ಜಿಲ್ಲೆ

ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆ ಸುಗಮ

ಧಾರವಾಡ: ಜಿಲ್ಲಾದ್ಯಂತ ಶನಿವಾರ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆ ಸುಗಮವಾಗಿ ಜರುಗಿತು. ಕೋವಿಡ್ ಮಧ್ಯೆಯೂ ಜಿಲ್ಲೆಯ 90 ಕೇಂದ್ರಗಳಲ್ಲಿ ಸುರಕ್ಷತೆ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲಾಯಿತು.

ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿದ್ದ 27,077 ವಿದ್ಯಾರ್ಥಿಗಳ ಪೈಕಿ 26,067 ವಿದ್ಯಾರ್ಥಿಗಳು ಹಾಜರು, 1,010 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಕಂಟೇನ್ಮೆಂಟ್ ಪ್ರದೇಶಗಳ 90 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡ 4 ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕೂಡಿಸಿ ಪರೀಕ್ಷೆ ಬರೆಸಲಾಯಿತು. ಕೇಂದ್ರಗಳಿಂದ ದೂರವಿದ್ದ ವಿದ್ಯಾರ್ಥಿಗಳನ್ನು ಕರೆತರಲು 79 ಬಸ್- ಇತರ ವಾಹನಗಳನ್ನು ಬಳಸಲಾಯಿತು. ಸರ್ಕಾರಿ/ ಖಾಸಗಿ ವಸತಿ ನಿಲಯಗಳಲ್ಲಿದ್ದ ನಾಲ್ವರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು.

ಕೇಂದ್ರಕ್ಕೆ ತೆರಳಿದ ಪ್ರತಿಯೊಬ್ಬ ವಿದ್ಯಾರ್ಥಿಯ ಫೀವರ್ ಟೆಸ್ಟ್ ಮಾಡಲಾಯಿತು. ನಂತರ ತಲಾ ಒಂದು ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿ ಪ್ರವೇಶ ನೀಡಲಾಯಿತು. ಕೇಂದ್ರಗಳ ಆವರಣದಲ್ಲಿ ಪರಸ್ಪರ ಅಂತರ ಕಾಪಾಡುವಂತೆ ಚಿತ್ರಿಸಲಾಗಿದ್ದ ಬಾಕ್ಸ್​ಗಳಲ್ಲಿ ನಿಂತು ವಿದ್ಯಾರ್ಥಿಗಳು ಕೇಂದ್ರದೊಳಗೆ ಪ್ರವೇಶಿಸಿದರು. ಪರೀಕ್ಷೆ ನಂತರವೂ ಪರಸ್ಪರ ಅಂತರದೊಂದಿಗೆ ಹೊರಗೆ ಬಿಡಲಾಯಿತು.

ಅಧಿಕಾರಿಗಳ ಭೇಟಿ

ಶಹರ ವಲಯದ ನವಲೂರ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇಂದ್ರಕ್ಕೆ ಇಲಾಖೆಯ ಬೆಂಗಳೂರು ಆಯುಕ್ತರ ಕಚೇರಿಯ ನಿರ್ದೇಶಕಿ ಲಲಿತಾ ಸಿರಿಯಣ್ಣವರ ಭೇಟಿ ನೀಡಿದ್ದರು. ಸಮಯಕ್ಕೆ ಸರಿಯಾಗಿ ಮೇಲ್ವಿಚಾರಕರು ಬಂದಿರುವುದು, ಮಕ್ಕಳು ಪರಸ್ಪರ ಅಂತರದಲ್ಲಿ ಪರೀಕ್ಷೆ ಕೊಠಡಿಗೆ ಹೋಗುವುದು, ಮಕ್ಕಳಿಗೆ ಹಾಗೂ ಕೇಂದ್ರದಲ್ಲಿ ಕರ್ತವ್ಯನಿರತ ಎಲ್ಲರಿಗೂ ಸ್ಯಾನಿಟೈಸೇಷನ್, ಆರೊಗ್ಯ ತಪಾಸಣೆ ಮಾಡುತ್ತಿರುವುದನ್ನು ಪರಿಶೀಲಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ, ಇತರರಿದ್ದರು.

ಗುಂಪು ಸೇರಿದ ವಿದ್ಯಾರ್ಥಿಗಳು, ಪಾಲಕರು

ಹುಬ್ಬಳ್ಳಿ: ನಗರದ ಲ್ಯಾಮಿಂಗ್ಟನ್ ಶಾಲೆಯ ಹೊರಗಡೆ ಶನಿವಾರ ಮಧ್ಯಾಹ್ನ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಗಳು-ಪಾಲಕರು ಗುಂಪು ಸೇರಿದ್ದು ಆತಂಕಕ್ಕೆ ಕಾರಣವಾಗಿತ್ತು.

