ಮೈಸೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ನಡಿಗೆ ಹಳ್ಳಿಯ ಕಡೆಗೆ ಎಂಬ ಯೋಜನೆಯನ್ನು ಹಾಕಿಕೊಳ್ಳಬೇಕು ಎಂದು ಗಾಂಧಿನಗರದ ಉರಿಲಿಂಗಿಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಸಲಹೆ ನೀಡಿದರು.
ಗಾಂಧಿನಗರದ ಉರಿಲಿಂಗಿಪೆದ್ದಿ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಂಘದ ಮೈಸೂರು ಜಿಲ್ಲಾ ಶಾಖೆಯ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಕಲ್ಪಿಸಿದ ಮೀಸಲಾತಿಯ ಫಲ ಉಂಡಿರುವ ಎಲ್ಲ ಫಲಾನುಭಾವಿಗಳು ಮುಂದಿನ ದಿನಗಳಲ್ಲಿ ತಮ್ಮ ಹಳ್ಳಿಗಳಿಗೆ ತೆರಳಬೇಕು. ತಮ್ಮ ಜನರ ಕಷ್ಟ ಸುಖವನ್ನು ಆಲಿಸಬೇಕು. ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಗ್ರಾಮಾಂತರ ಪ್ರದೇಶದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಕೌಶಲ ತರಬೇತಿ ಕೊಡಬೇಕು. ಅಂಬೇಡ್ಕರ್ ಸಮುದಾಯ ಭವನಗಳನ್ನು ಗ್ರಂಥಾಲಯಗಳನ್ನಾಗಿ ಪರಿವರ್ತಿಸಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ ಮಾತನಾಡಿ, ಸರ್ಕಾರಿ ನೌಕರರು ಸಮುದಾಯದ ಪರ ಹೆಚ್ಚು ಕೆಲಸ ಮಾಡಬೇಕು. ಆ ಮೂಲಕ ಬಾಬಾ ಸಾಹೇಬರ ಋಣ ತೀರಿಸುವ ನಿಟ್ಟಿನಲ್ಲಿ ನಮ್ಮ ನೌಕರ ಬಂಧುಗಳ ನಿಲುವಿರಬೇಕು. ಜತೆಗೆ ಬಾಬಾ ಸಾಹೇಬರು ತೋರಿದ ಬುದ್ಧರ ಮಾರ್ಗದಲ್ಲಿ ಸಾಗಬೇಕು ಎಂಬ ಹೇಳಿದರು
ಜಿಲ್ಲಾಧ್ಯಕ್ಷ ಡಾ.ಎಂ.ಡಿ.ಶಿವರಾಮ ಕೃಷ್ಣ, ಪ್ರಧಾನ ಕಾರ್ಯದರ್ಶಿ ಪಿ.ರಾಘವೇಂದ್ರ, ಖಜಾಂಚಿ ಎಚ್.ಪಿ.ಮಹದೇವ, ಉಪಾಧ್ಯಕ್ಷ ಗಂಗಾಧರ್, ಕ್ರೀಡಾ ಕಾರ್ಯದರ್ಶಿ ಕೃಷ್ಣಸ್ವಾಮಿ, ಗೌರವ ಸಲಹೆಗಾರ ದ್ಯಾವಪ್ಪ ನಾಯಕ ಮತ್ತು ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಹಾಗೂ ಜಿಲ್ಲಾ ಹಾಗೂ ವಿವಿಧ ತಾಲೂಕುಗಳ ಪದಾಧಿಕಾರಿಗಳು ಭಾಗವಹಿಸಿದ್ದರು.