ಚಿತ್ರದುರ್ಗ: ಎಸ್ಸಿ, ಎಸ್ಟಿ ಸಮುದಾಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಗಮನಕ್ಕೆ ತನ್ನಿ. ಆದರೆ, ನಿಖರ ಮಾಹಿತಿ ನೀಡಿದರೆ ಮಾತ್ರ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ ಸಲಹೆ ನೀಡಿದರು.
ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಎಸ್ಸಿ, ಎಸ್ಟಿ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿ, ಠಾಣೆಗೆ ದೂರು ದಾಖಲಿಸಲು ಬಂದ ವೇಳೆ ಪೊಲೀಸರು ಮೀನಾಮೇಷ ಮಾಡುವ, ಅದನ್ನೇನಾದರೂ ಬದಲಿಸುವ, ಸಂಧಾನಕ್ಕೆ ಬಲವಂತ ಮಾಡುವ, ಇನ್ಯಾವುದೇ ರೀತಿಯಲ್ಲಿ ತೊಂದರೆ ನೀಡುತ್ತಿದ್ದರೆ ತಕ್ಷಣ ಗಮನಕ್ಕೆ ತನ್ನಿ ಎಂದು ಕಿವಿಮಾತು ಹೇಳಿದರು.
ಕಳೆದ 15 ವರ್ಷಗಳಿಂದ ಸಾಕಷ್ಟು ಬದಲಾವಣೆ ಆಗಿದೆ. ಪ್ರತಿ ಠಾಣೆಯಲ್ಲೂ ಸಿಸಿಟಿವಿ ಕ್ಯಾಮೆರಾ ಇದೆ. ತೊಂದರೆಗೆ ಒಳಗಾದವರು ಹೇಳಿದಂತೆ ದೂರು ದಾಖಲಿಸಿಕೊಳ್ಳಬೇಕು, ಅನಕ್ಷರಸ್ಥರಾಗಿದ್ದಲ್ಲಿ ಓದಿ ಕೂಡ ತಿಳಿಸಲಾಗುವುದು. ಆದ್ದರಿಂದ ದೂರುದಾರರೇ ಖಾತ್ರಿ ಪಡಿಸಿಕೊಳ್ಳಬೇಕು. ಒತ್ತಡಕ್ಕೆ ಮಣಿಯುವ ಅಗತ್ಯವಿಲ್ಲ ಎಂದರು.
ಜಿಲ್ಲೆಯಲ್ಲಿ ಪದೇ ಪದೆ ಅಟ್ರಾಸಿಟಿ ಪ್ರಕರಣ ಕಂಡು ಬರುವ ಗ್ರಾಮಗಳಿದ್ದರೆ, ಪೊಲೀಸರು ಭೇಟಿ ನೀಡಿ ಪರಿಶೀಲಿಸದಿದ್ದರೆ, ಕ್ರಮವಹಿಸದಿದ್ದರೆ, ವೈಯಕ್ತಿಕ ತೊಂದರೆಗಳಿದ್ದರೂ ನೇರವಾಗಿ ನನ್ನನ್ನು ಭೇಟಿಯಾಗಬಹುದು. ಅಟ್ರಾಸಿಟಿ ಸಂಬಂಧ ಡಿವೈಎಸ್‌ಪಿ ತನಿಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಸರಿಯಾಗಿ ತನಿಖೆ ಆಗದಿದ್ದರೂ ಗಮನಕ್ಕೆ ತರಬಹುದು ಎಂದು ತಿಳಿಸಿದರು.
ದಲಿತ ಸಮುದಾಯದ ಮುಖಂಡ ರಾಜಪ್ಪ ಮಾತನಾಡಿ, ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ದಲಿತರ ಪ್ರವೇಶಕ್ಕೆ ಅವಕಾಶ ನೀಡಲ್ಲ. ಇಂತಹ ಸಮಸ್ಯೆ ಹೆಚ್ಚಾಗಿರುವ ರಾಜ್ಯದ 15 ಜಿಲ್ಲೆಗಳಲ್ಲಿ ದೂರು ದಾಖಲಿಸಿ ವಿಚಾರಣೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಎಂಟು ಕಡೆ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಿದ್ದು, ಅದೇ ರೀತಿ ಚಿತ್ರದುರ್ಗದಲ್ಲೂ ಆಗಬೇಕು ಎಂದು ಒತ್ತಾಯಿಸಿದರು.
