ಕೊಳ್ಳೇಗಾಲ: ಮದ್ಯ ಅಕ್ರಮ ಮಾರಾಟ, ಗಾಂಜಾ ಸೇವನೆ, ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ, ಪ್ರಮುಖ ರಸ್ತೆಗಳಲ್ಲಿ ಬಾರಿ ವಾಹನಗಳ ನಿಲುಗಡೆ, ಅಪಘಾತ ಹೆಚ್ಚಳ, ಕೆಎಸ್‌ಆರ್‌ಟಿಸಿ ಬಸ್‌ಗಳ ಅಜಾಗರೂಕತೆ, ವ್ಹೀಲಿಂಗ್, ರೋಡ್ ರೋಮಿಯೋಗಳ ಹಾವಳಿ, ಅತಿವೇಗ ಚಾಲನೆ... ಹೀಗೆ ಹಲವು ಸಮಸ್ಯೆಗಳ ಬಗ್ಗೆ ಎಸ್ಸಿ-ಎಸ್ಟಿ ಜನಾಂಗದ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರು ದೂರಿನ ಸುರಿಮಳೆಗೈದರು.
ಸಿಪಿಐ ಶಿವಮಾದಯ್ಯ ನೇತೃತ್ವದಲ್ಲಿ ಗುರುವಾರ ಪಟ್ಟಣ ಪೊಲೀಸ್ ಠಾಣೆಯ ಆವರಣದಲ್ಲಿ ಆಯೋಜಿಸಿದ್ದ ಎಸ್ಸಿ-ಎಸ್ಟಿ ಜನಾಂಗದ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರು ಸಮಸ್ಯೆಗಳನ್ನು ವಿವರಿಸಿದರು. ಭೀಮನಗರದ ನಿವಾಸಿ ರಾಜಶೇಖರ್ ಮಾತನಾಡಿ, ಪಟ್ಟಣದ ಅಯ್ಯಂಗಾರ್ ಬೇಕರಿ, ಎಸ್‌ವಿಕೆ ಕಾಲೇಜು ಬಳಿ ರೋಡ್ ರೋಮಿಯೋಗಳ ಹಾವಳಿ ಹೆಚ್ಚಾಗಿದೆ. ಕಾಲೇಜು ಬಿಡುವ ಸಮಯಕ್ಕೆ ಬೈಕ್‌ಗಳಲ್ಲಿ ವೀಲಿಂಗ್ ಮಾಡಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ಬಹಳ ತೊಂದರೆ ಆಗುತ್ತಿದೆ ಎಂದರು.
ಭೀಮನಗರದ ಯಜಮಾನ ಸನತ್ ಕುಮಾರ್ ಮಾತನಾಡಿ, ಬೈಪಾಸ್ ರಸ್ತೆ ಬಳಿ ರಾತ್ರಿ ಮದ್ಯ ಸೇವಿಸಿ ಕಿಕ್ಕೇರಿಸಿಕೊಳ್ಳುತ್ತಿದ್ದಾರೆ. ಗಾಂಜಾ ಸೇವನೆಯು ನಡೆಯುತ್ತಿದೆ ಎಂದರು. ಬಸ್ತೀಪುರ ನಿವಾಸಿ ಶಂಕರ್ ಮಾತನಾಡಿ, ನಮ್ಮ ಊರಿನ ಶನೇಶ್ವರ ದೇವಾಲಯ ಹಿಂಭಾಗ ಪ್ರದೇಶದಲ್ಲಿ ಯುವಕರು ಗಾಂಜಾ ಸೇವನೆ ಮಾಡುತ್ತಿದ್ದಾರೆ. ಈ ಚಟಕ್ಕೆ ಯುವ ಪೀಳಿಗೆ ಬಲಿಯಾಗುತ್ತಿದೆ ಎಂದು ದೂರಿದರು. ಸೋಮಣ್ಣ ಮಾತನಾಡಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಪಟ್ಟಣ ವ್ಯಾಪ್ತಿಯಲ್ಲಿ ವೇಗವಾಗಿ ಸಂಚರಿಸಿ ಸಾವು-ನೋವುಗಳು ಸಂಭವಿಸುತ್ತದೆ ಎಂದರು.
