ಚಿತ್ರದುರ್ಗ: ನಗರದ ವಿ.ಪಿ.ಬಡಾವಣೆಯಲ್ಲಿರುವ ರಾಷ್ಟ್ರೀಯ ನಾಯಕ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ನಿವಾಸವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ಖರೀದಿಸುವ ಚಿಂತನೆ ಹೊಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಸೋಮವಾರ ನಿಜಲಿಂಗಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಪುತ್ರ ಎಸ್.ಎನ್.ಕಿರಣ್ ಶಂಕರ್ ಅವರೊಂದಿಗೆ ಚರ್ಚಿಸಿದರು.
ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸೂಚನೆಯಂತೆ ಇಲ್ಲಿಗೆ ಬಂದಿದ್ದೇನೆ. ಇದನ್ನು ಪಕ್ಷಕ್ಕೆ ಖರೀದಿಸಲು ಚಿಂತಿಸಲಾಗಿದೆ. ಶಿವಕುಮಾರ್ ಅವರೂ ನಿವಾಸಕ್ಕೆ ಭೇಟಿ ನೀಡಲಿದ್ದಾರೆ ಎಂದರು.
ಈ ನಿವಾಸದ ಖರೀದಿಸಿ, ಸ್ಮಾರಕವನ್ನಾಗಿ ಮಾಡುವ ರಾಜ್ಯ ಸರ್ಕಾರದ ಉದ್ದೇಶ ಕಳೆದ 10 ವರ್ಷಗಳಿಂದ ನನೆಗುದಿಗೆ ಬಿದ್ದಿದೆ ಎಂದು ಕಿರಣ್‌ಶಂಕರ್ ಬೇಸರ ವ್ಯಕ್ತಪಡಿಸಿದರು.
ಮನೆ ಖರೀದಿಗೆಂದು ಲೋಕೋಪಯೋಗಿ ಇಲಾಖೆಯಲ್ಲಿ 5 ಕೋಟಿ ರೂ. ಅನುದಾನವಿದೆ. ಹಲವು ವರ್ಷಗಳಿಂದ ಈ ವಿಚಾರದಲ್ಲಿ ಸರ್ಕಾರ ಅತ್ಯಂತ ನಿರ್ಲಕ್ಷೃ ತೋರಿದೆ. ಪತ್ರ ಬರೆದರೆ ಉತ್ತರಿಸುವ ಸೌಜನ್ಯವನ್ನು ಅಧಿಕಾರಿಗಳು ತೋರಿಸಿಲ್ಲ. ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಮನೆ ಮಾರಾಟ ಮಾಡುವುದಿಲ್ಲ. ಕೆಪಿಸಿಸಿ ಮುಂದೆ ಬಂದಿದೆ. ಅದು ಪಕ್ಷ ದ ಕಚೇರಿಯನ್ನಾದರೂ ಮಾಡಲಿ, ಏನಾನ್ನಾದರೂ ಮಾಡಲಿ. ಮನೆ ಬೀಗ ಇವತ್ತು ತೆರೆಯಲಾಗಿದೆ. 20 ವರ್ಷಗಳಿಂದ ಇಲ್ಲಿ ಯಾರೂ ವಾಸವಿಲ್ಲ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಮನೆ ಖರೀದಿಸಿದ ಬಳಿಕ ಇಲ್ಲಿ ಏನೂ ಮಾಡಬೇಕು ಎಂಬುದನ್ನು ಹೇಳಲು ನಾನು ಅಧಿಕೃತ ವ್ಯಕ್ತಿ ಅಲ್ಲ. ಕಿರಣಶಂಕರ್ ಅವರ ಬೆಂಗಳೂರಿನ ಆರ್‌ಟಿ ನಗರ ನಿವಾಸಕ್ಕೆ ಡಿಸಿಎಂ ಜತೆ ತೆರಳಿ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.
ತಮ್ಮ ಮನೆಗೆ ಬರುವ ಮುನ್ನ ಅಧಿಕೃತವಾಗಿ ಪತ್ರ ಬರೆದು ಬರುವಂತೆ ಹಾಲಪ್ಪ ಅವರಿಗೆ ಕಿರಣ್‌ಶಂಕರ್ ಮನವಿ ಮಾಡಿದರು.
ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ರಾಜ್ಯದಿಂದ ಎಐಸಿಸಿ ಅಧ್ಯಕ್ಷರಾದವರಲ್ಲಿ ನಿಜಲಿಂಗಪ್ಪ ಮೊದಲಿಗರಾಗಿದ್ದು, ಅವರ ನಿವಾಸವನ್ನು ಖರೀದಿಸಲು ಪಕ್ಷದ ನಾಯಕರೊಂದಿಗೆ ಚರ್ಚಿಸಿರುವುದಾಗಿ ಹೇಳಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ಗೀತಾನಂದಿನಿ ಗೌಡ, ಹಾಲಸ್ವಾಮಿ, ಡಿ.ಆರ್.ಲೋಕೇಶ್ವರಪ್ಪ, ಕೆಇಬಿ ಷಣ್ಮುಖಪ್ಪ, ಪಿ.ರಘು, ಮರುಳಾರಾಧ್ಯ ಮತ್ತಿತರರು ಇದ್ದರು.