ಮುಖಂಡ ದಯಾನಂದ ಮಾತನಾಡಿ, ಹಿರಿಯೂರು ತಾಲೂಕಿನ ಕೆಲವೆಡೆ ಈಗಲೂ ಹೋಟೆಲ್‌ಗಳಲ್ಲಿ ದಲಿತರನ್ನು ನಿರ್ಬಂಧಿಸಲಾಗಿದೆ. ನಮ್ಮವರಿಗೆ ಕ್ಷೌರ ಮಾಡದಂತೆ ಕೆಲ ಸಮುದಾಯಗಳು ಬೆದರಿಕೆ ಹಾಕುತ್ತಿದ್ದಾರೆ. ಈ ಕುರಿತು ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಹೋರಾಟಗಾರ ಅವಿನಾಶ್ ಮಾತನಾಡಿ, 2021ರಲ್ಲಿ ಹಿಂದಿನ ಎಂಎಲ್ಎ ಅವರಿಗೆ ಮೂಲಸೌಕರ್ಯ ಸಂಬಂಧ ಪ್ರಶ್ನಿಸಿದ್ದಕ್ಕೆ ಐವರು ಪೋಲಿಸರು ಸಾಕಷ್ಟು ಕಿರುಕುಳ ನೀಡಿದ್ದು, ಇದರಿಂದ ನೊಂದಿದ್ದೇನೆ. ನನಗೆ ನ್ಯಾಯ ಸಿಗದಿದ್ದಾಗ ಸಮುದಾಯಕ್ಕೆ ಕೊಡಿಸಲು ಹೇಗೆ ಸಾಧ್ಯ. ಆದ್ದರಿಂದ ತೊಂದರೆ ನೀಡಿದ ಪೊಲೀಸರ ವಿರುದ್ಧ ಕೂಡಲೇ ಅಟ್ರಾಸಿಟಿ ಪ್ರಕರಣ ದಾಖಲಿಸಬೇಕು ಎಂದು ಕೋರಿದರು.
ಕರುನಾಡ ವಿಜಯಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಈಚೆಗೆ ನಡೆದ ಕವಾಡಿಗರಹಟ್ಟಿ ಪ್ರಕರಣ ಸಾಂಕ್ರಾಮಿಕ ರೋಗವೆಂಬಂತೆ ಬಿಂಬಿಸಿ ಮುಚ್ಚಿ ಹಾಕುವ ಯತ್ನ ನಡೆದಿದ್ದು, ನ್ಯಾಯ ಸಿಗುವವರೆಗೆ ಹೋರಾಡುತ್ತೇನೆ. ಎಸ್‌ಪಿ ಅವರು ಸ್ವಯಂ ದೂರು ದಾಖಲಿಸಿಕೊಂಡು ಪ್ರಕರಣವನ್ನು ಮರು ಪರಿಶೀಲನೆಗೆ ಒಳಪಡಿಸಿ, ಸೂಕ್ತ ತನಿಖೆ ಕೈಗೊಂಡು ನೊಂದವರಿಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯ ನರಸಿಂಹರಾಜು ಮಾತನಾಡಿ, ದಲಿತ ಸಮುದಾಯಗಳು ವಾಸಿಸುವ ಕಾಲನಿಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ಕೆಲಸ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಕ್ಷುಲಕ ಕಾರಣಕ್ಕೆ ಆರಂಭವಾಗುವ ಜಗಳ ಅಟ್ರಾಸಿಟಿ ಪ್ರಕರಣವಾಗಿ ದಾಖಲಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಿಸಿದ ಎಲ್ಲಾ ಇಲಾಖೆ ಅಧಿಕಾರಿಗಳ ಸಭೆ ಕರೆದು ಇತ್ಯರ್ಥಪಡಿಸಲು ಮುಂದಾಗಬೇಕು ಎಂದು ಗಮನಕ್ಕೆ ತಂದರು.
ಮುಖಂಡ ಡಿ.ಎನ್.ಮೈಲಾರಪ್ಪ ಮಾತನಾಡಿ, ಕೆಲ ಗ್ರಾಮಗಳ ಮನೆಗಳು, ಅಂಗಡಿಗಳಲ್ಲೂ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಸಮುದಾಯದ ಯುವಕರು ಹಾಳಾಗುತ್ತಿದ್ದಾರೆ. ಅಷ್ಟೇ ಅಲ್ಲ, ಮಹಿಳೆಯರು ದಾಸರಾಗುತ್ತಿದ್ದು, ಅನಾರೋಗ್ಯ ಸಮಸ್ಯೆಗೆ ಸಿಲುಕಿ ನರಳುತ್ತಿದ್ದಾರೆ. ಇದು ಸಮುದಾಯ, ಕುಟುಂಬಗಳನ್ನು ಇನ್ನಷ್ಟು ಆರ್ಥಿಕ ಸಮಸ್ಯೆಗೆ ಸಿಲುಕಿಸಲಿದೆ. ಇದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹೆಚ್ಚುವರಿ ಎಸ್‌ಪಿ ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ, ಎಸ್ಸಿ-ಎಸ್ಟಿ ಸಮುದಾಯಗಳ ನೂರಾರು ಮುಖಂಡರು ಇದ್ದರು.