ಚಾಮರಾಜನಗರ: ರಾಜ್ಯದಲ್ಲಿ ಒಳಮೀಸಲಾತಿ ವರ್ಗೀಕರಣ ಸಂಬಂಧ ಮೇ.5 ರಿಂದ ನಡೆಯಲಿರುವ ಜಾತಿ ಜನಗಣತಿಯಲ್ಲಿ ಎಸ್ಸಿ ಬಲಗೈ ಸಂಬಂಧಿತ ಜಾತಿಯವರು ಉಪ ಜಾತಿಯಲ್ಲಿ ಹೊಲಯ ಎಂದು ನಮೂದಿಸಿ ಎಂದು ರಾಜ್ಯ ಯೋಜನಾ ಇಲಾಖೆ ನಿರ್ದೇಶಕ ಹಾಗೂ ಪರಿಶಿಷ್ಟ ಜಾತಿ ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರಯ್ಯ ಮನವಿ ಮಾಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ ಬಲಗೈ, ಹೊಲಯ, ಛಲವಾದಿ ಒಳಮೀಸಲಾತಿ ಜಾಗೃತಿ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಒಳಮೀಸಲಾತಿ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿ ವಿಚಾರ ಮಂಡಿಸಿದರು.
ರಾಜ್ಯದಲ್ಲಿ 1922 ರ ಹಿಂದೆ ಮಾದಿಗ, ಹೊಲಯ ಮತ್ತು ಇನ್ನಿತರೆ ಜಾತಿಗಳನ್ನು ಗುರುತಿಸಲಾಗುತ್ತಿತ್ತು. ಬಳಿಕ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಬಂದ ಪರಿಶಿಷ್ಟ ಜಾತಿಯವರನ್ನು ಆದಿ ದ್ರಾವಿಡ, ಆದಿ ಆಂಧ್ರ ಎಂದು ಗುರುತಿಸಲಾಯಿತು. ಮೈಸೂರು ಸಂಸ್ಥಾನ ಇದ್ದಾಗ 1925 ರಲ್ಲಿ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಯವರನ್ನು ಆದಿ ಕರ್ನಾಟಕ ಎಂದು ಗುರುತಿಸುತ್ತಾರೆ. ಅಲ್ಲಿಂದಿಚೇಗೆ ಹೊಲಯ ಮತ್ತು ಮಾದಿಗ ಎಂಬುದನ್ನು ಬಿಟ್ಟು ಆದಿ ಕರ್ನಾಟಕ ಎಂದು ಆಗಿದೆ. ಬಳಿಕ ಕರ್ನಾಟಕ ರಾಜ್ಯಕ್ಕೆ ಹಲವಾರು ಪ್ರಾಂತ್ಯಗಳು ಸೇರಿಕೊಂಡಿತು. ಹಲವಾರು ಸ್ಪೃಶ್ಯ ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಯಿತು ಎಂದು ತಿಳಿಸಿದರು.
ರಾಜ್ಯದಲ್ಲಿ ಹಲವಾರು ಸರ್ಕಾರಗಳು ಅಧಿಕಾರಕ್ಕೆ ಬಂದ ನಂತರ ತಮ್ಮ ರಾಜಕೀಯ ಲಾಭಕ್ಕಾಗಿ ಜಾತಿಗಳನ್ನು ಉಪಯೋಗಿಸಿಕೊಂಡವು. ಅದರಂತೆ ರಾಜ್ಯ ಸರ್ಕಾರ ನೇಮಕ ಮಾಡಿದ್ದ ಸದಾಶಿವ ಆಯೋಗ, ಮಾಧುಸ್ವಾಮಿ ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲಿ ಕೈಗೊಂಡ ಶಿಫಾರಸ್ಸುಗಳಲ್ಲಿ ಹೊಲಯ ಸಮುದಾಯಕ್ಕೆ ಅನ್ಯಾಯವನ್ನು ಎಸಗಲಾಗಿತ್ತು. ನಾವು ಎಂದಿಗೂ ಒಳಮೀಸಲಾತಿಯನ್ನು ವಿರೋಧ ಮಾಡಿರಲಿಲ್ಲ ಅದಾಗ್ಯೂ ಕೂಡ ನಮ್ಮನ್ನು ಒಳಮೀಸಲಾತಿ ವಿರೋಧಿಗಳು ಎಂದು ಬಿಂಬಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಎಚ್.