ಮುಖಂಡ ನಟರಾಜ್ ಮಾಳಿಗೆ ಮಾತನಾಡಿ, ನಾಲ್ಕೈದು ವರ್ಷಗಳಿಂದ ಶಕ್ತಿ ವೈನ್ಸ್ ಸ್ಥಳಾಂತರ ಮಾಡಲು ಎಸ್ಸಿ-ಎಸ್ಟಿ ಸಭೆಗಳಲ್ಲಿ ಒತ್ತಾಯಿಸಲಾಗುತ್ತಿದೆ. ಪಕ್ಕದಲ್ಲಿ ಕಾಲೇಜು, ಶಾಲೆ, ಹಾಸ್ಟೆಲ್‌ಗಳಿವೆ. ಆದರೂ ನಮ್ಮ ದೂರು ದೂರಾಗಿಯೇ ಉಳಿದಿದೆ. ಯಾವುದೇ ಕ್ರಮವಾಗಿಲ್ಲ ಎಂದು ಅಸಮಾಧನ ಹೊರ ಹಾಕಿದ್ದಲ್ಲದೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಹೋರಾಟ ನಡೆಯುತ್ತದೆ ಎಂದರು.
ಬಾಪುನಗರ ನಿವಾಸಿ ಸಿದ್ದರಾಜು ಮತ್ತು ಆನಂದ್ ಮಾತನಾಡಿ, ನಮ್ಮ ಬಡಾವಣೆಯಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ಅಪಘಾತ ಸಂಖ್ಯೆ ಹೆಚ್ಚಾಗುತ್ತಿದೆ. ರಸ್ತೆ ದಾಟುವಾಗ ಸಾವು-ನೋವು ಸಂಭವಿಸುತ್ತಿದೆ. ಇದರ ಕಡಿವಾಣಕ್ಕೆ ವೈಜ್ಞಾನಿಕವಾದ ರಸ್ತೆ ಹುಬ್ಬುಗಳು, ಬ್ಯಾರಿಗೇಡ್ ಅಳವಿಡಸಬೇಕು ಎಂದು ಆಗ್ರಹಿಸಿದರು.
ಸನ್ನಡತೆ ಗುರುತಿಸಿ ರೌಡಿ ಶೀಟರ್ ಪಟ್ಟಿಯಿಂದ ಕೈ ಬಿಡಿ:
ಭೀಮನಗರದಲ್ಲಿ ಹಲವು ಜನರಿಗೆ ರೌಡಿ ಶೀಟರ್ ಪಟ್ಟಿ ತೆರೆಯಲಾಗಿದೆ. ಇದರಲ್ಲಿ ಗಾರೆಕೆಲಸ, ಬಣ್ಣದ ಕೆಲಸ, ಇನ್ನಿತರ ಕೂಲಿ ಕೆಲಸಗಳನ್ನು ಮಾಡುವವರಿದ್ದರೆ. 60 ವರ್ಷ ಮೇಲ್ಪಟ್ಟವರಿದ್ದಾರೆ. ಪೊಲೀಸ್ ಇಲಾಖೆಗೆ ಮನವಿ ಏನೆಂದರೆ ಅವರು ಇನ್ನು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರಾ ಅಥವಾ ಸನ್ನತೆಯಲ್ಲಿರುವರೆ ಎಂಬುದನ್ನು ಪರಿಶೀಲಿಸಬೇಕು. ಒಳ್ಳೆಯ ನಡತೆಯಲ್ಲಿವವರನ್ನು ರೌಡಿ ಶೀಟರ್ ಪಟ್ಟಿಯಿಂದ ತೆಗೆಯಬೇಕು. ಒಳ್ಳೆಯ ಜೀವನ ನಡೆಸಲು ಇಲಾಖೆ ತಿಳಿ ಹೇಳಬೇಕು ಎಂದರು.