ಪರೀಕ್ಷೆ ಕೊಠಡಿಯಿಂದ ಶಾಲೆಯ ಗೇಟ್​ವರೆಗೆ ಶಿಸ್ತುಬದ್ಧವಾಗಿ, ಪರಸ್ಪರ ಅಂತರ ಕಾಯ್ದುಕೊಂಡು ಹೊರ ಬಂದ ವಿದ್ಯಾರ್ಥಿಗಳು, ಅಲ್ಲಿ ಮೊದಲೇ ಹಾಜರಿದ್ದ ಪಾಲಕರು-ಪೋಷಕರ ಜತೆ ಸೇರಿದ್ದರಿಂದ ನೂರಾರು ಜನರ ಗುಂಪು ಸೃಷ್ಟಿಯಾಗಿತ್ತು. ಇಲ್ಲಿ ಶಾಲೆಯ ಗೇಟ್ ತೆರೆಯುತ್ತಿದ್ದಂತೆ ಪ್ರಮುಖ ರಸ್ತೆ (ಸ್ಟೇಷನ್ ರಸ್ತೆ)ಗೆ ಹೆಜ್ಜೆ ಇಡುವುದರಿಂದ, ಜತೆಗೆ ರಸ್ತೆಯಲ್ಲಿನ ವಾಹನಗಳ ದಟ್ಟಣೆಯಿಂದ ವಿದ್ಯಾರ್ಥಿಗಳು-ಪಾಲಕರಿಗೆ ತ್ವರಿತವಾಗಿ ಮುಂದೆ ಹೋಗಲು ಆಗಲಿಲ್ಲ. ಗುಂಪು ಸೇರದಂತೆ ನೋಡಿಕೊಳ್ಳಲು ಪೊಲೀಸರು ಹರಸಾಹಸ ಪಟ್ಟರು. ಗುಂಪು ಸೇರಬೇಡಿ...ಗುಂಪು ಸೇರಬೇಡಿ ಎಂದು ಮನವಿ ಮಾಡುತ್ತ ಜನರನ್ನು ಚದುರಿಸಿದರು.

ಶನಿವಾರ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಎದುರಿಸಿದ್ದರು. 1 ತಾಸು ಮುಂಚಿತವಾಗಿಯೇ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಕೊಠಡಿಯಲ್ಲಿ ಹಾಜರಿದ್ದರು. ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಕೈಗೆ ಸ್ಯಾನಿಟೈಸರ್ ಹಾಕಿ ಒಳಗೆ ಬಿಡಲಾಯಿತು. ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಬಂದಿದ್ದರು. 380 ವಿದ್ಯಾರ್ಥಿಗಳು ಹಾಜರಿದ್ದರು.

ಕಾಪಿ ಚೀಟಿ ನೀಡಲು ಪ್ರಯತ್ನ

ಕೌಲಪೇಟ ಆಂಗ್ಲೋ ಉರ್ದು ಬಾಲಕಿಯರ ಪ್ರೌಢಶಾಲೆ ಪರೀಕ್ಷೆ ಕೇಂದ್ರದ ವಿದ್ಯಾರ್ಥಿಗಳಿಗೆ ಹೊರಗಿನವರು ಕಾಪಿ ಚೀಟಿ ನೀಡಲು ಪ್ರಯತ್ನಿಸಿದ್ದರು. ಕೇಂದ್ರಕ್ಕೆ ಹೊಂದಿಕೊಂಡು ಹಲವು ಕಟ್ಟಡಗಳು, ಕಿರಿದಾದ ದಾರಿಗಳಿವೆ. ಕೇಂದ್ರದ ಎದುರು ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು. ಹಿಂದೆ ಜನರ ಓಡಾಟಕ್ಕೆ ಅಡೆತಡೆ ಇರಲಿಲ್ಲ. ಪಕ್ಕದ ಕಟ್ಟಡ ಏರಿ, ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ನಕಲು ಚೀಟಿ ನೀಡಲು ಕೆಲ ಯುವಕರು ಪ್ರಯತ್ನಿಸುತ್ತಿದ್ದರು. ಆದರೆ, ಶಿಕ್ಷಣ ಇಲಾಖೆ ಇದನ್ನು ಅಲ್ಲಗೆಳೆದಿದೆ. ‘ಶನಿವಾರ ಯಾವುದೇ ಸಮಸ್ಯೆಯಿಲ್ಲದೆ ಸುಗಮವಾಗಿ ಗಣಿತ ಪರೀಕ್ಷೆ ನಡೆದಿದೆ. ಕೌಲಪೇಟದಲ್ಲಿ ವಿದ್ಯಾರ್ಥಿಗಳಿಗೆ ಹೊರಗಿನವರು ಕಾಪಿ ಚೀಟಿ ನೀಡಲು ಪ್ರಯತ್ನಿಸಿರುವುದು ಗಮನಕ್ಕೆ ಬಂದಿಲ್ಲ’ ಎಂದು ಹುಬ್ಬಳ್ಳಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ವಿಜಯವಾಣಿಗೆ ತಿಳಿಸಿದ್ದಾರೆ.