ಮೂಲ ವ್ಯಕ್ತಿಗಳ ಮೂಲಕ ವಿಷಯ ಸಂಪದೀಕರಣಕ್ಕಾಗಿ ಕಾರ್ಯಾಗಾರ ನಡೆಸಲು ಕ್ರಮ ತೆಗೆದುಕೊಳ್ಳಲಾಗಿದೆ.
ವಿದ್ಯಾರ್ಥಿಗಳ ಬರವಣಿಗೆ ಕೌಶಲವೃದ್ಧಿ ಕಾರ್ಯಚಟುವಟಿಕೆಗಳ ಆಯೋಜನೆ, ವಿವಿಧ ಕಲಿಕಾ ಸ್ತರದಲ್ಲಿರುವ ಅವರಿಗೆ ಅನುಗುಣವಾಗಿ ವಿಷಯವಾರು ಸಂಪನ್ಮೂಲ ಪುಸ್ತಕ ಮೂಲಕ ಕಲಿಕೆಗೆ ಪ್ರೇರೇಪಿಸಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಶಿಕ್ಷಕವಾರು ದತ್ತು ಯೋಜನೆ ಜಾರಿ ಮಾಡಲಾಗಿದೆ.
ಈ ಸಂಬಂಧ ಶಾಲಾ ಹಂತದಲ್ಲಿ ಕ್ರಿಯಾಯೋಜನೆ, ಪ್ರಗತಿ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಜತೆಗೆ, ವಿಷಯವಾರು ಯೋಜನೆ, ಕಲಿಕೆಯ ಪ್ರಗತಿ ನೋಟ ತಯಾರಿಸಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಕ್ಲಿಷ್ಟ ಪರಿಕಲ್ಪನೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಸರಳ ಕಲಿಕೆಗೆ ಮಾರ್ಗೋಪಾಯ ಹಾಕಿಕೊಳ್ಳಲಾಗಿದೆ. ಮಕ್ಕಳ ಗೈರು ಹಾಜರಾತಿ ಕಡಿಮೆಗೊಳಿಸಲು ಶಾಲಾ, ತಾಲೂಕು, ಜಿಲ್ಲಾ ಹಂತದಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಕಳೆದ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀಣವಾಗಿರುವ ಬಾಲಕರ ಫಲಿತಾಂಶ ಹೆಚ್ಚಿಸಲು ಸಹ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ.
ಅನುದಾನಿತ ಶಾಲೆಗಳ ಬೋಧನಾ ಮತ್ತು ಫಲಿತಾಂಶ ಗುಣಮಟ್ಟ ಸುಧಾರಿಸಲಾಗುತ್ತಿದೆ. ಈ ಕುರಿತು ವಿಶೇಷ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳ ಭೇಟಿ, ಮಾರ್ಗದರ್ಶನವನ್ನು ಕೊಡಿಸಲಾಗುತ್ತಿದೆ. ಬೆಳಗ್ಗೆ ವಿಶೇಷ ತರಗತಿಗಳು, ಸಂಜೆ ಗುಂಪು ಅಧ್ಯಯನಕ್ಕಾಗಿ ವೇಳಾಪಟ್ಟಿ ಮತ್ತು ಪ್ರಗತಿ ಚಾರ್ಟ್ ಶಾಲೆಯಲ್ಲಿ ಸಿದ್ಧಪಡಿಸಲಾಗಿದೆ. ಆಕಾಶವಾಣಿ, ದಿನಪತ್ರಿಕೆಗಳ ಮೂಲಕ ವಿಷಯವಾರು ತಜ್ಞರಿಂದ ಎಲ್ಲ ಮಕ್ಕಳಿಗೆ ಕ್ಲಿಷ್ಟ ವಿಷಯಗಳಿಗೆ ಅಗತ್ಯ ಮಾರ್ಗದರ್ಶನ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ.
ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳ ವೈಯಕ್ತಿಕ ವೇಳಾಪಟ್ಟಿ ಮತ್ತು ಶಿಕ್ಷಕರ ದೂರವಾಣಿ ಮೂಲಕ ವಿದ್ಯಾರ್ಥಿಗಳು ಮತ್ತು ಅವರ ಪಾಲಕರೊಂದಿಗೆ ಸಂಪರ್ಕದಲ್ಲಿದ್ದು, ಮಕ್ಕಳ ಕಲಿಕೆ ಸಂಬಂಧ ನಿರಂತರವಾಗಿ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಜತೆಗೆ, ವಿಷಯವಾರು ಶಿಕ್ಷಕರ ವಾಟ್ಸ್‌ಆ್ಯಪ್ ಗುಂಪು ರಚಿಸಿ, ವಿಷಯಕ್ಕೆ ಸಂಬಂಧಿಸಿದ ಸಂಪನ್ಮೂಲಗಳನ್ನು ಹಂಚಿಕೆ ಮಾಡಲಾಗಿದೆ. ವಿಜ್ಞಾನ, ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತಹ ನಕ್ಷೆ, ಚಿತ್ರಗಳನ್ನು ನಿತ್ಯ ಬರೆದು ಅಭ್ಯಾಸ ಮಾಡಿ ಶಿಕ್ಷಕರಿಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಲು ಸೂಚಿಸಲಾಗಿದೆ.
ಮಕ್ಕಳ-ಶಿಕ್ಷಕರ ಬಾಂಧವ್ಯ ಉತ್ತಮವಾಗಿದ್ದರೆ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಮಕ್ಕಳನ್ನು ಸ್ನೇಹಯುತವಾಗಿ ಮಾತನಾಡಿಸುವುದು, ಆಗಾಗ ಪಾಲಕರ ಸಮ್ಮುಖದಲ್ಲಿ ಮನೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಇದು ಶಾಲೆಗೆ ಗೈರಾಗುವುದು ಸಹ ಕಡಿಮೆಯಾಗಲಿದೆ. ಪಾಲಕರಿಗೆ ಮಕ್ಕಳ ಕಲಿಕೆಯ ಕುರಿತು ನಿಯಮಿತವಾಗಿ ಕರೆ ಮಾಡುವ ಮೂಲಕ ವಿದ್ಯಾರ್ಥಿಯ ಕಲಿಕೆಯ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ.
ಸಂಪನ್ಮೂಲ ತಂಡದಿಂದ ಸಮಸ್ಯ ಪರಿಹಾರದ ಕುರಿತು ಮಕ್ಕಳಿಗೆ, ಶಿಕ್ಷಕರಿಗೆ ಆನ್‌ಲೈನ್ ವೆಬಿನಾರ್ ಏರ್ಪಡಿಸಲಾಗುತ್ತಿದೆ. ಇದರೊಂದಿಗೆ ಕೆಲ ಪ್ರಯೋಗ ಅಥವಾ ಚಟುವಟಿಕೆಗಳ ವೀಕ್ಷಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಮಕ್ಕಳ ಕಲಿಕೆ ಉತ್ತಮವಾಗಿರುವ ವಿಷಯ ಶಿಕ್ಷಕರ ಬೋಧನಾ ವಿಧಾನ, ಅಳವಡಿಸಿಕೊಂಡಿರುವ ಚಟುವಟಿಕೆಗಳ ಕ್ರಿಯಾಯೋಜನೆ ಹಂಚಿಕೊಳ್ಳಲಾಗುತ್ತಿದೆ. ಅನ್ವಯಿಕ ಪ್ರಶ್ನೆಗಳಿಗೆ ಉತ್ತರಿಸುವ ವಿಧಾನ, ಪರೀಕ್ಷಾ ಭಯ ನಿವಾರಣೆ, ಮಕ್ಕಳ ಕಲಿಕೆಯನ್ನು ಪ್ರೇರೇಪಿಸುವಂತಹ ಸಂಪನ್ಮೂಲ ವ್ಯಕ್ತಿಗಳ ಹಿತ ನುಡಿಯನ್ನು ಆಲಿಸುವ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಸರ್ಕಾರದ 20 ಅಂಶಗಳ ಹಾಗೂ ಜಿಲ್ಲೆಯಲ್ಲಿ 25 ಅಂಶಗಳ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿ ಪಾಠ ಮುಗಿದ ಮೇಲೆ ಕಿರುಪರೀಕ್ಷೆ ನಡೆಸಿ ಅದನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಸರ್ಕಾರ ಸೂಚನೆ ನೀಡಿದ್ದು, ಈ ಪ್ರಕಾರ ಕ್ರಮ ವಹಿಸಲಾಗಿದೆ. ಕೆಳಹಂತದಿಂದ ಜಿಲ್ಲಾಮಟ್ಟದ ಅಧಿಕಾರಿಗಳ ತನಕವೂ ಹೊಣೆಗಾರಿಕೆಯನ್ನು ನೀಡಲಾಗಿದೆ.
ಎಸ್.ಟಿ.ಜವರೇಗೌಡ
ಉಪನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