ಚಿಕ್ಕೋಡಿ: ಗ್ಯಾರಂಟಿ ಯೋಜನೆಗೆ ಸರ್ಕಾರ ಎಸ್ಸಿ, ಎಸ್ಟಿ ಹಣ ದುರ್ಬಳಕೆ ಮಾಡಿಕೊಂಡಿರುವುದನ್ನು ಖಂಡಿಸಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶಕುಮಾರ ನೇತೃತ್ವದಲ್ಲಿ ಉಪಭಾಗಾಧಿಕಾರಿ ಸುಭಾಷ ಸಂಪಗಾಂವಿ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶಕುಮಾರ ಮಾತನಾಡಿ, ಎಸ್ಸಿ, ಎಸ್ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಾದ ಹಣವನ್ನು ಗ್ಯಾರಂಟಿ ಯೋಜನೆಗಾಗಿ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಈ ಕುರಿತು ಎರಡು ವರ್ಷದಿಂದ ವಿರೋಧಿಸುತ್ತ ಬಂದಿದ್ದೇವೆ. ಗ್ಯಾರಂಟಿ ಯೋಜನೆಗಳು ಬುಡಕಟ್ಟು ಉಪಯೋಜನೆ ಭಾಗವಲ್ಲ. ರಾಜ್ಯದಲ್ಲಿ ವಸತಿ ರಹಿತವಾಗಿರುವ ೫ ಲಕ್ಷ ಎಸ್ಸಿ, ಎಸ್ಟಿ ಕುಟುಂಬಗಳಿಗೆ ವಸತಿ ನೀಡಿಲ್ಲ. ಸಮುದಾಯದ ಪ್ರಗತಿಗೆ ಯಾವುದೇ ಯೋಜನೆಯಿಲ್ಲ. ಎಸ್ಸಿ, ಎಸ್ಟಿ ಸಮುದಾಯದ ೭ ಅಭಿವೃದ್ಧಿ ನಿಗಮಗಳಿಗೂ ಸಮರ್ಪಕ ಅನುದಾನ ನೀಡಿಲ್ಲ. ಬರುವ ಬಜೆಟ್ ಅಽವೇಶನದಲ್ಲೂ ಈ ಕುರಿತು ಪ್ರತಿಭಟನೆ ಮಾಡುತ್ತೇವೆ ಎಂದರು.
ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಮಾಜಿ ಶಾಸಕ ಮಹೇಶ ಕುಮಠಳ್ಳಿ, ಶಾಂಭವಿ ಅಶ್ವತ್ಥಪುರ, ರಾಜು ಹರಗನ್ನವರ, ಡಾ. ಕ್ರಾಂತಿ ಕುಮಾರ, ಅನಿಲಕುಮಾರ, ಬಾಬಾಸಾಹೇಬ ಕೆಂಚನ್ನವರ, ಪವನಕುಮಾರ ಮಹಾಜನ್, ಮಹೇಶ ಭಾತೆ, ವಿಜಯಕುಮಾರ ಕೋಠಿವಾಲೆ, ಶಿವಾನಂದ ನವಿನಾಳೆ, ಗುರು ಕುಲಕರ್ಣಿ ಇತರರಿದ್ದರು.