ಡಿ.ದೇವೆಗೌಡ ಅವರು ಸದಾಶಿವ ಆಯೋಗ ರಚನೆಗೆ ಕಾರಣರಾದರು. ಅದರಂತೆ ಎಡಗೈ ಸಂಬಂಧಿಸಿದ ಜಾತಿಗಳಿಗೆ ಶೇ.6 ರಷ್ಟು, ಬಲಗೈ ಸಂಬಂಧಿತ ಜಾತಿಗಳಿಗೆ ಶೇ.5 ರಷ್ಟು ಸ್ಪೃಶ್ಯ ಜಾತಿಗಳಿಗೆ ಶೇ.3 ಹಾಗೂ ಇತರರಿಗೆ ಶೇ.1 ರಷ್ಟು ಮೀಸಲಾತಿ ನೀಡಬೇಕು ಎಂದು ಶಿಫಾರಸ್ಸು ಮಾಡಿತ್ತು. ಅದರಲ್ಲೂ ಗುಂಪು ಎ ಮತ್ತು ಬಿ ಅವರಿಗೆ ಒಂದು ತಲೆಮಾರಿಗೆ, ಗುಂಪು ಸಿ ಮತ್ತು ಡಿ ಗಳಿಗೆ ಎರಡು ತಲೆಮಾರಿಗೆ ಮಾತ್ರ ಮೀಸಲಾತಿ ನೀಡಬೇಕು ಎಂದು ಶಿಫಾರಸ್ಸು ಮಾಡಲಾಗಿತ್ತು. ಆದರೇ ಈ ವರದಿಯ 263 ಪುಟಗಳ ವರದಿಯನ್ನು ಸಲ್ಲಿಸಲಾಗಿರಲಿಲ್ಲ. ಈ ವರದಿಯನ್ನು ಉದ್ದೇಶ ಪೂರ್ವಕವಾಗಿ ಮಾಡಲಾಗಿತ್ತು ಎಂದು ದೂರಿದರು.
ಸರ್ಕಾರಿ ನೌಕರರು, ಭೂಮಿಯನ್ನು ಹೊಂದಿರುವವರು, ವಿವಿಧ ನಿಗಮಗಳಿಂದ ಸಾಲಸೌಲಭ್ಯ ಪಡೆದವರು, ಅಂಗವಿಕಲರು ಹಾಗೂ ಇನ್ನಿತರೆ ಅಂಕಿ-ಅಂಶಗಳನ್ನು ತಪ್ಪಾಗಿ ನಮೂದಿಸಲಾಗಿತ್ತು. ಅಂದಿನ ಬಿಜೆಪಿ ಸರ್ಕಾರ ಸದಾಶಿವ ವರದಿಯನ್ನು ತಿರಸ್ಕಾರ ಮಾಡಿತ್ತು. ಆದರೇ ಬಿಜೆಪಿ ಸರ್ಕಾರ ಅದೇ ಸದಾಶಿವ ಆಯೋಗದ ವರದಿಯ ಅಂಕಿ-ಅಂಶಗಳನ್ನು ಬಳಕೆ ಮಾಡಿಕೊಂಡ ಕೇಂದ್ರ ಸರ್ಕಾರಕ್ಕೆ ಒಳಮೀಸಲಾತಿ ಹಂಚಿಕೆ ಮಾಡಲು ಶಿಫಾರಸ್ಸು ಮಾಡಿತು. ವರದಿಯಲ್ಲಿ ಹಲವಾರು ವೈಫಲ್ಯಗಳು ಇದ್ದರೂ ಅದನ್ನು ಅಂಗೀಕರಿಸಲಾಗಿದೆ ಎಂದರು.
ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಜನರು ಜಾತಿಗಣತಿ ಸಂದರ್ಭದಲ್ಲಿ ತಮ್ಮ ಉಪಜಾತಿಯನ್ನು ಹೊಲಯ ಎಂದು ಸ್ಪಷ್ಟವಾಗಿ ನಮೂದಿಸಬೇಕು. ಈ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಮೀಸಲಾತಿ ಸೂಕ್ತ ಸಮುದಾಯಗಳಿಗೆ ದೊರೆಯುವಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.
ಸಭೆಯಲ್ಲಿ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಮಾಜಿ ಶಾಸಕ ಎಸ್.ಬಾಲರಾಜ್, ಗಡಿ ಯಜಮಾನರು, ವಿವಿಧ ಗ್ರಾಮಗಳ ಯಜಮಾನರು, ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಇತರರು ಹಾಜರಿದ್ದರು.
ಜಾತಿ ಹೇಳಲು ಹಿಂಜರಿಯಬೇಡಿ:
ನಾವು ಯಾರಿಗೆ ಹುಟ್ಟಿದ್ದೇವೆ ಮತ್ತು ಯಾವ ಜಾತಿಯಲ್ಲಿ ಹುಟ್ಟಿದ್ದೇವೆ ಎಂಬುದನ್ನು ಹೇಳುವುದಕ್ಕೆ ಯಾವುದೇ ರೀತಿಯಲ್ಲೂ ಹಿಂಜರಿಯಬಾರದು ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. ಪರಿಶಿಷ್ಟ ಜಾತಿಯವನಾಗಿ ಮನೆಯನ್ನು ಬಾಡಿಗೆ ಪಡೆದುಕೊಳ್ಳುವಾಗ ನಾನು ಸಹ ಜಾತಿ ತಾರತಮ್ಯವನ್ನು ಅನುಭವಿಸಿದ್ದೇನೆ. ಇಂತಹ ಸಮಸ್ಯೆಗಳನ್ನು ಹತ್ತಿರದಿಂದ ನೋಡಿದ್ದೇನೆ. ಅದಾಗ್ಯೂ ಎಲ್ಲೂ ಕೂಡ ನನ್ನ ಜಾತಿಯನ್ನು ಹೇಳಿಕೊಳ್ಳಲು ಹಿಂಜರಿದಿಲ್ಲ. ಈ ನಿಟ್ಟಿನಲ್ಲಿ ಒಳಮೀಸಲಾತಿ ಸಂಬಂಧ ಪ್ರಾರಂಭವಾಗುವ ಜಾತಿಜನಗಣತಿಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದವರು ಉಪಜಾತಿಯನ್ನು ಹೊಲಯ ಎಂದು ಪರಿಗಣಿಸಬೇಕು. ಈ ಮೂಲಕ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಇನ್ನಿತರೆ ಸವಲತ್ತುಗಳನ್ನು ಪಡೆದುಕೊಳ್ಳು ನಾವೆಲ್ಲರೂ ಒಂದಾಗಬೇಕಿದೆ ಎಂದು ಸಲಹೆ ನೀಡಿದರು.
ಹೆಚ್ಚಿನ ಜಾಗೃತಿ ಮೂಡಿಸಿ:
ಜಾತಿ ಜನಗಣತಿಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದವರು ಉಪಜಾತಿಯನ್ನು ಸ್ಪಷ್ಟವಾಗಿ ನಮೂದಿಸುವಂತೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ತಿಳಿಸಿದರು. ಎಸ್ಸಿ ಪಟ್ಟಿಯಲ್ಲಿರುವ 101 ಜಾತಿಗಳ ಜನಸಂಖ್ಯೆ ಎಷ್ಟು ಎಂಬುದು ಗೊಂದಲವಿದೆ. ಆದಿಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಎಂಬುದು ಗೊಂದಲಕ್ಕೆ ಕಾರಣವಾಗಿದೆ. ಇದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಾಗಮೋಹನ್ ದಾಸ್ ಆಯೋಗವನ್ನು ರಚಿಸಿದೆ. ನಾವು ನಮ್ಮ ಉಪಜಾತಿ ಹೆಸರನ್ನು ನಮೂದಿಸುವ ಮೂಲಕ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳಬಹುದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮುಂಚೂಣಿಯಲ್ಲಿರುವವರು ಜಾತಿ ಗಣತಿಯ ಕುರಿತು ತಿಳುವಳಿಕೆ ನೀಡುವ ಮೂಲಕ ಜನರಲ್ಲಿ ಉಪಜಾತಿಗಳನ್ನು ಕಡ್ಡಾಯವಾಗಿ ಬರೆಸುವಂತೆ ಮನವರಿಕೆ ಮಾಡಬೇಕು ಎಂದರು.
ಮಾದಿಗ ಸಮುದಾಯದ ಸಹೋದರರು ಹೊಲಯ ಸಮುದಾಯದ ವಿರುದ್ಧ ಕೀಳಾಗಿ ಮಾತನಾಡುತ್ತಿದ್ದಾರೆ. ಭಾಸ್ಕರ್ ಪ್ರಸಾದ್ ಮತ್ತು ಅರುಣ್ ಕುಮಾರ್ ಅವರ ಮಾತುಗಳನ್ನು ಖಂಡಿಸುತ್ತೇನೆ. ಜಾತಿಗಣತಿಯಲ್ಲಿ ಉಪಜಾತಿಯನ್ನು ಹೊಲಯ ಎಂದು ನಮೂದಿಸಬೇಕು.
-ವೆಂಕಟರಮಣಸ್ವಾಮಿ (ಪಾಪು), ಹಿರಿಯ ದಲಿತ ಮುಖಂಡ, ಚಾಮರಾಜನಗರ