ಮುಖಂಡ ಜಗದೀಶ್ ಮಾತನಾಡಿ, ಅಂಬೇಡ್ಕರ್ ಹಾಗೂ ರಾಜ್‌ಕುಮಾರ್ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡಲಾಗುತ್ತಿದೆ ಎಂದರು. ದಿಲೀಪ್ ಸಿದ್ದಪ್ಪಾಜಿ ಮಾತನಾಡಿ, ಎಂಜಿಎಸ್‌ವಿ ಎದುರಿನ 209 ರಸ್ತೆಯಲ್ಲಿ ಪ್ರತಿನಿತ್ಯ ಬೆಳಗ್ಗಿನಿಂದ ಸಂಜೆವರೆಗೂ ಫುಟ್‌ಪಾತ್ ಅಕ್ರಮಿಸಿಕೊಂಡು ಭಾರಿ ವಾಹನಗಳು ನಿಲ್ಲುತ್ತದೆ. ಇದ್ದರಿಂದ ಪಾದಚಾರಿಗಳಿಗೆ ಅಪಘಾತ ಭೀತಿ ಎದುರಾಗಿದೆ ಎಂದು ದೂರಿದರು.
ಉಪವಿಭಾಗ ಮಟ್ಟದಲ್ಲಿ ಸಭೆ ಮಾಡಿ: ಎಸ್ಸಿ-ಎಸ್ಟಿ ಸಭೆಗಳು ಪ್ರಾಮುಖ್ಯತೆ ಪಡೆದು ಕೊಳ್ಳಬೇಕೆಂದರೆ ಉನ್ನತ ಉದ್ದೇಯಲ್ಲಿರುವ ಅಧಿಕಾರಿಗಳು ಸಭೆಯಲ್ಲಿ ಇರಬೇಕು. ಈ ವೇಳೆ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ತಹಸೀಲ್ದಾರ್, ಉಪವಿಭಾಗಾಧಿಕಾರಿ, ಡಿವೈಎಸ್ಪಿ ಉಪಸ್ಥಿತಿಯಲ್ಲಿ ಉಪವಿಭಾಗದ ಮಟ್ಟದ ಎಸ್ಸಿ-ಎಸ್ಟಿ ಸಭೆ ಕರಿಯಬೇಕು ಎಂದು ಸಭೆಯಲ್ಲಿ ಮುಖಂಡರು ಆಗ್ರಹಿಸಿದರು.
ಮೂಲಾಜಿಲ್ಲದೆ ಕ್ರಮವಹಿಸುತ್ತಿದ್ದೇವೆ: ಸಿಪಿಐ ಶಿವಮಾದಯ್ಯ ಮಾತನಾಡಿ, ಗಾಂಜಾ ಹಾಗೂ ಮದ್ಯ ಅಕ್ರಮ ಮಾರಾಟ ಬಗ್ಗೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತಿದ್ದೇವೆ. ಪ್ರಕರಣಗಳು ದಾಖಲಾಗುತ್ತಿದೆ. ಹೆದ್ದಾರಿಯಲ್ಲಿ ನಿಲ್ಲುವ ವಾಹನಗಳ ಬಗ್ಗೆ ಕ್ರಮವಹಿಸಲಾಗುವುದು. ಕೆಎಸ್‌ಆರ್‌ಟಿಸಿ ಚಾಲಕರಿಗೆ ಸಭೆ ನಡೆಸಲಾಗುವುದು. ಅಪಘಾತ ಸ್ಥಳದಲ್ಲಿ ಬ್ಯಾರಿಗೇಡ್ ಹಾಕಲಾಗುತ್ತದೆ. ಎಲ್ಲ ದೂರನ್ನು ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದರು.